Advertisement

123 ವರ್ಷಗಳ ಸಂಭ್ರಮದಲ್ಲಿ ಆದಿಉಡುಪಿ ಕನ್ನಡ ಶಾಲೆ

01:06 PM Nov 09, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಉಡುಪಿ: ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸ್ಥಾಪನೆಯಾದ ಆದಿ ಉಡುಪಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗೆ ಇದೀಗ 123 ವರ್ಷಗಳ ಸಂಭ್ರಮ.

ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. 1896ರಲ್ಲಿ ಆದಿ ಉಡುಪಿಯಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಶಾಲೆಗಳು ಇರಲಿಲ್ಲ. ಕೊಡವೂರು, ಮೂಡುಬೆಟ್ಟು, ಪಂದುಬೆಟ್ಟು, ಅಂಬಲಪಾಡಿ, ಬನ್ನಂಜೆ ಸೇರಿದಂತೆ ವಿವಿಧ ಪ್ರದೇಶಗಳ ಮಕ್ಕಳು ಶಿಕ್ಷಣ ನೀಡುವ ಉದ್ದೇಶದಿಂದ ಮಲ್ಪೆಯ ರಾಮಚಂದ್ರ ಶಾನುಭಾಗ್‌ ಅವರು ಈ ಶಾಲೆಯನ್ನು ಸ್ಥಾಪನೆ ಮಾಡಿದರು.

ಕೋಳಿಗರಿಯಲ್ಲಿ ಅಕ್ಷರಾಭ್ಯಾಸ
ರಾಮಚಂದ್ರ ಶಾನುಭಾಗ್‌ ಅವರು ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ 1902ರ ವರೆಗೆ ಸೇವೆ ಸಲ್ಲಿಸಿದರು. ಕೇವಲ ಇಬ್ಬರು ಶಿಕ್ಷಕರು ಹಾಗೂ 15 ಮಂದಿ ವಿದ್ಯಾರ್ಥಿಗಳಿಂದ ಶಾಲೆ ಪ್ರಾರಂಭಿಸಲಾಗಿತ್ತು. ಶಾನುಭಾಗ್‌ ಅವರು ಅಂದಿನ ಕಾಲದಲ್ಲಿ ಸಾಲ ಮಾಡಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದರು.

ವಿದ್ಯಾರ್ಥಿಗಳಿಗೆ ಕರಿ ಸ್ಲೇಟ್‌ ಬದಲಿಗೆ ಹಸಿ ಮಣ್ಣಿನಲ್ಲಿ ಕೋಳಿ ಗರಿಯಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು.ಇದು ಅಂದಿನ ವಿದ್ಯಾರ್ಥಿಗಳ ಪೋಷಕರಿಗೂ ಆರ್ಥಿಕ ಹೊರೆ ಕಡಿಮೆ ಮಾಡಿಸಿತ್ತು.

Advertisement

1903ರಲ್ಲಿ ಶಾಲೆ ಹಸ್ತಾಂತರ
ಶಾನುಭಾಗ್‌ ಅವರಿಗೆ ಶಾಲೆ ನಿರ್ವಹಣೆ ಸಾಧ್ಯವಾಗದೆ 1903ರಲ್ಲಿ ನೆರೆಮನೆಯ ಟಿ. ಸೀತಾರಾಮಯ್ಯ ಅವರಿಗೆ ಶಾಲೆಯನ್ನು ಹಸ್ತಾಂತರಿಸಿದರು. ಆದಿಉಡುಪಿ ಶಾಲೆಗೆ 1930ರಲ್ಲಿ ಬ್ರಿಟಿಷ್‌ ಸರಕಾರದ ಮನ್ನಣೆ ದೊರಕಿತು. ಸೀತಾರಾಮಯ್ಯ ಮತ್ತು ಅವರ ಪುತ್ರ ಶ್ರೀನಿವಾಸ್‌ ರಾವ್‌ ಇಬ್ಬರೂ ಮುಖ್ಯ ಶಿಕ್ಷಕರಾಗಿ, ಸಂಚಾಲಕರಾಗಿ ಸೇವೆ ಸಲ್ಲಿಸಿದರು. ಶ್ರೀನಿವಾಸ ರಾವ್‌ ಅವರಿಗೆ 1975ರಲ್ಲಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ದೊರಕಿತ್ತು. ಈಗ ಮೂರನೆಯ ಪೀಳಿಗೆಯ ಟಿ.ಕೆ. ಗಣೇಶ್‌ ಸಂಚಾಲಕರು.

ಹುಲ್ಲು ಮಾಡು, 10 ರೂ. ವೇತನ
ಒಂದು ಹುಲ್ಲು ಮಾಡಿನ ಸಣ್ಣ ಕಟ್ಟಡದಲ್ಲಿ ಶಾಲೆ ಆರಂಭಗೊಂಡಿತ್ತು. 1903ರಲ್ಲಿ ಶಿಕ್ಷಕರಿಗೆ ತಿಂಗಳಿಗೆ 8-10 ರೂ. ವೇತನ ನೀಡಲಾಗುತ್ತಿತ್ತು. ಇಲ್ಲಿನ ಶಿಕ್ಷಕರು ಸಂಬಳಕ್ಕಿಂತ ಸೇವಾಸಕ್ತಿಯಿಂದ ಕಾರ್ಯನಿರ್ವಹಿಸಿದ/ ಕಾರ್ಯನಿರ್ವಹಿಸುತ್ತಿರುವ ಕಾರಣ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿಯ ಈ ಕಾಲಘಟ್ಟದಲ್ಲಿಯೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ನ್ಯಾಯ-ಧರ್ಮಕರ್ತರನ್ನು ನೀಡಿದ ಕೀರ್ತಿ
ಈ ಶಾಲೆಯಲ್ಲಿ ಕಲಿತವರು ಇಂದು ದೇಶ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದ ನ್ಯಾ|ಮೂ| ಜಗನ್ನಾಥ ಶೆಟ್ಟಿ, ಗಂಗೋತ್ರಿಯಲ್ಲಿ 9 ವರ್ಷ ಕಠಿನ ತಪಸ್ಸು ಮಾಡಿದ ಪೇಜಾವರ ಶ್ರೀಗಳ ಶಿಷ್ಯೆ, ಈಗ ಹರಿದ್ವಾರದಲ್ಲಿರುವ ಸುಭದ್ರಾ ಮಾತಾಜಿ (ಇದೇ ಶಾಲೆಯ ಶಿಕ್ಷಕರಾಗಿದ್ದ ಶೀನಪ್ಪ ಶೆಟ್ಟಿಯವರ ಪುತ್ರಿ ವಾರಿಜಾಕ್ಷಿ), ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಯಾಗಿದ್ದ ಅಣ್ಣಾಜಿ ಬಲ್ಲಾಳ್‌, ಮಾಜಿ ಪ್ರಧಾನಿ ದಿ| ಅಟಲ್‌ ಜೀ ಅವರ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ ಪಿ.ಜಯಾನಂದ, ಹಿರಿಯ ಕಲಾವಿದ ಪಿ.ಎನ್‌.ಆಚಾರ್ಯ ಪ್ರಮುಖರು.

ಶಾಲೆಯಲ್ಲಿ ಗುರುಗಳು ಕಲಿಸಿದ ವಿದ್ಯೆ ಹಾಗೂ ಸಂಸ್ಕಾರದಿಂದ ಇಂದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಂಡಿದ್ದೇವೆ. ಶತಮಾನದ ಇತಿಹಾಸವಿರುವ ಶಾಲೆಯಲ್ಲಿ ಕಲಿತಿರುವುದು ಹೆಮ್ಮೆ.
– ವಿಶು ಶೆಟ್ಟಿ ಅಂಬಲಪಾಡಿ,
ಹಳೆವಿದ್ಯಾರ್ಥಿ

ಆದಿ ಉಡುಪಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಕಂಪ್ಯೂಟರ್‌, ಸ್ಮಾರ್ಟ್‌ ಕ್ಲಾಸ್‌, ನ್ಪೋಕನ್‌ ಇಂಗ್ಲೀಷ್‌ ಸೇರಿದಂತೆ ವಿವಿಧ ತರಗತಿಗಳನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಲಾಗುತ್ತಿದೆ.
-ಉಷಾ ಕೆ.,
ಮುಖ್ಯೋಪಾಧ್ಯಾಯಿನಿ, ಆದಿ ಉಡುಪಿ ಶಾಲೆ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next