ಹುಣಸೂರು: ಕುಡಿತ ಮತ್ತು ಅಮಲಿನ ಪದಾರ್ಥಗಳ ಸೇವನೆಯು ಕುಟುಂಬಗಳನ್ನು ಹಾಳುಮಾಡುವ ದೊಡ್ಡ ಕಂಟಕ ಪ್ರಾಯವಾಗಿದ್ದು, ಮಕ್ಕಳ ಹಾಗೂ ಕುಟುಂಬದ ಮಹಿಳೆಯ ಮೇಲೂ ಗಂಭೀರ ಪರಿಣಾಮ ಬೀರಲಿದ್ದು, ಇನ್ನಾದರೂ ಕುಡಿತದ ಚಟದಿಂದ ಹೊರಬನ್ನಿ ಎಂದು ತಾಪಂ ಇಒ ಕೃಷ್ಣಕುಮಾರ್ ಮನವಿ ಮಾಡಿದರು.
ತಾಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ ಆಶ್ರಮಶಾಲೆಯಲ್ಲಿ ಶ್ರೀ ಕ್ಷೇತ್ರ ಧಗ್ರಾಯೋ ಯಿಂದ ಆಯೋಜಿಸಿದ್ದ ರಾಜ್ಯದ 1060ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿ, ಕುಡಿತದ ಚಟ ಹೊಂದಿರುವ ವ್ಯಕ್ತಿಯನ್ನು ಸಮಾಜವು ನಿಷ್ಕೃಷ್ಟತೆಯಿಂದ ಕಾಣುತ್ತದೆ. ಅದೆಷ್ಟೋ ಶ್ರೀಮಂತ ಕುಟುಂಬಗಳು ಅದರಲ್ಲೂ ಐಷಾರಾಮಿ ಜೀವನಕ್ಕೆ ಮಾರು ಹೋಗಿರುವ ಸುಕ್ಷಿತ ಮಹಿಳೆಯರು ಸಹ ಕುಡಿತದ ಚಟಕ್ಕೆ ಬಲಿಯಾಗಿರುವುದನ್ನು ಕಾಣಬಹುದು ಎಂದರು.
ಮುಖ್ಯವಾಗಿ ಈ ತಾಲೂಕಿನಲ್ಲಿ ಆದಿವಾಸಿಗಳು ಮದ್ಯಸೇವನೆಯ ಅಮಲಿಗೆ ಬಲಿಯಾಗುತ್ತಿದ್ದಾರೆ, ಇವರ ಮಕ್ಕಳ ಬದುಕು ಮೂರಾಬಟ್ಟೆಯಾಗಿ ರುವುದನ್ನು ಕಾಣುತಿದ್ದೇವೆ. ಹೀಗಾಗಿ ಇಲ್ಲಿನ ಶಿಬಿರಾರ್ಥಿಗಳು ಮದ್ಯ ಸೇವನೆಯನ್ನು ತ್ಯಜಿಸಿ ಕುಟುಂಬದ ಕಣ್ಣಾಗಿರೆಂದು ಆಶಿಸಿದರು.
ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಮಾತನಾಡಿ, ಬಹುತೇಕ ಕುಟುಂಬಗಳ ಗಲಾಟೆಗೆ ಕುಡಿತದ ಚಟವೇ ಕಾರಣವಾಗಿರುವುದನ್ನು ಕಂಡುಕೊಂಡಿದ್ದೇವೆ. ಮಕ್ಕಳು ಶಿಕ್ಷಣದಿಂದ ವಂಚಿತರಾದರೆ, ಮನೆ ಮಂದಿ ಊಟಕ್ಕೂ ಪರದಾಡುವ ಪರಿಸ್ಥಿತಿ ನೋಡಿದ್ದೇವೆ, ಅಲ್ಲದೆ ಇದೇ ಚಟದಿಂದ ಆಸ್ತಿ- ಪಾಸ್ತಿ ಮಾರಿಕೊಂಡು ಬಿಕಾರಿಯಾಗಿರುವ ಕುಟುಂಬಗಳನ್ನು ಈ ಸಮಾಜ ಕಂಡಿದೆ ಆದ್ದರಿಂದ ಕುಡಿತದಿಂದ ಹೊರಬನ್ನಿ ಎಂದು ಹೇಳಿದರು.
ಶಿಬಿರದ ಸಂಚಾಲಕಿ ಯಶೋಧಾಶೆಟ್ಟಿ ಮಾತನಾಡಿ, ತಾಲೂಕಿನ ಬಿಳಿಕೆರೆ, ಗಾವಡಗೆರೆ, ಶೆಟ್ಟಹಳ್ಳಿ ಹಾಡಿಗಳಲ್ಲಿ ಈಗಾಗಲೇ ಶಿಬಿರ ಆಯೋಜಿಸಿ 400ಕ್ಕೂ ಹೆಚ್ಚು ಮಂದಿಯನ್ನು ಸಾರ್ವಜನಿಕರ ಸಹಕಾರದಿಂದ ಮದ್ಯದ ಚಟ, ಅಮಲಿನ ಪದಾರ್ಥಕ್ಕೆ ದಾಸರಾಗಿದ್ದವನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಶ್ರಮ ಹಾಕಿದ್ದೇವೆ ಎಂದರು.
ಸಮಿತಿ ಅಧ್ಯಕ್ಷ ವಿ.ಪಿ.ಕುಮಾರ್, ಗೌರವಾಧ್ಯಕ್ಷ ಬೀರಪ್ಪ, ದೊಡ್ಡಹೆಜೂjರು ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಶಿಬಿರಾಧಿಕಾರಿ ನಂದಕುಮಾರ್ ಮೇಲ್ವಿಚಾರಕ ಸಂತೋಷ್ ಹಾಜರಿದ್ದರು.