ಹೊಸದಿಲ್ಲಿ: ತನ್ನ ಕಾಲಿನ ಅಳತೆಯ ಶೂ ಸಿಗದೆ ತನ್ನೂರು ಧಿಂಗ್‌ನ ಗದ್ದೆಗಳಲ್ಲಿ ಹಾಗೂ ರಸ್ತೆಗಳಲ್ಲಿ ಬರಿಗಾಲಲ್ಲಿ ಓಡುತ್ತ ಅಭ್ಯಾಸ ಮಾಡಿದ ಆಸ್ಸಾಮ್‌ನ ರೈತನ ಮಗಳು ಹಿಮಾ ದಾಸ್ ಪರಿಶ್ರಮದ ಮೂಲಕವೇ ಅಮೋಘ ಸಾಧನೆ ಮೆರೆದು ಕ್ರೀಡಾಭಿಮಾನಿಗಳ ಕಣ್ಮಣಿಯಾದ್ದಾರೆ. ಈಗ ಜರ್ಮನಿಯ ವಿಶ್ವವಿಖ್ಯಾತ ಕ್ರೀಡಾ ಶೂಗಳ ತಯಾರಕ ಸಂಸ್ಥೆ ಅದಿದಾಸ್ ಹಿಮಾ ದಾಸ್ ಹೆಸರನ್ನು ತನ್ನ ವಿಶಿಷ್ಟ ವಿನ್ಯಾಸದ ಶೂಗಳ ಮೇಲೆ ಮುದ್ರಿಸುವ ಮೂಲಕ ಗೌರವ ಸೂಚಿಸಿದೆ. ಇದಕ್ಕಾಗಿ ಯುವ ಓಟಗಾರ್ತಿಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.
“ಇತಿಹಾಸ ರಚಿಸಲು ಇಲ್ಲಿದ್ದೇನೆ’
ಬಲಗಾಲಿನ ಶೂ ಮೇಲೆ ಹಿಮಾ ದಾಸ್ ಹೆಸರು, ಎಡಗಾಲಿನ ಶೂ ಮೇಲೆ “ಇತಿಹಾಸ ರಚಿಸಲು ಇಲ್ಲಿದ್ದೇನೆ’ (ಕ್ರಿಯೇಟ್ ಹಿಸ್ಟರಿ) ಎಂಬ ಬರಹ ಇರಲಿದೆ. ಈ ವರ್ಷದ ಅರ್ಜುನ ಪ್ರಶಸ್ತಿಗೆ ಹೆಸರು ಶಿಫಾರಸಾಗಿರುವ ಹಿಮಾ ಈ ಹೊಸ ಶೂಗಳ ಚಿತ್ರವನ್ನು ಖುಷಿಯಿಂದಲೇ ಟ್ವೀಟ್ ಮಾಡಿದ್ದಾರೆ. ಇದೀಗ ವೈರಲ್ ಆಗಿದೆ.
ಧಿಂಗ್ ಎಕ್ಸ್‌ಪ್ರೆಸ್ ಎಂದೇ ಪ್ರಖ್ಯಾತರಾಗಿರುವ ಹಿಮಾ 18ನೇ ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ರಿಲೇಯಲ್ಲಿ ಚಿನ್ನ, 4×400 ಮಿಶ್ರ ರಿಲೇ ಹಾಗೂ 400 ಮೀ. ಓಟದಲ್ಲಿ ಬೆಳ್ಳಿಯ ಪಕದ ಗಳಿಸಿದ್ದಾರೆ. ಮೊನ್ನೆಯಷ್ಟೇ ಮುಗಿದ 20 ವರ್ಷ ವಯೋಮಿತಿಯ ವಿಶ್ವ ಚಾಂಪಿಯನ್‌ಶಿಪ್ ಓಟದಲ್ಲೂ ಚಿನ್ನ ಗೆದ್ದಿದ್ದಾರೆ.
ಮುಂದಿನ ವರ್ಷ ದಕ್ಷಿಣ ಏಶ್ಯ ಗೇಮ್ಸ್, ವಿಶ್ವ ಚಾಂಪಿಯನ್ ಶಿಪ್ ಪದಕಗಳ ಮೇಲೂ ಹಿಮಾ ಕಣ್ಣಿಟ್ಟಿ ದ್ದಾರೆ. ಈ ಮೂಲಕ ಅವರು ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಡುವ ಭರವಸೆಯನ್ನೂ ಮೂಡಿಸಿದ್ದಾರೆ.