ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಪೊವಾಯಿ ಎಸ್. ಎಂ. ಶೆಟ್ಟಿ ಇಂಟರ್‌ನ್ಯಾಷನಲ್ ಶಾಲೆ ಮತ್ತು ಜೂನಿಯರ್ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ಸಾಯಿ ಬಗೋಡಾ ಆದಿವಾಸಿ ಜನಾಂಗದ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಬಂಟರ ಸಂಘ ಎಸ್. ಎಂ. ಶೆಟ್ಟಿ ವಿದ್ಯಾಸಂಕುಲದ ಕ್ರೀಡಾ ಮೈದಾನದಲ್ಲಿ ಜರಗಿದ ಈ ಕ್ರೀಡಾಕೂಟದಲ್ಲಿ ಆದಿವಾಸಿ ಜನಾಂಗದ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಬಾಲ್ಯ ಜಗತ್ತಿನ ಸಂತಸದ ಕ್ಷಣವನ್ನು ಹಂಚಿಕೊಂಡರು. ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಝಡ್ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಎನ್. ಡಿ. ರೆಡ್ಡಿ, ಪೊವಾಯಿ ಪೊಲೀಸ್ ಠಾಣೆಯ ಸೀನಿಯರ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ಅನಿಲ್ ಸೊಪಾಲೆ ಅವರು ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಕ್ಕಳಿಗೆ ಶುಭ ಹಾರೈಸಿದರು.
ಸಂಘದ ಎಸ್. ಎಂ. ಶೆಟ್ಟಿ ಇಂಟರ್‌ನ್ಯಾಷನಲ್ ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ಡಾ| ಸಬಿನಾ ಕೇಶ್ವಾನಿ, ಪರಿಸರವಾದಿ ಎಲ್ಸಿ ಗಾಬ್ರಿಯಲ್, ಧಾನ್ ಅಮೃತ ಶಿಕ್ಷಣ ಪ್ರಸಾರಕ ಮಂಡಳಿಯ ಸಂಸ್ಥಾಪಕ ರಮೇಶ್ ದೇವೆÅ ಅವರು ಉಪಸ್ಥಿತರಿದ್ದರು.
ಕ್ರೀಡೋತ್ಸವದ ಪ್ರದಾನ ಪ್ರಾಯೋಜಕರಾಗಿ ಪೊವಾಯಿ ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಪದಾಧಿಕಾರಿಗಳಾದ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ, ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ, ಬಂಟರ ಸಂಘದ ನೂತನ ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ ಅವರು ಸಹಕರಿಸಿ, ವಿದ್ಯಾರ್ಥಿಗಳಿಗೆ ಜೆರ್ಸಿ, ಕ್ಯಾಪ್, ಶ್ಯೂಸ್ ಹಾಗೂ ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು.
ಸೃಜನಶೀಲತೆ, ಚುಟುವಟಿಕೆ ಹಾಗೂ ಸೇವಾ ಸಮನ್ವಯಕಿ ಅನಾಮಿಕಾ ಶರ್ಮಾ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮವು ಜರಗಿತು. ಆದಿವಾಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಆದಿವಾಸಿ ಗೀತೆ, ನೃತ್ಯ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಮುಖ್ಯ ಅತಿಥಿ ಪೊಲೀಸ್ ಉಪಾಯುಕ್ತ ಎನ್. ಡಿ. ರೆಡ್ಡಿ ಅವರು ಮಾತನಾಡಿ, ಬಂಟರ ಸಂಘದ ಪೊವಾಯಿ ಶಿಕ್ಷಣ ಸಮಿತಿಯ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯು ಆದಿವಾಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದೈಹಿಕ ತರಬೇತಿ ಶಿಕ್ಷಕಿಯರಾದ ಸುಪ್ರಿಯಾ ಬಾಗೂಲ್, ಗಾಯತ್ರಿ ಬಾನು, ಕ್ರೀಡಾಕೂಟದ ಯಶಸ್ಸಿಗಾಗಿ ಸಹಕರಿಸಿದರು.