Advertisement

ಅಧ್ಯಾದೇಶಕ್ಕೆ ರಾಷ್ಟ್ರಪತಿ ಅಂಕಿತ; ಜಲ್ಲಿಕಟ್ಟು ಪುನರಾರಂಭ

09:16 AM Jan 22, 2017 | |

ಚೆನ್ನೈ: ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ತಮಿಳುನಾಡಿನ ಗ್ರಾಮೀಣ ಕ್ರೀಡೆ ಜಲ್ಲಿಕಟ್ಟು ಪುನರಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ತಮಿಳುನಾಡಿನಾದ್ಯಂತ ಭುಗಿಲೆದ್ದ ಭಾರೀ ಪ್ರತಿಭಟನೆಗೆ ಬೆಚ್ಚಿದ ತಮಿಳುನಾಡು ಸರಕಾರ ಅಧ್ಯಾದೇಶ ಹೊರಡಿಸುವ ಮೂಲಕ ಜಲ್ಲಿಕಟ್ಟು ನಡೆಸಲು ಅನುಮತಿ ನೀಡಿದೆ. 

Advertisement

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅನುಮೋದನೆಯ ಬಳಿಕ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಶನಿವಾರ ಸಂಜೆ ಅಧ್ಯಾದೇಶಕ್ಕೆ ಅಂತಿಮ ಮೊಹರು ಹಾಕಿದರು. ಈ ಮೂಲಕ ನಿಷೇಧಿತ ಜಲ್ಲಿಕಟ್ಟು ಸಕ್ರಮಗೊಂಡಂತಾಗಿದೆ. ಕೇವಲ 24 ತಾಸುಗಳ ಅವಧಿಯಲ್ಲಿ ಅಧ್ಯಾದೇಶದ ಪ್ರಕ್ರಿಯೆ ಮುಗಿದಿದ್ದುದು ಐತಿಹಾಸಿಕ ಎಂದು ಹೇಳಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್‌ ಸೆಲ್ವಂ ರವಿವಾರ ಬೆಳಗ್ಗೆ 10 ಗಂಟೆಗೆ ಜಲ್ಲಿಕಟ್ಟುವಿನ ಹೃದಯ ಭಾಗ ವೆಂದು ಹೇಳಲಾಗುವ ಅಲಂಗನಲ್ಲೂರಿನಲ್ಲಿ ತಾವೇ ಸ್ವತಃ ಕ್ರೀಡೆಗೆ ಚಾಲನೆ ನೀಡಲಿದ್ದಾರೆ. 

ತಮಿಳುನಾಡಿನಲ್ಲಿ ಸತತ 5 ದಿನಗಳಿಂದ ನಡೆದ ಲಕ್ಷಾಂತರ ಜನರ ಹೋರಾಟ, ಬಂದ್‌ಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶುಕ್ರವಾರ ತನ್ನ  ತಮಿಳುನಾಡು ಪ್ರಾಣಿ ಹಿಂಸಾ ಕಾಯ್ದೆ-1960ಗೆ ತಿದ್ದುಪಡಿ ಮಾಡಿ ಅಧ್ಯಾದೇಶ ಹೊರ ಡಿಸಲು ಅನುವು ಮಾಡಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಧ್ಯಾದೇಶಕ್ಕೆ ಕೇಂದ್ರದ ಅನುಮೋದನೆ  ದೊರೆತ ಬಳಿಕವೂ ಚೆನ್ನೈಯ ಮರೀನಾ ಬೀಚ್‌ನಲ್ಲಿ ನೆರೆದಿರುವ ಪ್ರತಿಭಟನಕಾರರು ಹಿಂದೆ ಸರಿಯುವ ಆಸಕ್ತಿ ಹೊಂದಿರಲಿಲ್ಲ. ಸಮಸ್ಯೆಗೆ ಪೂರ್ಣ ಪರಿಹಾರ ದೊರೆಯ ಬೇಕೆಂದು ಅವರು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದರು. ಕೊನೆಗೆ ಮುಂಬಯಿಯಲ್ಲಿದ್ದ ರಾಜ್ಯ ಪಾಲರು ಚೆನ್ನೈಗೆ ಆಗಮಿಸಿ ಸಹಿ ಹಾಕುತ್ತಿದ್ದಂತೆಯೇ ಪ್ರತಿಭಟನಕಾರರು ವಿಜಯೋತ್ಸವ ಆಚರಿಸಿದರು.

Advertisement

ಪ್ರಧಾನಿಗೆ ಧನ್ಯವಾದ: ಅಧ್ಯಾದೇಶ ಹೊರಡಿಸಲು ಸಕ್ರಿಯ ನೆರವು ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಧನ್ಯವಾದ ಹೇಳಿದ್ದಾರೆ. 

ಹೊಸ ಕಾಯ್ದೆ ಜಾರಿ: ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು  ತಮಿಳುನಾಡು ಪ್ರಾಣಿ ಹಿಂಸೆ ತಡೆ ಕಾಯ್ದೆ-1960ಗೆ ತಿದ್ದುಪಡಿ ಮಾಡಿ ತಮಿಳುನಾಡು ವಿಧಾನ ಸಭೆಯಲ್ಲಿ ಮಸೂದೆ ಮಂಡಿಸಲಾಗುವುದು. ಜ.23ರಿಂದ ಶುರುವಾಗುವ ಅಧಿವೇಶನದಲ್ಲಿ ಈ ಕುರಿತ ಕರಡು ಮಸೂದೆ ಯನ್ನು ಮಂಡಿಸಿ ಸದ್ಯ ಚಾಲ್ತಿಯಲ್ಲಿರುವ ಅಧ್ಯಾದೇಶವನ್ನು ಬದಲಿಸಲಾಗುವುದೆಂದು ಸೆಲ್ವಂ ತಿಳಿಸಿದ್ದಾರೆ.

ಜಲ್ಲಿಕಟ್ಟು  ನಿಷೇಧ ಏಕೆ ?
2011ರಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ, ಗೂಳಿಗಳನ್ನು ತರಬೇತುಗೊಳಿಸಿ ಕ್ರೀಡೆಗೆ ಬಳಸುವುದನ್ನು ನಿಷೇಧಿಸಿತ್ತು. 2014ರಲ್ಲಿ ಇದನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ ಪ್ರಾಣಿ ಹಿಂಸೆಗೆ ಕಾರಣ ವಾಗುವ ಜಲ್ಲಿಕಟ್ಟು, ಕರ್ನಾಟಕದ ಕಂಬಳ, ಮಹಾರಾಷ್ಟ್ರದ ಎತ್ತಿನಗಾಡಿ ಓಟವನ್ನು ನಿಷೇಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next