Advertisement

ಜನಮನ್ನಣೆಗೆ ಸಾಧನೆ ಜತೆ ಲಕ್‌ ಕೂಡ ಅಗತ್ಯ: ಅದಿತಿ ಜೋಷಿ

12:43 AM Dec 14, 2022 | Team Udayavani |

“ಹರ್ಷ’ ಸಂಸ್ಥಾಪಕ ಕಪ್ಪೆಟ್ಟು ಬೋಳ ಪೂಜಾರಿಯವರ ಜನ್ಮಶತಮಾನೋತ್ಸವ ಪ್ರಯುಕ್ತ ಉಡುಪಿಯಲ್ಲಿ ನಡೆದ “ಸ್ವರಾಮೃತ’ದಲ್ಲಿ ಪಾಲ್ಗೊಂಡ ಅದಿತಿ ಜೋಷಿ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Advertisement

ಸಂಗೀತ ಕ್ಷೇತ್ರದಲ್ಲಿ ಜನಪ್ರಿಯರಾಗಲು ಸತತ ಪರಿಶ್ರಮದ ಜತೆ ಲಕ್‌ ಕೂಡ ಅಗತ್ಯವಾಗಿದೆ ಎಂದು ಹಿರಿಯ ಕಲಾವಿದೆ ಮುಂಬಯಿಯ ಅದಿತಿ ಜೋಷಿ ಹೇಳಿದ್ದಾರೆ.

ನಿಮ್ಮ ಮನೆತನಕ್ಕೆ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇಲ್ಲದಿದ್ದರೂ ನೀವು ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿದ ಹಿನ್ನೆಲೆ ಹೇಳಬಹುದೆ?
ಹೌದು. ನಮ್ಮ ಮನೆತನ ಶಾಸ್ತ್ರೀಯ ಸಂಗೀತದ ಹಿನ್ನೆಲೆಯದ್ದಲ್ಲ. ಆದರೆ ನನ್ನ ತಂದೆ, ತಾಯಿ ಸಂಗೀತದ ಬಗ್ಗೆ ಒಲವು ಉಳ್ಳವರಾಗಿದ್ದರು. ನನಗೆ ಚಿಕ್ಕ ಪ್ರಾಯದಲ್ಲಿಯೇ ಸಂಗೀತದ ಒಲವು ಮೂಡಿತ್ತು. ಆದ್ದರಿಂದ ತಂದೆ, ತಾಯಿಯರು ಹಿರಿಯ ಸಂಗೀತದ ಗುರು ನೀಲಾ ಧಾಣೆಕರ್‌ ಅವರಲ್ಲಿ ಕರೆದೊಯ್ದು ಶಿಕ್ಷಣ ಕೊಡಿಸಿದರು. ಅನಂತರದಲ್ಲಿ ಆಗ್ರಾ- ಗ್ವಾಲಿಯರ್‌ ಘರಾಣೆಯ ಪಂ| ಯಶ್ವಂತ್‌ಬುವಾ ಜೋಷಿಯವರಲ್ಲಿ, ಗ್ವಾಲಿಯರ್‌ ಘರಾಣೆಯ ಪಂ| ಸಹಸ್ರಬುದ್ಧೆಯವರಲ್ಲಿ ಓದಿದೆ. ಹೀಗೆ ಕಲಿಕೆ-ಕಲಿಸುವಿಕೆ- ಕಛೇರಿ ನೀಡುವಿಕೆಯ ಸುದೀರ್ಘ‌ ಪಯಣವಿದೆ.

ಸಂಗೀತ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಬೇಕಾದ ಕೀಲಿ ಯಾವುದು?
ನಾವು ಸಮರ್ಪಣ ಭಾವದಿಂದ ಸತತ ಅಧ್ಯಯನ ನಡೆಸಬೇಕು. ಗುರುವಿನ ಸಮರ್ಥ ಮಾರ್ಗದರ್ಶನ ಬೇಕು. ತನ್ನದೇ ಆದ ವೈಶಿಷ್ಟéಗಳು ಬೇಕು. ಕೇವಲ ಪ್ರತಿಭೆಯಿಂದಲೇ ಜನಪ್ರಿಯರಾಗುತ್ತಾರೆನ್ನುವುದೂ ಅಷ್ಟು ಸರಿಯಲ್ಲ ಎಂದು ಕಾಣುತ್ತದೆ. ಲಕ್‌ ಕೂಡ ಪಾತ್ರ ವಹಿಸುತ್ತದೆ ಎಂದೆನಿಸುತ್ತದೆ. ನನ್ನ ಗುರು ಯಶ್ವಂತ್‌ಬುವಾ ದೊಡ್ಡ ಮಟ್ಟದ ಸಾಧಕರಾದರೂ ಅವರಿಗೆ ಸಿಗಬೇಕಾದಷ್ಟು ಜನಮನ್ನಣೆ ಸಿಕ್ಕಿರಲಿಲ್ಲ ಎನ್ನುವುದು ಇದಕ್ಕೆ ಉದಾಹರಣೆ.

ಯುವ ವೃಂದಕ್ಕೆ ಶಾಸ್ತ್ರೀಯ ಸಂಗೀತದ ಅಭಿರುಚಿ ಮೂಡಿಸಲು ಕೈಗೊಂಡಿರುವ ಕ್ರಮಗಳೇನು?
ನಮ್ಮ ಸಂಗೀತ ಪರಂಪರೆ ಮುಂದುವರಿಯಬೇಕಾಗಿದೆ. ಇದಕ್ಕೆ ತಕ್ಕುದಾದ ಪ್ರಚಾರವನ್ನು ಕೈಗೆತ್ತಿಕೊಳ್ಳಬೇಕು. ನಾನು ಯುವ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ಕೊಡುತ್ತಿದ್ದೇನೆ. ನನ್ನ ಮಗಳಿಗೂ ಸಂಗೀತ ಶಿಕ್ಷಣ ನೀಡುತ್ತಿದ್ದೇನೆ. ಅವಳಿನ್ನೂ ನನ್ನ ಜತೆ ಕಛೇರಿಯಲ್ಲಿ ಪಾಲ್ಗೊಂಡಿಲ್ಲ. ವಿದೇಶಗಳಲ್ಲೂ ಸಂಗೀತ ಶಿಕ್ಷಣ ಪ್ರಚಾರದ ಉದ್ದೇಶವಿದೆ.

Advertisement

ವಿದೇಶದಲ್ಲಿ ನೀವು ಪಾಲ್ಗೊಂಡ ಪ್ರಮುಖ ಕಾರ್ಯಕ್ರಮ ಯಾವುದು? ವಿದೇಶ ಮತ್ತು ಭಾರತೀಯ ಸಂಗೀತ ವಿದ್ಯಾರ್ಥಿಗಳಲ್ಲಿರುವ ವ್ಯತ್ಯಾಸಗಳೇನು?
ಲಂಡನ್‌ನಲ್ಲಿ ನಡೆದ ಝೀ ಟಿವಿಯ ಸರಿಗಮ ಕಾರ್ಯಕ್ರಮದಲ್ಲಿ ಕೆನಡಾ, ಪಾಕಿಸ್ಥಾನ, ನೇಪಾಲ, ಮಧ್ಯಪ್ರಾಚ್ಯ ದೇಶಗಳ ಕಲಾವಿದರು ಪಾಲ್ಗೊಂಡಿದ್ದರು. ನಾನು ಭಾರತವನ್ನು ಪ್ರತಿನಿಧಿಸಿದ್ದೆ. ಭಾರತೀಯ ವಿದ್ಯಾರ್ಥಿಗಳಲ್ಲಿರುವಷ್ಟು ಏಕಾಗ್ರತೆ, ಸಮರ್ಪಣ ಮನೋಭಾವ ವಿದೇಶಗಳ ವಿದ್ಯಾರ್ಥಿಗಳಲ್ಲಿ ಕಂಡುಬರುವುದಿಲ್ಲ.

– ಮಟಪಾಡಿ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next