ಬೆಂಗಳೂರು: ಶನಿವಾರ ಶ್ರೀಹರಿಕೋಟಾದಿಂದ ಉಡಾವಣೆ ಗೊಳ್ಳಲಿರುವ ಆದಿತ್ಯ ಎಲ್1ರಲ್ಲಿರುವ ಪ್ರಮುಖ ಸಾಧನವಾದ ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (ವಿಇಎಲ್‌ಸಿ)ನಿಂದ ಮುಂದಿನ ವರ್ಷದ ಫೆಬ್ರವರಿಯಲ್ಲಿ ಸೂರ್ಯನ ಹೊರ ಪದರದಲ್ಲಿರುವ ಕರೊನಾದ ಚಿತ್ರಗಳನ್ನು ಪಡೆಯಬಹುದು ಎಂದು ಭಾರತೀಯ ಖಭೌತ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.
ಕೋರಮಂಗಲದಲ್ಲಿ ಇರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ತಮ್ಮ ನಿರ್ಮಾಣದ ವಿಇಎಲ್‌ಸಿಯ ವಿಶೇಷತೆ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಅನ್ವೇಷಣಾಧಿಕಾರಿ ಪ್ರೊ| ಜಗದೇವ್ ಸಿಂಗ್, ವಿಇಎಲ್‌ಸಿ ಭೂಮಿಯಿಂದ 15 ಲಕ್ಷ ಕಿ.ಮೀ. ದೂರ ಕ್ರಮಿಸಿ ಎಲ್ 1ರ ಜಾಗ ತಲುಪಲಿದೆ. ಬಳಿಕ ಇನ್ನಿತರ ಆರು ಉಪಕರಣಗಳು ಹಂತ ಹಂತವಾಗಿ ತಮ್ಮ ಕಾರ್ಯಾಚರಣೆ ಆರಂಭಿಸಲಿವೆ. ಕೊನೆಯದಾಗಿ ವಿಇಎಲ್‌ಸಿ ತನ್ನ ಚಟುವಟಿಕೆ ಆರಂಭಿಸಲಿದ್ದು, ಫೆಬ್ರವರಿ ಮಧ್ಯ ಭಾಗದಲ್ಲಿ ನಾವು ಇದರಿಂದ ಮೊದಲ ಚಿತ್ರವನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.
ವಿಇಎಲ್‌ಸಿಯು ತನ್ನ ಚಟುವಟಿಕೆ ಆರಂಭಿಸಿದ ಬಳಿಕ ಐದು ವರ್ಷಗಳ ಕಾಲ ಪ್ರತಿ ನಿಮಿಷಕ್ಕೆ ಒಂದು ಚಿತ್ರದಂತೆ (ದಿನಕ್ಕೆ 1,440 ಚಿತ್ರ) ಕಳುಹಿಸಿಕೊಡಲಿದೆ. ಈ ಚಿತ್ರದ ಮಾಪನ, ಅಧ್ಯಯನ, ವಿಶ್ಲೇಷಣೆಗೆ ಇಸ್ರೋ ಮತ್ತು ಐಐಎ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಾಫ್ಟ್ವೇರ್ ಈಗಾಗಲೇ ಸಿದ್ಧವಾಗಿದ್ದು ಹೆಚ್ಚಿನ ಸಾಮರ್ಥ್ಯದ ಕಂಪ್ಯೂಟರ್‌ಗಳನ್ನು ಅಳವಡಿಸಿಕೊಂಡಿದ್ದೇವೆ. ಐಐಎಯು ವಿಇಎಲ್‌ಸಿ ಕಳುಹಿಸಿಕೊಡುವ ಚಿತ್ರಗಳ ಮಾಪನಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು. ಆರಂಭದ ಕೆಲವು ತಿಂಗಳು ಆದಿತ್ಯ ಎಲ್1 ಕಳುಹಿಸುವ ಮಾಹಿತಿಯನ್ನು ಭಾರತ ಮಾತ್ರ ಬಳಸಿಕೊಳ್ಳಲಿದೆ. ಆ ಬಳಿಕ ನಾವು ಜಗತ್ತಿನೊಂದಿಗೆ ಮುಕ್ತವಾಗಿ ಮಾಹಿತಿ ಹಂಚಲಿದ್ದೇವೆ ಎಂದು ಹೇಳಿದರು.
ಐಐಎಯ ಹಿರಿಯ ವಿಜ್ಞಾನಿ ಪ್ರೊ| ಬಿ.ರವೀಂದ್ರ ಮಾತನಾಡಿ, ಆದಿತ್ಯ ಎಲ್1 ಮೂಲಕ ನಾವು ಸೂರ್ಯನ ಮೇಲ್ಮೈಗೆ ಹೋಗುತ್ತಿಲ್ಲ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರ ಹೋಗಿ ಅಲ್ಲಿಂದ ಸೂರ್ಯನ ವೀಕ್ಷಣೆ ಮಾಡುತ್ತೇವೆ. ಸೂರ್ಯನ ಮೇಲ್ಮೈ ತಲುಪಲು ಅಲ್ಲಿಂದ ಮತ್ತೆ 14.80 ಕೋಟಿ ಕಿ.ಮೀ. ದೂರವಿದೆ. ನಾವು ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ನೂರನೇ ಒಂದು ಭಾಗವಷ್ಟೆ ಕ್ರಮಿಸಿ ಅಲ್ಲಿಂದ ಸೂರ್ಯನ ಮೇಲ್ಮೈಯಲ್ಲಿರುವ ಕರೊನಾದ ವರ್ತನೆಯನ್ನು ಅಧ್ಯಯನ ನಡೆಸುತ್ತೇವೆ ಎಂದು ಹೇಳಿದರು.
ಭೂಮಿಯಿಂದ ಸೂರ್ಯನನ್ನು ಅಧ್ಯಯನ ಮಾಡಲು ಗ್ರಹಣವಿದ್ದಾಗ ಮಾತ್ರ ಸೂಕ್ತ ವಾತಾವರಣ ಇರುತ್ತದೆ. ಆದರೆ ಗ್ರಹಣ ಭೂಮಿಯ ಕೆಲವು ಭಾಗಗಳಲ್ಲಿ ಮಾತ್ರ ಗೋಚರವಾಗು ವುದು. ಅಲ್ಲದೆ ಅಲ್ಪ ಕಾಲ ಮಾತ್ರ ಇರುವುದರಿಂದ ಪೂರ್ಣ ಸ್ವರೂಪ ದಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗು ವುದಿಲ್ಲ. ಆದರೆ ನಾವು 15 ಲಕ್ಷ ಕಿ.ಮೀ. ಕ್ರಮಿಸಿ ಎಲ್1 ಪ್ರದೇಶವನ್ನು ತಲುಪಿ ಅಲ್ಲಿ ನಮ್ಮ ವಿಇಎಲ್‌ಸಿ ಯನ್ನು ಸ್ಥಾಪಿಸಿ ವಿಇಎಲ್‌ಸಿಯ ಒಳಗೆ ನಿತ್ಯ ಗ್ರಹಣವನ್ನು ಹೋಲುವ ಸ್ಥಿತಿ ಸೃಷ್ಟಿಸಿ ನಿರಂತರವಾಗಿ ಪ್ರಯೋಗ ಮಾಡು ವುದು ನಮ್ಮ ಉದ್ದೇಶ ಎಂದರು.
ಸಂಸ್ಥೆಯ ಸಿಸ್ಟಂ ಎಂಜಿನಿಯರಿಂಗ್ ಗ್ರೂಪ್ ಮುಖ್ಯಸ್ಥ ಪ್ರೊ| ನಾಗಭೂಷಣ ಮಾತನಾಡಿ, ಆದಿತ್ಯ ಯೋಜನೆಯು ಭೂಮಿಗಿಂತ 15 ಲಕ್ಷ ಕಿ.ಮೀ. ದೂರದಲ್ಲಿ ಸೂರ್ಯನನ್ನು ನಿರಂತರ ವಾಗಿ ವೀಕ್ಷಿಸಲು ಅಗತ್ಯವಾದ ಕೇಂದ್ರ ವಾಗಿ ಕಾರ್ಯನಿರ್ವಹಿಸಲಿದೆ. ಸೂರ್ಯನ ಹತ್ತಿರದ ಕರೊನಾದ ಚಿತ್ರವನ್ನು ಕಳುಹಿಸಿಕೊಡಲಿದೆ. ಇಸ್ರೋದ ಲಿಯೋಸ್ ತಯಾರಿಸಿರುವ ಅತಿ ಸ್ವಚ್ಛವಾದ ಕನ್ನಡಿಯು ಕರೊನಾದ ಬೆಳಕನ್ನು ಸೆರೆ ಹಿಡಿಯಲು ನೆರವಾಗ ಲಿದೆ. ಇದು ಅತಿ ಉತ್ಕೃಷ್ಟ ದರ್ಜೆಯ ಚಿತ್ರವನ್ನು ಅತ್ಯಂತ ವೇಗವಾಗಿ ಸೆರೆ ಹಿಡಿದು ಭೂಮಿಗೆ ರವಾನಿಸಲಿದೆ ಎಂದು ಮಾಹಿತಿ ಹಂಚಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಮತ್ತು ವಿವಿಧ ವಿಭಾಗದ ಮುಖ್ಯಸ್ಥರಾದ ಡಾ| ವೆಮಾರೆಡ್ಡಿ ಪಂಡಿತ್, ಎಸ್.ಕಾತಿರವನ್, ಅಮಿತ್ ಕುಮಾರ್, ಡಾ| ಶಶಿಕುಮಾರ್ ರಾಜಾ, ಡಾ| ಮುತ್ತು ಪ್ರಿಯಾಲ್, ಸಮೃದ್ಧಿ ಮೈತ್ರಿ, ಡಾ| ನಿರುಜ್ ಮೋಹನ್ ರಾಮಾನುಜಂ ಮುಂತಾದವರು ಉಪಸ್ಥಿತರಿದ್ದರು.