Advertisement

Excise Department: ಸಿಎಲ್‌-7 ಸನ್ನದು ಪಡೆಯಲು ಸೂಕ್ತ ನಿಯಮ- ಆರ್‌.ಬಿ. ತಿಮ್ಮಾಪುರ

11:21 PM Dec 05, 2023 | Team Udayavani |

ಬೆಳಗಾವಿ: ಅಬಕಾರಿ ಇಲಾಖೆಯ ಸಿಎಲ್‌-7 (ಬೋರ್ಡಿಂಗ್‌ ಅಂಡ್‌ ಲಾಡ್ಜಿಂಗ್‌) ಸನ್ನದು ಪಡೆಯುವಾಗ ಕಟ್ಟಡದ ವಿನ್ಯಾಸ, ಎಷ್ಟು ಕೊಠಡಿಗಳಿರಬೇಕು? ಎಷ್ಟು ಅಳತೆಯಲ್ಲಿರಬೇಕು? ವಾಹನ ನಿಲುಗಡೆ ಪ್ರದೇಶ ಇರಬೇಕು ಎಂಬಿತ್ಯಾದಿ ನಿಯಮಗಳಿಲ್ಲ. ಹೀಗಾಗಿ ಈ ಬಗ್ಗೆ ಸೂಕ್ತ ನಿಯಮ ರೂಪಿಸುವುದಾಗಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, 2020-21 ರಲ್ಲಿ 10 ಸಿಎಲ್‌-7 ಸನ್ನದು ಮಂಜೂರು ಮಾಡಿದ್ದು, 2021-22ರಲ್ಲಿ 18 ಹಾಗೂ 2022-23ರಲ್ಲಿ 24 ಸನ್ನದುಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೆ, ಪ್ರಸಕ್ತ ವರ್ಷ ಅಕ್ಟೋಬರ್‌ವರೆಗೆ 4 ಸಿಎಲ್‌-7 ಸನ್ನದುಗಳನ್ನು ಮಂಜೂರು ಮಾಡಿದೆ ಎಂದರು.

ಅಧಿಕಾರಿ ಮದ್ಯದಂಗಡಿ ಪಾಲುದಾರ
ನಾರಾಯಣಸ್ವಾಮಿ ಮಾತನಾಡಿ, ಕೋಲಾರದಲ್ಲಿ ರಂಗಪ್ಪ ಎಂಬ ಸೂಪರಿಂಟೆಂಡೆಂಟ್‌ ನಿಯಮ ಮೀರಿ ಪರವಾನಿಗೆಗಳನ್ನು ನೀಡಿದ್ದಾರೆ. ಸಾಲದ್ದಕ್ಕೆ ಎಲ್ಲ ಮದ್ಯದಂಗಡಿಗಳಲ್ಲೂ ಸಹಭಾಗಿತ್ವ ಹೊಂದಿದ್ದಾರೆ. ವಾಹನ ನಿಲುಗಡೆಗೆ ಜಾಗ ಇಲ್ಲದ ಹೆದ್ದಾರಿ ಬದಿಯಲ್ಲೂ ಸಿಎಲ್‌-7ಗೆ ಅನುಮತಿ ನೀಡಲಾಗಿದೆ. ಸಾಕಷ್ಟು ಅಪಘಾತ ಪ್ರಕರಣಗಳು ಸಂಭವಿಸಿವೆ. 18 ವರ್ಷದಿಂದ ಕೋಲಾರದಲ್ಲೇ ಇರುವ ರಂಗಪ್ಪನನ್ನು ವರ್ಗಾವಣೆ ಮಾಡಿ, ಆತನ ವಿರುದ್ಧ ಕ್ರಮ ಜರಗಿಸಿ ಎಂದು ಆಗ್ರಹಿಸಿದರು. ವಿಷಯದ ಕುರಿತು ವಿಪಕ್ಷ ನಾಯಕ ಆರ್‌. ಅಶೋಕ್‌ ಸಹಿತ ಆಡಳಿತ, ವಿಪಕ್ಷ ಸದಸ್ಯರು ದನಿಗೂಡಿಸಿದರು.

ಮೀಸಲಾತಿಗೆ ಆಗ್ರಹ
ಅಬಕಾರಿ ಇಲಾಖೆಯು ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡುವ ಸಂದರ್ಭ ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡುವಂತೆ ಮಳವಳ್ಳಿಯ ನರೇಂದ್ರಸ್ವಾಮಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈಗ ಮಂಜೂರಾತಿ ನೀಡಿರುವ 3975 ಸಿಎಲ್‌-2ಗಳಲ್ಲಿ 49 ಎಸ್‌ಸಿ ಹಾಗೂ 34 ಎಸ್‌ಟಿ, 2444 ಸಿಎಲ್‌-7 ರಲ್ಲಿ 96 ಎಸ್‌ಸಿ, 68 ಎಸ್‌ಟಿ ಸಮುದಾಯಗಳಿಗೆ ಪರವಾನಗಿ ನೀಡಲಾಗಿದೆ ಎಂದರು. ಬಿಜೆಪಿಯ ಸುನಿಲ್‌ಕುಮಾರ್‌ ಮಧ್ಯಪ್ರವೇಶಿಸಿ ಮೀಸಲಾತಿ ಹೆಸರಿನಲ್ಲಿ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ಕೊಡುತ್ತೀರಾ? ಎಂದು ಪ್ರಶ್ನಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next