ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಅದಮ್ಯ ಚೇತನ ಜಂಟಿಯಾಗಿ ವೃಷಭಾವತಿ ಪುನಶ್ಚೇತನ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಸಂಬಂಧ ಹದಿನೈದು ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ರಸಗೊಬ್ಬರ ಸಚಿವರೂ ಆದ ಅದಮ್ಯ ಚೇತನ ಸಂಸ್ಥೆ ಪ್ರಧಾನ ಸಂಸ್ಥಾಪಕ ಅನಂತಕುಮಾರ್ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿರುವ ಜೈವಿಕ ಉದ್ಯಾನದಲ್ಲಿ ಸೋಮವಾರ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಈ ಹಿಂದೆ ಏಳು ನದಿಗಳಿದ್ದವು. ಈಗ ಅವೆಲ್ಲವೂ ಚರಂಡಿಗಳಾಗಿ ಮಾರ್ಪಟ್ಟಿವೆ. ಅವುಗಳಲ್ಲಿ ವೃಷಭಾವತಿ ಕೂಡ ಒಂದು.
ಈ ನದಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲೇ ಒಂದೂವರೆ ಕಿ.ಮೀ. ಹರಿಯುತ್ತದೆ. ಇದನ್ನು ಪುನಶ್ಚೇತನಗೊಳಿಸಲು ವಿಶ್ವವಿದ್ಯಾಲಯ ಮತ್ತು ಅದಮ್ಯ ಚೇತನ ಮುಂದಾಗಿದೆ. ಇದಕ್ಕೆ ಅಗತ್ಯವಿರುವ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧತೆಗೆ ಆರ್ಥಿಕ ನೆರವನ್ನು ಅದಮ್ಯ ಚೇತನ ನೀಡಲಿದೆ. ಈ ಸಂಬಂಧ ಎರಡು ವಾರಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು,’ ಎಂದು ಹೇಳಿದರು.
“1801ರ ಗೆಜೆಟಿಯರ್‌ನಲ್ಲಿ ಉಲ್ಲೇಖೀಸಿದಂತೆ ಮಹಾನಗರದಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿಯ ಗರಿಷ್ಠ ತಾಪಮಾನ 14ರಿಂದ 15 ಡಿಗ್ರಿ ಸೆಲ್ಸಿಯಸ್ ಇತ್ತು. ಇಂದು ಅದು 38 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇದೆ. ಕೆರೆ-ಕಟ್ಟೆಗಳೆಲ್ಲಾ ಭೂಗಳ್ಳರ ಪಾಲಾಗಿದೆ. ನಗರದ ಪರಿಸರವನ್ನು ಸಂರಕ್ಷಿಬೇಕಿದೆ,’ ಎಂದರು.
ಇಕೋ-ಬಜೆಟ್‌ಗೆ ಒತ್ತಾಯ: ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, “ಸಾಮಾನ್ಯ ಬಜೆಟ್‌ನಂತೆ ಇಕೋ ಬಜೆಟ್ ರೂಪಿಸುವುದು ಅನಿವಾರ್ಯ. ಟ್ರಿ-ಪ್ಲಾನ್ ರೂಪಿಸಿ, ಮುಂದಿನ ಹತ್ತು ವರ್ಷಗಳಲ್ಲಿ ಅಭಿವೃದ್ಧಿಗಾಗಿ ಎಷ್ಟು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಲೆಕ್ಕ ಹಾಕಿ, ಅದನ್ನು ಆಧರಿಸಿ ಈಗಿನಿಂದಲೇ ಒಂದು ಮರಕ್ಕೆ ಪ್ರತಿಯಾಗಿ ಐದು ಸಸಿಗಳನ್ನು ನೆಡಬೇಕು. ಇದರಿಂದ ಪರಿಸರ ರಕ್ಷಣೆ ಜತೆಗೆ ಅಭಿವೃದ್ಧಿ ಕೂಡ ಸಾಧ್ಯವಾಗುತ್ತದೆ,’ ಎಂದು ಹೇಳಿದರು.
ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ: ವಿವಿ ಕುಲಪತಿ ಡಾ.ಮುನಿರಾಜು ಮಾತನಾಡಿ, “ವೃಷಭಾವತಿ ನದಿ ಪುನಶ್ಚೇತನ ಯೋಜನೆಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು, ಡಿಪಿಆರ್ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು,’ ಎಂದರು.
ಇದೇ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ವಿಶ್ವವಿದ್ಯಾಲಯದ ಜೈವಿಕ ಉದ್ಯಾನದಲ್ಲಿ ಸಾವಿರ ಸಸಿಗಳನ್ನು ನೆಡಲಾಯಿತು. ಶಾಸಕರಾದ ಎಲ್.ಎ.ರವಿಸುಬ್ರಮಣ್ಯ, ವಿ.ಸೋಮಣ್ಣ, ಕುಲಸಚಿವ ಬಿ.ಕೆ.ರವಿ, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.