ಸಿಂಧನೂರು: ನಗರದ ಆರಾಧ್ಯದೈವ ಆದಿಶೇಷನ ಜಾತ್ರಾ ಮಹೋತ್ಸವ ಶ್ರಾವಣ ಕಡೆ ಸೋಮವಾರ ಸಂಜೆ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಆದಿಶೇಷನ ದೇವಸ್ಥಾನದಿಂದ ಹೊರಟ ಉಚ್ಛಾಯ ಸುಕಾಲಪೇಟೆ ರಸ್ತೆ ಮೂಲಕ ಬನ್ನಿ ಮಹಾಂಕಾಳಿ ದೇವಸ್ಥಾನಕ್ಕೆ ತಲುಪಿತು. ಶ್ರದ್ಧಾ ಮತ್ತು ಭಕ್ತಿಯಿಂದ ನೂರಾರು ಭಕ್ತರು ಉಚ್ಛಾಯ ಎಳೆದರು. ಉಚ್ಛಾಯ ತೆರಳುತ್ತಿದ್ದಂತೆ ಮಂತ್ರ ಘೋಷಗಳು ಮೊಳಗಿದವು. ಭಕ್ತಾದಿಗಳು ಉಚ್ಛಾಯದ ಮೇಲೆ ಬಾಳೆಹಣ್ಣು, ಉತ್ತತ್ತಿ, ಹೂ ತೂರಿ ಭಕ್ತಿ ಸಮರ್ಪಿಸಿದರು. ಡೊಳ್ಳು, ಶಹನಾಯಿ, ಭಜನೆ ಮತ್ತಿತರರ ವಾದ್ಯ ಮೇಳ, ಕುಂಭ ಕಳಸ ಹೊತ್ತ ಸುಮಂಗಲೆಯರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಪ್ರಭಾರಿ ತಹಶೀಲ್ದಾರ ಶಂಶಾಲಂ ಉಚ್ಛಾಯ ಮಹೋತ್ಸವಕ್ಕೆ ಚಾಲನೆ ನೀಡಿದರು. ರಂಭಾಪುರಿ ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಬಂಗಾರಿ ಕ್ಯಾಂಪಿನ ಸಿದ್ಧರಾಮ ಶರಣರು, ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ದೇವಸ್ಥಾನ ಸಮಿತಿಯ ಶರಣೇಗೌಡ ಬೆನ್ನೂರು, ಮುಖಂಡರಾದ ಚೆನ್ನನಗೌಡ ಪೊಲೀಸ್ ಪಾಟೀಲ, ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ಲಿಂಗರಾಜ ಹೂಗಾರ, ಮರಿಯಪ್ಪ ಬಂಡಿ, ಪಿಎಸ್‌ಐ ವೀರಾರೆಡ್ಡಿ ಭಾಗವಹಿಸಿದ್ದರು.