Advertisement
ಜಾರ್ಖಂಡ್ ರಾಜ್ಯದ ಗರ್ವಾಹ್ ಎಂಬ ಪುಟ್ಟ ನಗರದಲ್ಲಿ ನಾವಿದ್ದೆವು. ನನ್ನ ಹೆತ್ತವರು ಸುಶಿಕ್ಷಿತರು. ಅದರಲ್ಲೂ ಅಮ್ಮ, ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದರು. ಹಾಗಾಗಿ, ನನಗೆ ಕಷ್ಟ ಎಂಬುದಾಗಲಿ, ಬಡತನದ ಸಂಕಟವಾಗಲಿ ಇರಲಿಲ್ಲ. ಆದರೆ, ನಾವು ಬದುಕಿದ್ದೆವಲ್ಲ; ಆ ಪರಿಸರವೇ ಹಲವು ಕಟ್ಟುಪಾಡುಗಳ, ಆಚರಣೆಗಳ, ನಂಬಿಕೆಗಳ ಗೂಡೊಳಗೆ ಬಂಧಿಯಾಗಿತ್ತು. ತಲೆ ತಲಾಂತರದಿಂದಲೂ ಉಳಿದುಕೊಂಡು ಬಂದಿದ್ದ ನಂಬಿಕೆಯನ್ನು, ಆಚರಣೆಗಳನ್ನು ಪ್ರಶ್ನಿಸಲು ಯಾರೂ ಸಿದ್ಧರಿರಲಿಲ್ಲ. ಯೂನಿ ವರ್ಸಿಟಿಯ ಪ್ರೊಫೆಸರ್ ಆಗಿದ್ದ ನನ್ನ ತಾಯಿ ಕೂಡ, “ಕೆಲವು ಸಂಪ್ರದಾಯಗಳನ್ನು ಪಾಲಿಸುವುದೇ ಕ್ಷೇಮ. ಅವುಗಳನ್ನು ಧಿಕ್ಕರಿಸಲು, ಪ್ರಶ್ನಿಸಲು ಹೋಗಲೇಬಾರದು’ ಅನ್ನುತ್ತಿದ್ದರು.
Related Articles
Advertisement
ಈ ನಡುವೆ, ನಾನು 9ನೇ ತರಗತಿಯಲ್ಲಿದ್ದಾಗ, ನಮ್ಮ ದೇಹ, ಅದರ ಬೆಳವಣಿಗೆ ಎಂಬ ಅಧ್ಯಾಯವಿತ್ತು. ಸೈನ್ಸ್ ಬೋಧಿಸುತ್ತಿದ್ದ ಅಧ್ಯಾಪಕರು- “ಇದನ್ನು ವಿವರಿಸಿ ಹೇಳಲು ನನಗೇ ಮುಜುಗರ ಆಗುತ್ತೆ. ಮನೆಗೆ ಹೋಗಿ ನೀವೇ ಓದಿಕೊಳ್ಳಿ. ನಿಮಗೇ ಎಲ್ಲಾ ಅರ್ಥ ಆಗುತ್ತೆ’ ಅಂದರು. ಅವತ್ತೇ ಸಂಜೆ, ಇನ್ನೊಬ್ಬ ಮೇಷ್ಟ್ರ ಜತೆ ಮಾತಾಡುತ್ತಾ- “ಈಗಿನ ಕಾಲದ ಮಕ್ಕಳು ಬಹಳ ಫಾಸ್ಟ್ ಇದ್ದಾರೆ. ಅವರಿಗೆ ಯಂಗ್ ಏಜ್, ಪೀರಿಯಡ್ಸ್, ಪ್ರಗ್ನೆನ್ಸಿ… ಇದನ್ನೆಲ್ಲ ಪಾಠ ಮಾಡಿದ್ರೆ ಏನಾದರೂ ಅನಾಹುತ ಮಾಡಿಕೊಳ್ತಾರೆ ಅನ್ನಿಸ್ತು. ಹಾಗಾಗಿ ಆ ಚಾಪ್ಟರ್‌ಗಳನ್ನು ಪಾಠ ಮಾಡದೇ ಜಂಪ್ ಮಾಡಿದೆ’ ಅಂದರು.
ಹತ್ತನೇ ತರಗತಿಯ ಅನಂತರ, ಕಾಲೇಜು ಕಲಿಯಲೆಂದು ನಾನು ನಗರಕ್ಕೆ ಬಂದೆ. ಹಾಸ್ಟೆಲ್ ಸೇರಿಕೊಂಡೆ. ತಿಂಗಳ ರಜೆಯ ಸಂದರ್ಭಕ್ಕೆ “ಪೀರಿಯಡ್ಸ್’ ಅನ್ನುತ್ತಾರೆಂದೂ, ಸ್ಯಾನಿಟರಿ ಪ್ಯಾಡ್ ಬಳಸಿದರೆ ತುಂಬಾ ಒಳ್ಳೆಯದೆಂದು ಸ್ಪಷ್ಟವಾಗಿ ತಿಳಿದದ್ದು ಹಾಸ್ಟೆಲಿನಲ್ಲಿಯೇ. ಅನಂತರ ನಾನೂ ಧೈರ್ಯ ಮಾಡಿ, ಮೆಡಿಕಲ್ ಸ್ಟೋರ್‌ಗೆ ಹೋಗಿ ಕೇಳಿಯೇಬಿಟ್ಟೆ. ಕರ್ರಗಿನ ಪ್ಲಾಸ್ಟಿಕ್ ಕವರ್‌ಗೆ ಪ್ಯಾಡ್ ಹಾಕಿ ಮೆಡಿಕಲ್ ಸ್ಟೋರ್‌ನ ಹುಡುಗ ಕೊಟ್ಟ. ಅದನ್ನು ಯಾರಾದರೂ ನೋಡಿಬಿಟ್ಟರೆ? ಏನಾದರೂ ಪ್ರಶ್ನೆ ಕೇಳಿಬಿಟ್ಟರೆ… ಎಂಬ ಆತಂಕದಲ್ಲಿಯೇ ಹಾಸ್ಟೆಲ್ ತಲುಪಿಕೊಂಡೆ. ಈ ದಿನಗಳಲ್ಲಿ ನನಗೆ ಪರಿಚಯವಾದವನೇ ತುಹಿನ್ ಪೌಲ್. ಈತ ನನ್ನದೇ ತರಗತಿಯ ಹುಡುಗ. ಅದ್ಯಾಕೋ ವಿಪರೀತ ಇಷ್ಟವಾದ. ಅವನೊಂದಿಗೆ ಎಲ್ಲ ಸಂಗತಿಯನ್ನೂ ಹೇಳಿಕೊಳ್ಳುತ್ತಿದ್ದೆ. ಪೀರಿಯಡ್ಸ್ ಆಗುತ್ತಿತ್ತಲ್ಲ; ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಿಟ್ಟಾಗುತ್ತಿದ್ದೆ. ಆವೇಶದಿಂದ ಮಾತಾಡಿಬಿಡುತ್ತಿದ್ದೆ. ತುಹಿನ್ ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ. ಒಂದು ದಿನ ಹಾಗಂತ ನೇರವಾಗಿ ಹೇಳಿಯೂಬಿಟ್ಟ. “ಪೀರಿಯಡ್ಸ್‌ನ ದಿನಗಳಲ್ಲಿ ಈ ಥರ ಆಗುತ್ತೆ ಕಣೋ. ಆಗೆಲ್ಲ ಇಡೀ ದಿನ ರಕ್ತ ಹೋಗ್ತಾ ಇರುತ್ತೆ. ತುಂಬಾ ನಿಶ್ಶಕ್ತಿ ಅನಿಸುತ್ತೆ. ಅದೇ ಕಾರಣಕ್ಕೆ ರೇಗಾಡ್ತೀನಿ ಅನಿಸುತ್ತೆ’ ಅಂದೆ. ಅವನು ಬೆರಗಿನಿಂದ- “ಹೌದಾ? ಪ್ರತಿ ತಿಂಗಳೂ ಹೀಗಾಗುತ್ತಾ? ಪ್ರತೀ ತಿಂಗಳೂ ಒಂದು ವಾರ ಬ್ಲಡ್ ಹೋಗ್ತಾ ಇರುತ್ತಾ?’ ಅಂದ.
ಅದರರ್ಥ? “ಪೀರಿಯಡ್ಸ್’ ಎಂದರೆ ಏನು? ಅದು ಯಾಕೆ ಆಗುತ್ತೆ? ಎಂಬ ಕುರಿತು ತುಹಿನ್‌ಗೂ ಗೊತ್ತಿರಲಿಲ್ಲ. ಈ ವಿಷಯವನ್ನು ಸೀನಿಯರ್‌ಗಳ ಜೊತೆಯಾಗಲಿ, ಮನೆಯಲ್ಲಿದ್ದ ಹಿರಿಯರ ಬಳಿಯಲ್ಲಾಗಲಿ ಚರ್ಚಿಸುವುದು ಸಾಧ್ಯವೇ ಇರಲಿಲ್ಲ. ಆಗ, ತುಹಿನ್‌ನೇ- “ಇಂಟರ್‌ನೆಟ್‌ನಲ್ಲಿ ಈ ಬಗ್ಗೆ ಏನಾದರೂ ಮಾಹಿತಿ ಇದೆಯಾ ಚೆಕ್ ಮಾಡ್ತೇನೆ. ಅಲ್ಲಿ ಏನು ಮಾಹಿತಿ ಸಿಗುತ್ತೋ ಅದನ್ನೆಲ್ಲ ನಿನಗೆ ಹೇಳ್ತೇನೆ’ ಅಂದ. ಮರುದಿನವೇ ಆತ ಎಲ್ಲವನ್ನೂ ಗೂಗಲ್‌ನಲ್ಲಿ ಹುಡುಕಿದ್ದಾನೆ. ಕಡೆಗೆ ಎಲ್ಲವನ್ನೂ ಪ್ರಿಂಟ್ ಕಾಪಿ ತಗೊಂಡು, ನನ್ನ ಮುಂದಿಟ್ಟು ಹೇಳಿದ: “ಅದಿತಿ, ಈವರೆಗೂ ನೀನು ಫಾಲೋ ಮಾಡಿಕೊಂಡು ಬಂದಿದ್ದೀಯಲ್ಲ? ಆ ಆಚರಣೆಗಳಿಗೆ ಅರ್ಥವಿಲ್ಲ. ವಾಸ್ತವವಾಗಿ ಪೀರಿಯಡ್ಸ್‌ನ ಅವಧಿ ಮೂರು ದಿನ. ಆ ದಿನಗಳಲ್ಲಿ ಹೆಣ್ಣುಮಕ್ಕಳು ಸ್ನಾನ ಮಾಡಬೇಕು. ಹೆಚ್ಚು ಬಿಸಿ ನೀರು ಬಳಸಿದಷ್ಟೂ ಒಳ್ಳೆಯದು. ಏನು ಬೇಕಾದ್ರೂ ತಿನ್ನಬಹುದು. ಯಾರನ್ನು ಬೇಕಾದ್ರೂ ಮುಟ್ಟಬಹುದು, ಮನೆಯೊಳಗೆ ನಿನ್ನಿಷ್ಟದಂತೆ ಓಡಾಡಬಹುದು. “ಪೀರಿಯಡ್ಸ್’ ಎಂಬುದು ನಿಸರ್ಗಸಹಜ ಕ್ರಿಯೆ. ಹೆಣ್ಣು ಮಗುವೊಂದು ಹರೆಯಕ್ಕೆ ಕಾಲಿಟ್ಟಿದೆ ಎಂದು ಪರೋಕ್ಷವಾಗಿ ಸೂಚಿಸುವ ಪ್ರಕೃತಿಯ ಒಂದು ಕ್ರಮ ಇದು…’
ಅವನ ಮಾತು ಕೇಳುತ್ತಿದ್ದಂತೆಯೇ, ನಮ್ಮ ಊರಲ್ಲಿ, ನಮ್ಮ ಮನೆಯಲ್ಲಿ ಜಾರಿಯಲ್ಲಿದ್ದ ಕಟ್ಟುಪಾಡುಗಳು ನೆನಪಾದವು. ಸಂಪ್ರದಾಯ ಪಾಲನೆಯ ಹೆಸರಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಸಂಕಟಗಳೆಲ್ಲ ಕಣ್ಮುಂದೆ ಬಂದುಹೋದವು. ಇದಕ್ಕೆಲ್ಲಾ ಕೊನೆ ಹಾಡಬೇಕು. ಆ ಮೂರು ದಿನಗಳಲ್ಲಿ ಯಾವ ಹೆಣ್ಣು ಅಶುದ್ಧಳಾಗಿ ಇರುವುದಿಲ್ಲ ಎಂದು ಅರಿವು ಮೂಡಿಸಬೇಕು ಅನ್ನಿಸಿತು. ಇದನ್ನೇ ತುಹಿನ್‌ಗೂ ಹೇಳಿದೆ. ಅವನು- “ನೀನು ಹೇಳುವುದೆಲ್ಲಾ ಸರಿ. ಆದರೆ, ನಾವು ಇನ್ನೂ ಸ್ಟೂಡೆಂಟ್ಸ್. ನಾವೇ ಒಂದಿಡೀ ಸಮಾಜಕ್ಕೆ ಮೆಸೇಜ್ ಕೊಡುವುದು ಹೇಗೆ?’ ಎಂದ.
ಈ ವೇಳೆಗೆ, ನಾನು ಡಿಗ್ರಿ ಕಡೆಯ ವರ್ಷದಲ್ಲಿದ್ದೆ. “ಸಂಪ್ರದಾಯ ಪಾಲನೆಯ ನೆಪದಲ್ಲಿ ಹೆಣ್ಣುಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಕುರಿತೇ ಯಾಕೆ ಪ್ರಾಜೆಕ್ಟ್ ಮಾಡಬಾರದು’ ಅನ್ನಿಸಿತು. ತತ್‌ಕ್ಷ ಣವೇ ಡಾಕ್ಟರ್, ಸ್ಟೂಡೆಂಟ್ಸ್, ತಾಯಂದಿರು, ಶಿಕ್ಷಕರು… ಹೀಗೆ, ಎಲ್ಲರ ಅಭಿಪ್ರಾಯ ಪಡೆದೆ. ಆಗ ನನ್ನೆದುರು ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು. ಪೀರಿಯಡ್ಸ್‌ನ ದಿನಗಳಲ್ಲಿ ಪಾಲಿಸಲೇಬೇಕು ಎಂದು ಹಿಂದಿನಿಂದಲೂ ಹೇರಿರುವ ಕಟ್ಟುಪಾಡುಗಳಿಂದ, ಈ ತೊಂದರೆಗಳಿಂದ ಪಾರಾಗಲೇಬೇಕು, ಎಂಬುದೆಲ್ಲರ “ಧ್ವನಿ’ ಆಗಿತ್ತು.
“ಆಚರಣೆಗಳು, ಅದರಿಂದಾಗುವ ಕಷ್ಟಗಳ ಕುರಿತು ಮೊದಲೇ ಗೊತ್ತಿತ್ತು. ಈಗ, ಜನರ ಮನಸ್ಸನ್ನೂ ಅರಿತಿದ್ದಾಯಿತು. ಈ ಮೂಢನಂಬಿಕೆಗಳನ್ನು ಪಾಲಿಸಬೇಡಿ ಎಂದು ಎಲ್ಲ ರಿಗೂ ತಿಳಿಸಲು ಒಂದು ಪುಸ್ತಕ ಬರೆಯೋಣ. ಕಡಿಮೆ ಬೆಲೆಗೆ ಅದನ್ನು ಮಾರಾಟ ಮಾಡೋಣ. ಆ ಮೂಲಕ ಜಾಗೃತಿ ಉಂಟುಮಾಡೋಣ’ ಎಂದು ಯೋಚಿಸಿದೆವು. ಆದರೆ, ಪುಸ್ತಕ ಪ್ರಕಟಿಸಲು ಹಣ ಬೇಕಲ್ಲವೆ? ವಿದ್ಯಾರ್ಥಿಗಳಾದ ನಮ್ಮಲ್ಲಿ ಹಣವೆಲ್ಲಿಂದ ಬರಬೇಕು? ಪರಿಸ್ಥಿತಿ ಹೀಗಿದ್ದಾಗ, ತುಹಿನ್‌ನೇ ಒಂದು ಐಡಿಯಾ ಹೇಳಿದ. ಅದೇ- ಬ್ಲಾಗ್ ಆರಂಭಿಸಿ, ಅದರ ಮೂಲಕ ಅಕ್ಷರ, ಆರೋಗ್ಯ, ಆಚರಣೆ, ಕಂದಾ ಚಾರ..ಇತ್ಯಾದಿ ಕುರಿತು ಅರಿವು ಮೂಡಿಸುವುದು. ಹೀಗೆ ಶುರುವಾದ ಬ್ಲಾಗ್‌ನ ಹೆಸರೇ- www.menstrupedia.com.
ನಂಬಿದರೆ ನಂಬಿ, ಬಿಟ್ರೆ, ಬಿಡಿ; ಆ ಬ್ಲಾಗ್‌ಗೆ ಕೇವಲ ಭಾರತವಲ್ಲ; ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಂದಲೂ ಪ್ರತಿಕ್ರಿಯೆ ಬಂತು. “ಇಂಥ ಮಾಹಿತಿ ಅಗತ್ಯವಾಗಿ ಬೇಕಿತ್ತು. ದಯವಿಟ್ಟು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರಿ. ಅದರಿಂದ ನೂರಲ್ಲ. ಲಕ್ಷಾಂತರ ಜನರಿಗೆ ಉಪಯೋಗವಾಗುತ್ತೆ’ ಎಂದೇ ಎಲ್ಲರೂ ಹೇಳಿಕೊಂಡಿದ್ದರು. ಕ್ರೌಡ್ ಫಂಡಿಂಗ್ ಮೂಲಕ ಪುಸ್ತಕ ಪ್ರಕಟಿಸಿ, ಅದಕ್ಕೆ ಕಡಿಮೆ ಬೆಲೆಯಿಟ್ಟು ಮಾರಾಟ ಮಾಡಿದರೆ ಹೇಗೆ ಎಂಬ ಐಡಿಯಾ ಬಂದದ್ದೇ ಆಗ. ಅದನ್ನೂ ನಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದೆವು. ನೋಡ ನೋ ಡು ತ್ತಲೇ, ಭರ್ತಿ 5 ಲಕ್ಷ ರೂಪಾಯಿ ನಮ್ಮ ಖಾತೆಗೆ ಬಂದು ಬಿತ್ತು.
ಪುಸ್ತಕ ಮಾಡಬೇಕು ಸರಿ. ಆದರೆ ಯಾವ ಥರದ ಪುಸ್ತಕ ಮಾಡುವುದು? ಬರೀ ವಿವರಣೆ ಹೊಂದಿರುವ ಪುಸ್ತಕ ಪ್ರಕಟಿಸು ವುದಾ? ಸಾರಾಂಶ ಮತ್ತು ಟಿಪ್ಪಣಿ ಒಳಗೊಂಡ ಪಠ್ಯಪುಸ್ತಕದ ಮಾದರಿ ಯಲ್ಲಿ ಇರಬೇಕಾ? ಎಷ್ಟು ಭಾಷೆಗಳಲ್ಲಿ ಇದ್ದರೆ ಚೆಂದ ಎಂದೆಲ್ಲಾ ಯೋಚನೆ ಬಂತು. ತುಹಿನ್, ಅವರಣ್ಣ, ಇನ್ನಿಬ್ಬರು ಸಾಫ್ಟ್ವೇರ್ ವೃತ್ತಿಯಲ್ಲಿದ್ದ ಗೆಳೆಯರು ಚರ್ಚೆಯಲ್ಲಿ ಜೊತೆಯಾದರು. ಕಾರ್ಟೂನ್ ಪುಸ್ತಕದ ಮಾದರಿಯಲ್ಲಿ ಬುಕ್ ಮಾಡೋಣ. ಒಬ್ಬರು ವೈದ್ಯೆ, ಮೂವರು ವಿವಿಧ ವಯಸ್ಸಿನ ಹೆಣ್ಣುಮಕ್ಕಳು ಮಾತಾಡಿ ಕೊಳ್ಳುವ ರೀತಿಯಲ್ಲಿ ಕಾಮಿಕ್ ಬುಕ್ ಇರಲಿ. ಹೆಣ್ಣುಮಕ್ಕಳು ಕುತೂಹಲದಿಂದ ಪ್ರಶ್ನಿಸಿದಾಗ, ವೈದ್ಯ ಉತ್ತರಿಸುವಂತೆ ಕಾಮಿಕ್‌ಗಳು ಇರಲಿ ಎಂದು ಒಕ್ಕೊರಲಿನ ಸಲಹೆ ಬಂತು.
ಆಮೇಲಿನದ್ದೆಲ್ಲಾ ಗೆಲುವಿನ ಕಥೆಯೇ. ನಮ್ಮ ಕಾಮಿಕ್ ಪುಸ್ತಕಕ್ಕೆ ಪ್ರಶಂಸೆ ಲಭಿಸಿತು. ಹಿಂದಿ-ಇಂಗ್ಲಿಷ್ ಮಾತ್ರವಲ್ಲ; ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳಿಗೂ ಪುಸ್ತಕ ಅನುವಾದವಾಗಿ ಲಕ್ಷಾಂತರ ಜನ ರನ್ನೂ ತಲು ಪಿತು. ಫೋಬ್ಸ್ì ಪತ್ರಿಕೆ, ವರ್ಷದ ಸಾಧಕಿ ಎಂದು ನನ್ನನ್ನು ಗುರುತಿಸಿ, ಗೌರವಿಸಿತು. ಮೊದಲಿನಿಂದಲೂ ನನ್ನ ಸಾಹಸಗಳಿಗೆ ಜೊತೆಯಾಗಿದ್ದ ತುಹಿನ್ ಪೌಲ್ ಕಡೆಗೆ ನನ್ನ ಬಾಳ ಸಂಗಾತಿಯಾದ.
ಮುಂದೆ, menstrupedia ಹೆಸರಿನ ಕಂಪೆನಿ ಶುರು ಮಾಡದ್ವಿ. ಒಂದು ಸಮಾರಂಭದಲ್ಲಿ ನನಗೆ ಎದುರಾದ ಹಿರಿಯರೊಬ್ಬರು- ನಾಲ್ಕು ವರ್ಷಗಳ ಹಿಂದೆಯೇ ಹೆಂಡತಿ ತೀರಿಹೋದಳಮ್ಮ. ಎರಡು ವರ್ಷದ ಹಿಂದೆ ನನ್ನ ಮಗಳು ಮೆಚ್ಯುರ್ಡ್ ಆದಳು. ಅವಳನ್ನು ಹೇಗೆ ನೋಡಿಕೊಳ್ಳಬೇಕು? ಹೇಗೆ ಬೆಳೆಸಬೇಕೆಂದು ತಿಳಿಯದೆ ಕಂಗಾಲಾಗಿದ್ದೆ. ಎಷ್ಟೋ ಬಾರಿ ಮುಜುಗರದಿಂದಲೇ ನೆರೆಮನೆಯ ಹೆಂಗಸಿನ ಸಲಹೆ ಕೇಳಿದ್ದೆ. ನಿಮ್ಮ ಪುಸ್ತಕ ಬಂದ ಮೇಲೆ ನಾನೂ ಓದಿಕೊಂಡು, ಮಗಳಿಗೂ ಓದಿಸಿದ್ದೇನೆ. ಬಹಳ ಅನುಕೂಲ ಆಯ್ತು ಅಂದರು. ಉಳಿದವರ ಮಾತು ಹಾಗಿರಲಿ; ಆರಂಭದಿಂದಲೂ ನನ್ನ ಪ್ರತಿಯೊಂದು ನಿಲುವನ್ನೂ ಪ್ರಶ್ನಿಸುತ್ತಿದ್ದ ಅಮ್ಮ, ಈಗ ಹೆಮ್ಮೆಯಿಂದ ನನ್ನ ಪುಸ್ತಕವನ್ನು ಜೊತೆಗಿಟ್ಟುಕೊಂಡು ಓಡಾಡುತ್ತಾರೆ. ಪರಿಚಯದ ಜನರಿಗೆ ಉಚಿತವಾಗಿ ನೀಡಿ, “ಹೆಣ್ಣು ಮಕ್ಕಳಿಗೆ ಕೊಟ್ಟು ಓದಿಸಿ, ಅವರಿಗೆ ಇದು ಹಲವು ರೀತಿಯಲ್ಲಿ ನೆರವಿಗೆ ಬರುತ್ತೆ’ ಅನ್ನುತ್ತಿದ್ದಾರೆ.ಹೀಗೆ ಮುಗಿಯುತ್ತದೆ ಅದಿತಿ ಗುಪ್ತಾರ ಮಾತು… ಎ.ಆರ್.ಮಣಿಕಾಂತ್