Advertisement

Adithya L-1: ಭಾಸ್ಕರನ ಅಧ್ಯಯನಕ್ಕೆ ಕರುನಾಡಿನ ಕಣ್ಣು

12:36 AM Aug 31, 2023 | Team Udayavani |

ಬೆಂಗಳೂರು: ಭಾರತದ ಎರಡು ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳ ಕಣ್ಣು, ಕಿವಿಗಳಾಗಿ ಕರುನಾಡು ಮುಖ್ಯ ಭೂಮಿಕೆ ನಿಭಾಯಿಸಲಿದ್ದು, ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿದೆ.

Advertisement

ಹೌದು, ಭಾರತದ ಚಂದ್ರಯಾನದ ಕಿವಿಗಳು (ಆ್ಯಂಟೆನಾ) ಬ್ಯಾಲಾಳುವಿನಲ್ಲಿದ್ದರೆ ಸೆ.2ರಂದು ಉಡಾವಣೆಯಾಗಲಿರುವ ಆದಿತ್ಯ ಯಾನ – ಎಲ್‌1ದಲ್ಲಿ ಭೂಮಿಯ ಕಣ್ಣಿನಂತೆ ಕೆಲಸ ಮಾಡುವ ವಿಇಎಲ್‌ಸಿ ತಯಾರಾಗಿರುವುದು ಬೆಂಗಳೂರಿನ ಹೊಸಕೋಟೆಯಲ್ಲಿ!

ಕೋರಮಂಗಲದಲ್ಲಿರುವ ಭಾರತೀಯ ಖಭೌತ ವಿಜ್ಞಾನ ಸಂಸ್ಥೆ (ಐಐಎ)ಯು ಆದಿತ್ಯ-ಎಲ್‌ 1 ಯೋಜನೆಯ ಪ್ರಧಾನ ಪೇಲೋಡ್‌ ಆಗಿರುವ ವಿಸಿಬಲ್‌ ಎಮಿಷನ್‌ ಲೈನ್‌ ಕರೊನಾ ಗ್ರಾಫ್(ವಿಇಎಲ್‌ಸಿ)ರೂವಾರಿ. ಅಮೆರಿಕ, ಚೀನ ಮತ್ತು ಜರ್ಮನಿಯಲ್ಲಿ ಮಾತ್ರ ಲಭ್ಯವಿರುವ ವಿಇಎಲ್‌ಸಿ ಮಾದರಿಯ ತಂತ್ರಜ್ಞಾನವನ್ನು ಸ್ವದೇಶಿಯಾಗಿ ವಿನ್ಯಾಸ, ಜೋಡಣೆ ಮತ್ತು ಪರೀಕ್ಷೆ ನಡೆಸಿ ಅಭಿವೃದ್ಧಿಪಡಿಸಿದ ಸಂಪೂರ್ಣ ಶ್ರೇಯಸ್ಸು ಐಐಎಗೆ ಸಲ್ಲುತ್ತದೆ. ಐಐಎಯಲ್ಲಿ ಹಲವು ಕನ್ನಡಿಗ ವಿಜ್ಞಾನಿಗಳು, ಎಂಜಿನಿಯರ್‌, ತಂತ್ರಜ್ಞರು ಮತ್ತು ಅಧಿಕಾರಿಗಳು ಯೋಜನೆಯಲ್ಲಿ ತೊಡಗಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆ.

ಆದಿತ್ಯ ಯಾನದ ಯೋಜನೆಯ ಚಿಂತನೆಯ ಆರಂಭದ ಹಂತದಲ್ಲಿ (2008) ವಿಇಎಲ್‌ಸಿಯನ್ನು ಮಾತ್ರ ಕೊಂಡೊಯ್ಯುವ ಬಗ್ಗೆ ಚರ್ಚಿಸಲಾಗಿತ್ತು. ಬಳಿಕ ಆರು ಉಪಕರಣಗಳನ್ನು ಅಳವಡಿಸಲು ತೀರ್ಮಾನಿಸಲಾಗಿತ್ತು. ಇಡೀ ಆದಿತ್ಯ -1 ಯೋಜನೆಯ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸಲಿರುವ ವಿಇಎಲ್‌ಸಿ ಸೂರ್ಯನ ಹೊರ ಪದರದಲ್ಲಿನ ಕರೊನಾದಿಂದ ಹೊರ ಹೊಮ್ಮುವ ಸೌರ ಜ್ವಾಲೆಯ ಮೇಲೆ ಕಣ್ಣಿಡಲಿದೆ.

ಅತಿ ಸ್ವತ್ಛ ಲ್ಯಾಬ್‌ ನಿರ್ಮಾಣ

Advertisement

ವಿಇಎಲ್‌ಸಿಯ ನಿರ್ಮಾಣದ ಹಿಂದೆ ಐಐಎಯ 9 ವರ್ಷದ ಪರಿಶ್ರಮವಿದೆ. 2014ರಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಉಪಕರಣದ ನಿರ್ಮಾಣಕ್ಕೆ ಕ್ಲಾಸ್‌ 10 ಕ್ಲೀನ್‌ ರೂಮ್ಸ್‌ (ಎರಡನೇ ಅತಿ ಸ್ವತ್ಛತೆಯ ಮಾನದಂಡ) ಬೇಕಿತ್ತು. ಅಂದರೆ ಸಾಮಾನ್ಯ ಕೊಠಡಿಗಳಲ್ಲಿ ಒಂದು ಕ್ಯೂಬಿಕ್‌ ಮೀಟರ್‌ ವಿಸ್ತೀರ್ಣದಲ್ಲಿ ಸಾವಿರಾರು ಧೂಳು ಕಣಗಳಿದ್ದರೆ ಕ್ಲಾಸ್‌ 10 ಕ್ಲೀನ್‌ ರೂಮ್ಸ್‌ನಲ್ಲಿ ಗರಿಷ್ಠ ಹತ್ತು ಕಣಗಳು ಮಾತ್ರ ಇರಲು ಸಾಧ್ಯ. ಹೊಸಕೋಟೆಯಲ್ಲಿರುವ ಐಐಎಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿನ ಕೇಂದ್ರ(ಕ್ರೆಸ್ಟ್‌)ದಲ್ಲಿನ ಎಂಜಿಕೆ ಮೆನನ್‌ ಲ್ಯಾಬ್‌ನಲ್ಲಿ ಇಂಥದ್ದೊಂದು ವ್ಯವಸ್ಥೆ ರೂಪಿಸಿ  9 ವರ್ಷಗಳಿಂದ ನಿರಂತರ ಪ್ರಯತ್ನ ನಡೆಸಿ ಐಐಎಯ ವಿಇಎಲ್‌ಸಿಯನ್ನು ರೂಪಿಸಿದೆ. ಈ ಕೇಂದ್ರದ ಮೂಲಕ ಇಂಥದ್ದೊಂದು ಸುಸಜ್ಜಿತ, ಬೃಹತ್‌ ಪ್ರಯೋಗಾಲಯ ಹೊಂದಿರುವ ವಿಶ್ವದ ಬೆರಳೆಣಿಕೆಯ ಸಂಸ್ಥೆಗಳ ಸಾಲಿಗೆ ಐಐಎ ಸೇರಿದೆ.

ವಿಇಎಲ್‌ಸಿ ಕೆಲಸವೇನು?

90 ಕೆಜಿ ಭಾರದ 1.7 ಮೀ x 1.1 ಮೀx0.7 ಮೀ ಗಾತ್ರದ ವಿಇಎಲ್‌ಸಿಗೆ ಎಲ್‌ ಪಾಯಿಂಟ್‌ (ಭೂಮಿಯಿಂದ 15 ಲಕ್ಷ ಕಿಮೀ ದೂರ) ನಿಂದ ಸೂರ್ಯನ ಕರೊನಾವನ್ನು ತದೇಕಚಿತ್ತದಿಂದ ಗಮನಿಸುತ್ತ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತದೆ. ಸೂರ್ಯನ ಮೇಲ್ಮೆ„ಯ ತಾಪ 6 ಸಾವಿರ ಡಿಗ್ರಿ ಸೆಲ್ಸಿಯಸ್‌ಗಳಿದ್ದರೆ ಹೊರ ಮೇಲ್ಮೆ„ ಕರೊನಾದ ತಾಪ ಮಿಲಿಯನ್‌ ಡಿಗ್ರಿಗೆ ಯಾಕೆ, ಹೇಗೆ ಏರುತ್ತದೆ ಎಂಬುದರ ಅಧ್ಯಯನಕ್ಕೆ ವಿಇಎಲ್‌ಸಿ ನೀಡುವ ಮಾಹಿತಿ ಪ್ರಮುಖ ಪಾತ್ರ ವಹಿಸಲಿದೆ. ಇದರ ಜತೆಗೆ ಸೌರ ಜ್ವಾಲೆಗಳ ಮಾಹಿತಿಯೂ ಲಭಿಸಲಿದೆ.

ಕನ್ನಡಿಗರೇ ಹೆಚ್ಚು

ನಾನು ಮೂಲತಃ ಕುಂದಾಪುರದ ಕೋಟದವ. ಈ ಯೋಜನೆಯಲ್ಲಿ ಸುಮಾರು 25 ಮಂದಿ ವಿಜ್ಞಾನಿ, ಎಂಜಿನಿಯರ್‌, ತಂತ್ರಜ್ಞರು, ಆಡಳಿತ ಸಿಬಂದಿ ಶ್ರಮಿಸಿದ್ದಾರೆ ಎಂದು ಐಐಎನ ಹಿರಿಯ ವಿಜ್ಞಾನಿ ಬಿ. ರವೀಂದ್ರ ಹೇಳಿದ್ದಾರೆ. ಜತೆಗೆ, ಈ ಪೈಕಿ ಸುಮಾರು ಹತ್ತು ಮಂದಿ ಕನ್ನಡಿಗರಿದ್ದಾರೆ. ಈ ಯೋಜನೆಯ ಪ್ರಧಾನ ಅನ್ವೇಷಣಾಧಿಕಾರಿಯಾಗಿದ್ದ ರಾಘವೇಂದ್ರ ಪ್ರಸಾದ್‌ ಅವರು ಕನ್ನಡಿಗರು. ಈ ಯೋಜನೆಯು ಭಾರತದ ಪಾಲಿಗೆ ಅತ್ಯಂತ ಮಹತ್ವದಾಗಿದೆ. ನಾವು ಇಲ್ಲಿ ಅನೇಕ ಮಹತ್ವದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಭವಿಷ್ಯದಲ್ಲಿ ಅತ್ಯಂತ ಉಪಯುಕ್ತ ಯೋಜನೆಯಾಗಿ ರೂಪುಗೊಳ್ಳಲಿದೆ. ಸೌರ ಜ್ವಾಲೆಗಳಿಂದ ಭೂಮಿಯಲ್ಲಿನ ಸಂವಹನ, ವಿದ್ಯುತ್‌ ವ್ಯವಸ್ಥೆಗಳ ರಕ್ಷಣೆಯಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next