Advertisement

“ಬಾಂಬಿದ್ದ ಬ್ಯಾಗ್‌ ಇರಿಸಿದ್ದು ಇಲ್ಲೇ’ಎಂದ ಆದಿತ್ಯ

11:48 PM Jan 24, 2020 | Lakshmi GovindaRaj |

ಮಂಗಳೂರು: “ನಾನು ಸಜೀವ ಬಾಂಬ್‌ ಹೊಂದಿದ್ದ ಬ್ಯಾಗನ್ನು ಇರಿಸಿದ್ದು ಇಲ್ಲೇ’ ಎಂಬುದಾಗಿ ಆರೋಪಿ ಆದಿತ್ಯ ರಾವ್‌ ಪೊಲೀಸ್‌ ತನಿಖಾ ತಂಡಕ್ಕೆ ಖಚಿತಪಡಿಸಿದ್ದಾನೆ. ಪೊಲೀಸ್‌ ಕಸ್ಟಡಿಯಲ್ಲಿರುವ ಆದಿತ್ಯ ರಾವ್‌ನನ್ನು ಶುಕ್ರವಾರ ಮಂಗಳೂರು ಉತ್ತರ ಪೊಲೀಸ್‌ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡವು ವಿಮಾನ ನಿಲ್ದಾಣ ಮತ್ತು ಇತರ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿತು.

Advertisement

ವಿಮಾನ ನಿಲ್ದಾಣ ಪ್ರವೇಶಿಸುವ ಟಿಕೆಟ್‌ ಕೌಂಟರ್‌ ಬಳಿ ಕರೆದೊಯ್ದಾಗ ಆದಿತ್ಯ ರಾವ್‌, ಅಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಇರಿಸಿರುವ ಕಬ್ಬಿಣದ ಕುರ್ಚಿಯಲ್ಲಿ ಬಾಂಬ್‌ ಇದ್ದ ಬ್ಯಾಗ್‌ ಇರಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯನ್ನು ತನಿಖಾಧಿಕಾರಿಗಳ ತಂಡ ದಾಖಲಿಸಿಕೊಂಡಿತು.

“ಆಟೋದಲ್ಲಿ ಏರ್‌ಪೋರ್ಟ್‌ ಚೆಕ್ಕಿಂಗ್‌ ಪಾಯಿಂಟ್‌ ತನಕ ಬಂದು ಅಲ್ಲಿ ಇಳಿದು ಬಳಿಕ ನಡೆದುಕೊಂಡು ಬಂದೆ. ಟಿರ್ಮಿನಲ್‌ ಕಟ್ಟಡದ ಟಿಕೆಟ್‌ ಕೌಂಟರ್‌ ಬಳಿ ತಲುಪಿದಾಗ ಅಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಹಾಗಾಗಿ ನನ್ನ ಉದ್ದೇಶ ಈಡೇರಿಸಲು ಸಾಧ್ಯವಾಯಿತು’ ಎಂದು ತನಿಖಾ ತಂಡಕ್ಕೆ ವಿವರಿಸಿದ್ದಾನೆ ಎನ್ನಲಾಗಿದೆ.

“ಜ. 20ರಂದು ಬೆಳಗ್ಗೆ 8.35ರ ಸುಮಾರಿಗೆ ನಾನು ಇಲ್ಲಿಗೆ ತಲುಪಿದ್ದು, ಕೇವಲ 5 ನಿಮಿಷಗಳಲ್ಲಿ ಬ್ಯಾಗನ್ನು ಯಾರಿಗೂ ಸಂಶಯ ಬಾರದಂತೆ ಇಲ್ಲಿನ ಕುರ್ಚಿಯಲ್ಲಿ ಇರಿಸಿದೆ. ಬಳಿಕ ಎಸ್ಕಲೇಟರ್‌ ಮೂಲಕ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಆಟೋ ಹತ್ತಿ ನಿರ್ಗಮಿಸಿದೆ’ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕೆಂಜಾರು ಜಂಕ್ಷನ್‌ನಲ್ಲಿರುವ ಸೆಲೂನ್‌ಗೆ ಭೇಟಿ: ಕೆಂಜಾರು ಜಂಕ್ಷನ್‌ನಲ್ಲಿರುವ ಬಸ್‌ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಸೆಲೂನ್‌ಗೆ ಆದಿತ್ಯ ರಾವ್‌ನನ್ನು ಕರೆದೊಯ್ಯಲಾಯಿತು. ಆ ಸ್ಥಳವನ್ನು ಗುರುತಿಸಿದ ಆತ, “ಬಸ್‌ನಲ್ಲಿ ಬಂದು ಒಂದು ಬ್ಯಾಗನ್ನು ಒಳಗೆ ಇರಿಸಬಹುದೇ ಎಂದು ಕೇಳಿದ್ದೆ.

Advertisement

ಆದರೆ ಸೆಲೂನ್‌ನವರು ಒಳಗೆ ಅವಕಾಶ ನೀಡದೆ, ಹೊರಗೆ ಇರಿಸುವಂತೆ ಸೂಚಿಸಿದರು. ಆ ಬ್ಯಾಗ್‌ನಲ್ಲಿ ಸ್ಫೋಟಕ ಇರಲಿಲ್ಲ, ಬಟ್ಟೆಬರೆ ಇತ್ತು’ ಎಂದು ಹೇಳಿಕೆ ನೀಡಿದ್ದಾನೆ. ಸೆಲೂನ್‌ನ ಮಾಲೀಕರ ಜತೆ ಆರೋಪಿ ಆದಿತ್ಯ ರಾವ್‌ ಮಾತನಾಡಿರುವ ವಿಚಾರಗಳನ್ನು ಮಹಜರು ವೇಳೆ ಪೊಲೀಸ್‌ ತಂಡ ದಾಖಲಿಸಿಕೊಂಡಿತು.

ಆ ಬಳಿಕ ಆದಿತ್ಯನನ್ನು ಪಣಂಬೂರು ಎಸಿಪಿ ಕಚೇರಿಗೆ ಕರೆದೊಯ್ಯಲಾಯಿತು. ಆತ ಕೆಲಸ ಮಾಡಿದ್ದ ಮಂಗಳೂರಿನ ಬಲ್ಮಠ ರಸ್ತೆಯ ಹೊಟೇಲ್‌ ಮತ್ತು ಕಾರ್ಕಳದ ರೆಸ್ಟೋರೆಂಟ್‌ ಮತ್ತು ಇತರ ಕಡೆಗೆ ತೆರಳಿ ಮಹಜರು ನಡೆಸಬೇಕಾಗಿದೆ. ಅಲ್ಲದೆ ಬಾಂಬ್‌ ತಯಾರಿಗೆ ಕಚ್ಚಾ ಸಾಮಗ್ರಿ ತರಿಸಿಕೊಂಡ ಸ್ಥಳಗಳಿಗೂ ತೆರಳಿ ತನಿಖಾ ತಂಡ ಮಹಜರು ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next