Advertisement

ನಷ್ಟದಲ್ಲೂ ಸಮರ್ಪಕ ವಿದ್ಯುತ್‌ ಪೂರೈಕೆ

11:16 AM May 12, 2020 | mahesh |

ಬಳ್ಳಾರಿ: ಅಗತ್ಯ ಸೇವೆಗಳಲ್ಲಿ ಒಂದಾದ ವಿದ್ಯುತ್‌ನ್ನು ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ಕೊರತೆಯಾಗದಂತೆ ಸಮರ್ಪಕವಾಗಿ ನಿಭಾಯಿಸಿದ ಜೆಸ್ಕಾಂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಲಾಕ್‌ಡೌನ್‌ನಲ್ಲಿ ಮನೆಗೆ ಸೀಮಿತವಾಗಿದ್ದ ಜನರಿಗೆ ನಷ್ಟದ ನಡುವೆಯೂ ಲೋಡ್‌ ಶೆಡ್ಡಿಂಗ್‌ ಮಾಡದೆ ವಿದ್ಯುತ್‌ ಪೂರೈಸುತ್ತಿದೆ.

Advertisement

ಕೋವಿಡ್ ನಿಯಂತ್ರಿಸಲು ಕೇಂದ್ರ ಸರ್ಕಾರ ಮಾ.22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ ಬಳಿಕ ಮಾ.23 ರಿಂದ ದೇಶಾದ್ಯಂತ ಲಾಕ್‌ಡೌನ್‌ ಜಾರಿಗೆ ತರಲಾಯಿತು. ಇದರಿಂದ ಸಣ್ಣ, ಬೃಹತ್‌ ಕೈಗಾರಿಕೆಗಳು ಸೇರಿ ಎಲ್ಲ ಕ್ಷೇತ್ರಗಳು ಸುಮಾರು ಒಂದೂವರೆ ತಿಂಗಳು ಬಂದ್‌ ಆಗಿದ್ದು, ಬಡ ಕೂಲಿಕಾರ್ಮಿಕರು ಸೇರಿ ಎಲ್ಲರೂ ಮನೆಗೆ ಸೀಮಿತರಾದರು. ಬಿರುಬಿಸಿಲ ನಾಡು ಬಳ್ಳಾರಿಯಲ್ಲಿ ಬೇಸಿಗೆ ದಿನಗಳಲ್ಲಿ ಫ್ಯಾನ್‌, ಏರ್‌ ಕೂಲರ್‌, ಎಸಿ ಇಲ್ಲದೇ ಮನೆಗಳಲ್ಲಿ ಕೂಡುವುದೂ ಸುಲಭವಲ್ಲ. ಮೇಲಾಗಿ ಜೆಸ್ಕಾಂ ಬಳ್ಳಾರಿ ವಿಭಾಗಕ್ಕೆ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಗ್ರಾಹಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್‌ ಶುಲ್ಕವೂ ಪಾವತಿಯಾಗಿಲ್ಲ. ಇಂಥ ನಷ್ಟದ ನಡುವೆಯೂ ಬೇಸಿಗೆಯಲ್ಲಿ ಯಾವುದೇ ಲೋಡ್‌ಶೆಡ್ಡಿಂಗ್‌ ಮಾಡದೆ ಅನುಕೂಲ ಮಾಡಿಕೊಟ್ಟಿದೆ.

ಎಷ್ಟು ಕೋಟಿ ರೂ. ನಷ್ಟ: ಜೆಸ್ಕಾಂ ಇಲಾಖೆ ಬಳ್ಳಾರಿ ವಿಭಾಗದಲ್ಲಿ ಬಳ್ಳಾರಿ ನಗರ, ಗ್ರಾಮೀಣ, ಸಂಡೂರು, ಸಿರುಗುಪ್ಪ ತಾಲೂಕುಗಳು ಬರುತ್ತವೆ. ಮೂರು ತಾಲೂಕುಗಳಲ್ಲಿ 40 ಸಾವಿರ ಭಾಗ್ಯಜ್ಯೋತಿ ಸಂಪರ್ಕಗಳು ಇವೆ. 55 ಸಾವಿರ ರೈತರ ಪಂಪ್‌ ಸೆಟ್‌, ಸಣ್ಣ ಕೈಗಾರಿಕೆ, ಗೃಹ ಬಳಕೆ 1 ಲಕ್ಷ ವಿದ್ಯುತ್‌ ಸಂಪರ್ಕಗಳು ಇವೆ. ಈ ಮೊದಲು ಪ್ರತಿ ತಿಂಗಳು 30 ಕೋಟಿ ರೂ. ಶುಲ್ಕ ವಸೂಲಿ ಗುರಿ ಹೊಂದಲಾಗಿದ್ದು, ಪಂಪ್‌ಸೆಟ್‌ಗಳ 4 ಕೋಟಿ ರೂ. ಶುಲ್ಕ ವಸೂಲಿಯಾಗದಿದ್ದರೂ, ಬಾಕಿ ಸಂಪರ್ಕಗಳಿಂದ 26 ಕೋಟಿ ರೂ. ಶುಲ್ಕ ವಸೂಲಿಯಾಗುತ್ತಿತ್ತು. ಆದರೆ,
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಕೇವಲ 17 ಕೋಟಿ ರೂ., ಏಪ್ರಿಲ್‌ನಲ್ಲಿ 15 ಕೋಟಿ ರೂ. ಶುಲ್ಕ ವಸೂಲಿಯಾಗಿದೆ. ಎರಡು ತಿಂಗಳಲ್ಲಿ ಸುಮಾರು 20 ಕೋಟಿ ರೂ. ಶುಲ್ಕ ಬಾಕಿ ಉಳಿದಿದೆ. ಹಾಗಂತ ಶುಲ್ಕ ಪಾವತಿಸದ ಗ್ರಾಹಕರ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿಲ್ಲ ಎನ್ನುತ್ತಾರೆ ಜೆಸ್ಕಾಂ ಅಧಿಕಾರಿಗಳು.

ಲೋಡ್‌ಶೆಡ್ಡಿಂಗ್‌ ಇಲ್ಲ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳು ಸಣ್ಣ ಕೈಗಾರಿಕೆಗಳೆಲ್ಲ ಸ್ಥಗಿತಗೊಂಡಿವೆ. ಕೃಷಿ ಚಟುವಟಿಕೆಗಳು ಇದೀಗ ಆರಂಭವಾಗುತ್ತಿವೆ. ಹೀಗಾಗಿ ಲಾಕ್‌ಡೌನ್‌
ಅವಧಿಯಲ್ಲೂ ವಸತಿ ಪ್ರದೇಶಗಳಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆಗೆ ಸಾಧ್ಯವಾಗಿದೆ. ಮೇಲಾಗಿ ಸೋಲಾರ್‌ ವಿದ್ಯುತ್‌ ಬಂದ ಬಳಿಕ ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್‌ ಬಹುತೇಕ ಕಡಿತವಾಗಿದೆ.

ನನೆಗುದಿಗೆ ಬಿದ್ದಿದ್ದ ಕಾಮಗಾರಿ ಪೂರ್ಣ: ಜೆಸ್ಕಾಂ ಇಲಾಖೆಯ ಬಳ್ಳಾರಿ ನಗರ, ಗ್ರಾಮೀಣ, ಸಿರುಗುಪ್ಪ, ಸಂಡೂರು ತಾಲೂಕುಗಳಲ್ಲಿ 6.12 ಕೋಟಿ ರೂ. ವೆಚ್ಚದಲ್ಲಿ 498 ಕಾಮಗಾರಿಗಳನ್ನು
ಪೂರ್ಣಗೊಳಿಸಿ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಹಿಡಿದಂತಾಗಿದೆ. ಈ ಪೈಕಿ ಬಳ್ಳಾರಿ ಗ್ರಾಮಾಂತರ ಭಾಗದಲ್ಲಿ ದುರಸ್ತಿಗೆ ಬಂದಿದ್ದ 44 ವಿದ್ಯುತ್‌ ಕಂಬಗಳನ್ನು ಬದಲಾಯಿಸಲಾಗಿದೆ. 115 ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿ ಸ್ಥಳಾಂತರ ಮಾಡಲಾಗಿದೆ. 8 ಜನನಿಬಿಡ ಪ್ರದೇಶಗಳಲ್ಲಿನ ವಿದ್ಯುತ್‌ ಪರಿವರ್ತಕ
ಸ್ಥಳಾಂತರ ಮಾಡಲಾಗಿದೆ. ಅದೇರೀತಿ ಸಂಡೂರು ತಾಲೂಕಿನಲ್ಲಿ 35 ವಿದ್ಯುತ್‌ ಕಂಬಗಳ ಬದಲಾವಣೆ, ವಿಶೇಷ ಅನುದಾನ ಯೋಜನೆಯಡಿ 29 ವಿದ್ಯುತ್‌ ಪರಿವರ್ತಕ ಸ್ಥಳಾಂತರ, 20 ಪ್ರದೇಶದಲ್ಲಿ ವಿದ್ಯುತ್‌ ತಂತಿ ಸ್ಥಳಾಂತರಿಸಲಾಗಿದೆ. ಅದೇ ರೀತಿ ಸಿರುಗುಪ್ಪ ತಾಲೂಕಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಒಟ್ಟು 181 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ
ಎಂದು ಇಲಾಖೆ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.

Advertisement

ಲಾಕ್‌ಡೌನ್‌ ಅವಧಿಯಲ್ಲೂ ಸಾರ್ವಜನಿಕರಿಗೆ ವಿದ್ಯುತ್‌
ಕೊರತೆಯಾಗಂತೆ ಪೂರೈಸಲಾಗಿದೆ. ಜತೆಗೆ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು 6.12 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿಗಳನ್ನು, ಜನನಿಬಿಡ ಪ್ರದೇಶಗಳಲ್ಲಿ ಇದ್ದ ವಿದ್ಯುತ್‌ ಪರಿವರ್ತಕವನ್ನು ಸ್ಥಳಾಂತರಿಸಲಾಗಿದೆ.
ರಂಗನಾಥ್‌ ಬಾಬು, ಕಾರ್ಯನಿರ್ವಾಹಕ ಅಭಿಯಂತರ, ಜೆಸ್ಕಾಂ ಬಳ್ಳಾರಿ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next