ಉಪ್ಪಿನಂಗಡಿ: ಕೋರಂ ಕೊರತೆಯಿಂದಾಗಿ ನೆಲ್ಯಾಡಿ ಗ್ರಾಮ ಪಂಚಾಯತ್‌ನ ನೂತನ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯು ಮುಂದೂಡಿಕೆಯಾಗಿದೆ.
ಗ್ರಾ. ಪಂ. ಅಧ್ಯಕ್ಷೆ ಚೇತನಾ ಅವರ ಅಧ್ಯಕ್ಷತೆಯಲ್ಲಿ ಗ್ರಾ. ಪಂ. ಸಭಾಂಗಣದಲ್ಲಿ ಸಭೆ ಆರಂಭಗೊಂಡಿತು. ಅಧ್ಯಕ್ಷೆ ಚೇತನಾ, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಪೂಜಾರಿ, ಆನಂದ ಪಿಲವೂರು, ಶ್ರೀಲತಾ, ಜಯಂತಿ ಸೇರಿ ಆರು ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದು ಉಪಾಧ್ಯಕ್ಷ ಅಬ್ದುಲ್ ಜಬ್ಟಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಮಹಮ್ಮದ್ ಇಕ್ಬಾಲ್, ರೇಷ್ಮಾಶಶಿ, ಉಷಾ ಜೋಯಿ ಜಯಲಕ್ಷ್ಮೀ ಪ್ರಸಾದ್, ಯಾಕೂಬ್ ಯಾನೆ ಸಲಾಂ ಬಿಲಾಲ್, ಪುಷ್ಪಾ ಪಡುಬೆಟ್ಟು ಸಹಿತ 8 ಮಂದಿ ಸದಸ್ಯರು ಸಭೆಗೆ ಗೈರು ಹಾಜರಿಯಾಗಿದ್ದರು.
ಸಭೆ ನಡೆಸಲು ಕೋರಂ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಅಧ್ಯಕ್ಷರು ಆರಂಭದಲ್ಲಿ ಅರ್ಧ ತಾಸು ಸಭೆ ಮುಂದೂಡಿದರು. ಬಳಿಕವೂ ಸಭೆ ನಡೆಸಲು ಕೋರಂ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಸಭೆ ಮುಂದೂಡಿದ ಅಧ್ಯಕ್ಷರು ಮಾ. 26ಕ್ಕೆ ಮತ್ತೆ ಸಭೆ ನಡೆಸುವುದಾಗಿ ಹೇಳಿದರು. ಪಿಡಿಒ ಮಂಜುಳ ಎನ್. ಸ್ವಾಗತಿಸಿದರು.
ಅಡ್ಡ ಮತದಾನದ ಪರಿಣಾಮ
14 ಸದಸ್ಯ ಬಲದ ನೆಲ್ಯಾಡಿ ಗ್ರಾ.ಪಂ.ನಲ್ಲಿ 8 ಕಾಂಗ್ರೆಸ್ ಬೆಂಬಲಿತ ಹಾಗೂ 6 ಬಿಜೆಪಿ ಬೆಂಬಲಿತ ಸದಸ್ಯರು ಚುನಾಯಿತರಾಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರೋರ್ವರು ಅಡ್ಡ ಮತದಾನ ಮಾಡಿದ್ದರಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಬ್ಬರು ಸಮಾನ ಮತ ಪಡೆದುಕೊಂಡಿದ್ದರು. ಬಳಿಕ ಚೀಟಿ ಎತ್ತುವಿಕೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಚೇತನಾ ಅವರು ಆಯ್ಕೆ ಗೊಂಡಿದ್ದರು. ಬಹುಮತವಿದ್ದರೂ ಅಧ್ಯಕ್ಷ ಸ್ಥಾನ ವಂಚಿತಗೊಂಡಿರುವ ಹಿನ್ನೆ°ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಸಭೆಗೆ ಗೈರು ಹಾಜರಿಯಾಗಿದ್ದಾರೆ ಎಂದು ಹೇಳಲಾಗಿದೆ.