ಹೂಗ್ಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಕಾರ್ಯಕರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭಾನುವಾರ ಜಾಂಗೈಪರದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿರುವ ಯೋಗಿ, ಜಮ್ಮು ಕಾಶ್ಮಿರದಲ್ಲಿದ್ದ ಗೂಂಡಾಗಿರಿ ಪದ್ಧತಿ ಪಶ್ಚಿಮ ಬಂಗಾಳದಲ್ಲಿಯೂ ಇದೆ. ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿ ಗೂಂಡಾಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಗೂಂಡಾಗಿರಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕಾಶ್ಮೀರದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಆದರೆ, ಇಂದು ಅಲ್ಲಿ ಭಯೋತ್ಪಾದನೆ ಮಾಯವಾಗಿದೆ. ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿಯ ಗಾಳಿ ಬೀಸಿದೆ ಎಂದರು.
ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಯ ಫಲಿತಾಂಶದ ಬಳಿಕೆ ಟಿಎಂಸಿ ಗೂಂಡಾಗಳು ನಮ್ಮ ಮುಂದೆ ಮಂಡಿಯೂರಲಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ಉತ್ತರ ಪ್ರದೇಶ ಗೂಂಡಾಗಳಿಗಾದ ಪರಿಸ್ಥಿತಿ ಟಿಎಂಸಿ ಗೂಂಡಾಗಳಿಗೂ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಪಶ್ಚಿಮ ಬಂಗಾಳದ ಹಾಲಿ ಮುಖ್ಯಮಂತ್ರಿ ದೀದಿ ಅವರನ್ನು ಟೀಕಿಸಿರುವ ಯೋಗಿ, ಮಮತಾ ಬ್ಯಾನರ್ಜಿ ಅವರು ಅಸಂವಿಧಾನಿಕ ಭಾಷೆಯ ಬಳಕೆ ಮುಂದುವರೆಸಿದರೆ, ಇಲ್ಲಿಯ ಯುವಕರು ಅವರಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂದರು.
ಇನ್ನು ಈ ಬಾರಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ. ಈ ಮೊದಲು ಟಿಎಂಸಿಯಲ್ಲಿದ್ದ ಸುವೆಂದು ಅಧಿಕಾರಿ ಈಗ ಬಿಜೆಪಿ ಚಿಹ್ನೆಯೊಂದಿಗೆ ದೀದಿ ವಿರುದ್ಧವೇ ಸ್ಪರ್ಧಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಕಮಲ ಪಾಳಯ, ದ್ಯ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಣ ತೊಟ್ಟಿದೆ.