ಬೆಂಗಳೂರು: ಪೊಲೀಸರ ಡೊಳ್ಳುಹೊಟ್ಟೆಯಿಂದ ಇಲಾಖೆ ಮುಜುಗರಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್ ಇಲಾಖಾ ಸಿಬ್ಬಂದಿ ಹೊಟ್ಟೆ ಕರಗಿಸಿಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ.
ಡೊಳ್ಳು ಹೊಟ್ಟೆ ಇರುವ ಪೊಲೀಸರನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವ ದೃಷ್ಠಿಯಿಂದ ಹಾಗೂ ಆರೋಗ್ಯದ ಸಲುವಾಗಿ ಈ ಆದೇಶ ಹೊರಡಿಸಿದ್ದು, ರಾಜ್ಯದ 12 ಕೆಎಸ್‌ಆರ್‌ಟಿಪಿ ಪಡೆಗಳ ಕಮಾಂಡೆಂಟ್‌ಗಳು ತಮ್ಮ ಕೆಳಸ್ತರದ ಅಧಿಕಾರಿಗಳ ತೂಕದ ಬಗ್ಗೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ. ಕೆಎಸ್‌ಆರ್‌ಪಿ ಪ್ರಹಾರ ದಳವಾಗಿ ಕರ್ತವ್ಯ ನಿರ್ವಹಿಸುತ್ತಿದೆ.
ಈ ಪಡೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಉತ್ತಮ ಆರೋಗ್ಯ ಹೊಂದಿರಬೇಕು. ಆದರೆ, ಇತ್ತೀಚೆಗೆ ಕೆಲಸದೊತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಎತ್ತರಕ್ಕೆ ತಕ್ಕಂತೆ ತೂಕ ಹೊಂದಬೇಕು. ನಿಗದಿಗಿಂತ ಹೆಚ್ಚಿನ ತೂಕ ಹೊಂದಿದರೆ, ವಿವಿಧ ಕಾಯಿಲೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಅಲ್ಲದೆ, ಕೆಎಸ್‌ಆರ್‌ಪಿಯಲ್ಲಿ ವಿವಿಧ ಕಾರಣಗಳಿಂದ ನಿಧನ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿದಾಗ ಮೂಲ ಕಾರಣ ಸಿಬ್ಬಂದಿಯ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ವ್ಯಾಯಾಮ ಮಾಡದಿರುವುದೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಡೊಳ್ಳು ಹೊಟ್ಟೆ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿಯನ್ನು ಅಯಾ ಪಡೆಯ ಕಮಾಂಡೆಂಟ್‌ಗಳು ವಹಿಸಬೇಕು. ಅಗತ್ಯಕ್ಕಿಂದ ಹೆಚ್ಚಿನ ತೂಕವುಳ್ಳ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತ್ಯೇಕಿಸಿ ಉತ್ತಮವಾದ ಹಾಗೂ ನಿಯಮಿತವಾದ ಪೌಷ್ಠಿಕ ಆಹಾರ ಪದ್ಧತಿ ಹಾಗೂ ನಿತ್ಯ ಯೋಗ, ಈಜು ಮತ್ತು ಇತರೆ ವ್ಯಾಯಾಮಗಳನ್ನು ಮಾಡಿ ತೂಕವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಸೂಕ್ತ ನಿಗಾವಹಿಸಬೇಕು.
ಹಾಗೆಯೇ ಪ್ರತಿ ತಿಂಗಳು ಸಿಬ್ಬಂದಿ ತೂಕವನ್ನು ಪರಿಶೀಲಿಸಿ ಪುಸ್ತಕದಲ್ಲಿ ನಮೂದಿಸಬೇಕು ಎಂದು ಭಾಸ್ಕರ್ ರಾವ್ ಆದೇಶಿಸಿದ್ದಾರೆ. ಈ ಜ್ಞಾಪನಾ ಕೆಎಸ್‌ಆರ್‌ಪಿ ಪೊಲೀಸರು ಮತ್ತು ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.