ಮದುವೆ ಸಂಧಾನ: ಆಕ್ಸ್‌ಫರ್ಡ್‌ನಿಂದ ಬಂದ ಮೇಲೆ, ಕಾರ್ನಾಡರು ಮದುವೆಯಾಗೋಣ ಎಂದು ಮನಸ್ಸು ಮಾಡಿದ್ದರಂತೆ. ಮತ್ತು ಅವರ ಆ ನಿರ್ಧಾರಕ್ಕೆ ಅವರಿಗೇ ಆಶ್ಚರ್ಯವಾಗಿತ್ತಂತೆ. ಆದರೂ, ಒಬ್ಬ ಸುಸ್ವರೂಪಿ, ಬಿ.ಎ.ಆಗಿರುವ ಹುಡುಗಿಯೊಡನೆ ಡಿನ್ನರ್, ಸಿನಿಮಾ ಎಂದೆಲ್ಲಾ ಸುತ್ತಾಡಿದ್ದರು. ಇನ್ನೇನು ಆ ಹುಡುಗಿಗೆ “ಹೂಂ’ ಎನ್ನಬೇಕು ಅನ್ನುವಷ್ಟರಲ್ಲಿ, ಆಯಿ ಕಡೆಯಿಂದ ಪ್ರತಿರೋಧ ವ್ಯಕ್ತವಾಯ್ತು. “ನಿನಗೆ ಅಭ್ಯಂತರವಿದ್ದರೆ, ನಾನು ಆಕೆಯ ಜೊತೆಗೆ ಡಿನ್ನರ್, ಸಿನಿಮಾ ಎನ್ನುತ್ತಿದ್ದಾಗ ಏಕೆ ತಡೆಯಲಿಲ್ಲ? ಈಗ ಎಲ್ಲ ಕೂಡಿ ಬಂದಾಗ ಆ ಹುಡುಗಿಗೆ ಅವಮಾನ ಮಾಡಬೇಕೆನ್ನುತ್ತೀಯ?’ ಎಂದು ವಾದಿಸಿ, ಆಯಿಯೊಂದಿಗೆ ಮಾತುಬಿಟ್ಟಿದ್ದರು. ಕೊನೆಗೆ, ಬಾಪ್ಪಾ ಮಧ್ಯೆ ಪ್ರವೇಶಿಸಿ ಕಾರ್ನಾಡರನ್ನು ಸಮಾಧಾನಪಡಿಸಬೇಕಾಯ್ತು.
ಮೂತ್ರದಿಂದ ಮೃತ್ಯು ಗೆದ್ದ ಕತೆ: ಒಮ್ಮೆ ಕಾರ್ನಾಡರಿಗೆ, ಏನನ್ನೂ ನುಂಗಲಾಗದಷ್ಟು, ಕೆಮ್ಮಲೂ ಆಗದಷ್ಟು ಗಂಟಲು ಬಾತುಕೊಂಡಿತ್ತು. ಅದನ್ನು ನೋಡಿದ ಅವರ ಆಯಿ-ಬಾಪ್ಪಾ ಬಹಳ ಹೆದರಿಕೊಂಡಿದ್ದರು. ಆತಂಕಕ್ಕೆ ಕಾರಣವೇನೆಂದು ಕಾರ್ನಾಡರು ಆಯಿಯನ್ನು ಕೇಳಿದಾಗ- “ನೀನು ಮುಂಜಾನೆಯಿಂದ ಉಚ್ಚೆ ಹೊಯ್ದಿಲ್ಲ. ನಿನ್ನ ಮೂತ್ರಪಿಂಡ ನಿಷ್ಕ್ರಿಯವಾಗಿರೋ ಸಾಧ್ಯತೆಯಿದೆ. ಹಾಗೆ ಆಗಿದ್ದರೆ ನಿನ್ನ ಶರೀರದೊಳಗಿನ ಕಲ್ಮಷ ತೊಳೆದು ಹೋಗದೆ ನಿನ್ನ ದೇಹವಿಡೀ ವಿಷವಾಗುತ್ತಿರಬಹುದು. ಬೇಗ ಮೂತ್ರವಾಗದಿದ್ದರೆ ನೀನು ಸಾಯಲೂಬಹುದು!’ ಎಂದಳಂತೆ. ಅವತ್ತು ಸಂಜೆಯವರೆಗೂ ಕಾರ್ನಾಡರು ಮೃತ್ಯುವನ್ನು ಕುರಿತೇ ಆಲೋಚಿಸುತ್ತಿದ್ದರು. ಪ್ರಜ್ಞೆ ಕಳಕೊಂಡು, ಗೊತ್ತೇ ಆಗದಂತೆ ಸಾವಿನಲ್ಲಿ ತೇಲಿಹೋಗುವುದು ಕೇವಲ ಭಾಗ್ಯವಂತರ ಹಣೆಬರಹ ಎಂದೆಲ್ಲಾ ಯೋಚಿಸಿದ್ದರಂತೆ. ಸುದೈವದಿಂದ ಅಂದು ಹೊತ್ತು ಮುಳುಗುತ್ತಿದ್ದಂತೆ ಎಲ್ಲ ಸರಿ ಹೋಯಿತು. ಕಾರ್ನಾಡರು ಉಚ್ಚೆ ಹೊಯ್ದರು, ಅತ್ತ ಬಾಪ್ಪಾ- ಆಯಿ ಮುಖವರಳಿತು.
ಸಂಸ್ಕಾರದ ಉದ್ದಗಲ ಬ್ರಾಹ್ಮಣರೇ…: “ಸಂಸ್ಕಾರ’ದ ಕತೆ ಬ್ರಾಹ್ಮಣ ವಿರೋಧಿಯಾಗಿದೆ ಎಂದು ಸೆನ್ಸಾರ್ ಬೋರ್ಡ್ ನವರು ಬಿಡುಗಡೆಗೆ, ಪ್ರತಿಬಂಧ ಹಾಕಿದ್ದರು. ಆಗ ಕಾರ್ನಾಡರು, ಬೋರ್ಡಿನ ಚೇರ್‌ಮನ್‌ಗೆ ಫೋನ್ ಮಾಡಿ, “ಕಾದಂಬರಿ ಬರೆದವರು ಬ್ರಾಹ್ಮಣರು. ಪ್ರಕಟಿಸಿದವರು ಬ್ರಾಹ್ಮಣರು, ನಾನು ಬ್ರಾಹ್ಮಣ. ಕಲಾನಿರ್ದೇಶಕ- ಸಹ ನಿರ್ದೇಶಕರೂ ಬ್ರಾಹ್ಮಣರು, ಭಾಗವಹಿಸಿದವರಲ್ಲಿ ಹೆಚ್ಚು ಜನ ಬ್ರಾಹ್ಮಣರು, ಅಂದಾಗ ಚಿತ್ರ ಬ್ರಾಹ್ಮಣ ವಿರೋಧಿಯಾಗುವುದು ಹೇಗೆ ಸಾಧ್ಯ?’ ಎಂದು ಕೇಳಿದರಂತೆ. ಆಗ ಆ ಕಡೆಯಿಂದ, ತಮಗದು ಗೊತ್ತಿರಲಿಲ್ಲ ಎಂಬ ಉತ್ತರ ಬಂತು. ನಿಷೇಧ ಹಿಂತೆಗೆದುಕೊಳ್ಳಿ ಎಂದಾಗ, ಫೈಲು ದಿಲ್ಲಿಯಲ್ಲಿ ಮಿನಿಸ್ಟ್ರಿಗೆ ಅಪೀಲು ಆಗಿ ಹೋಗಿದೆ. ಅವರೇ ನಿರ್ಧರಿಸಲಿ ಎಂದರು. ಸೆನ್ಸಾರ್ ಆಫೀಸಿನ ಮದ್ರಾಸ್ ಶಾಖೆಯವರು ಚಿತ್ರ ನೋಡಿ, ದಿಗ್ಭ್ರಾಂತರಾಗಿ ಅದನ್ನು ಮುಂಬೈ ಆಫೀಸಿಗೆ ಸಾಗಿಸಿದ್ದರಂತೆ. ಅಲ್ಲಿಯವರು ಚಿತ್ರವನ್ನೇ ನಿಷೇಧಿಸಿಬಿಟ್ಟಿದ್ದರಂತೆ. ಕೊನೆಗೂ ನಿಷೇಧ ತೆರವಾಗಿ, ಸಿನಿಮಾ ಬಿಡುಗಡೆಯಾದಾಗ ಕನ್ನಡ ಚಿತ್ರರಂಗಕ್ಕೆ ಭಾರತೀಯ ಮಟ್ಟದಲ್ಲಿ ಅಪೂರ್ವ ಮನ್ನಣೆ ದೊರೆಯಿತು.
ಸ್ನಾನ- ಮಾನ- ಸನ್ಮಾನ: ಕಾರ್ನಾಡರು ಮೊಡ್ಲಿನ್ ಕಾಲೇಜಿನ ಜೂನಿಯರ್ ಕಾಮನ್ ರೂಮ್‌ನ ಅಧ್ಯಕ್ಷರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವರನ್ನು ಆಕರ್ಷಿಸಿದ್ದು ಆ ಪದವಿಯ ಅಧಿಕಾರವಲ್ಲ, ಆ ಪದವಿಗೆ ಮೀಸಲಾಗಿದ್ದ ಪ್ರಶಸ್ತ ವಾಸಸ್ಥಾನ, ವಿಶಾಲ ಪಡಸಾಲೆ, ಸ್ವತಂತ್ರ ಮಲಗುವ ಕೋಣೆ, ಸ್ವಂತ ಟೆಲಿಫೋನ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸ್ವಂತ ಸ್ನಾನಗೃಹ. ಯಾಕಂದ್ರೆ, ಅವರ ಕಾಲೇಜಿನಲ್ಲಿ ಶವರ್ ಇರಲಿಲ್ಲ. ಹೊರಗಡೆ ಸಾಲಾಗಿ ಇದ್ದ ಸ್ನಾನಗೃಹಗಳಲ್ಲಿ ಉದ್ದನೆಯ ಟಬ್‌ಗಳಿದ್ದವು. ಅವುಗಳಲ್ಲಿ ನೀರು ತುಂಬಿ, ಒಳಗಿಳಿದು ಕುಳಿತು ಸ್ನಾನ ಮಾಡಬೇಕಿತ್ತು. ನಿಂತ ನೀರಲ್ಲೇ ಸ್ನಾನ ಮುಗಿಸಿ, ತೂಬು ತೆಗೆದು, ನೀರು ಬಿಟ್ಟು ಹೊರಬರಬೇಕು. ಮೊದಲು ಸ್ನಾನ ಮಾಡಿದವರ ಕುರುಹಾಗಿ ಅರ್ಧ ಇಂಚು ಕೊಳೆ ಇರುತ್ತಿತ್ತು. ಆಗೆಲ್ಲಾ ಕಾರ್ನಾಡರಿಗೆ ಸ್ನಾನವೇ ಬೇಡ ಅನ್ನಿಸುತ್ತಿತ್ತು. ಅದಕ್ಕೇ, ಜೆಸಿಆರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು.