Advertisement

ಡೇ-ನೈಟ್‌ ಟೆಸ್ಟ್‌: ಸಂಪ್ರದಾಯ ಮುರಿದ ಆ್ಯಶಸ್‌

06:40 AM Dec 02, 2017 | |

ಅಡಿಲೇಡ್‌: ಕ್ರಿಕೆಟ್‌ ಇತಿಹಾಸದ “ಸಂಪ್ರದಾಯಸ್ಥ ಟೆಸ್ಟ್‌ ಸರಣಿ’ ಎಂಬ ಹೆಗ್ಗಳಿಕೆ ಹೊಂದಿರುವ ಆ್ಯಶಸ್‌ ಶನಿವಾರ “ಅಡಿಲೇಡ್‌ ಓವಲ್‌’ನಲ್ಲಿ ಮಗ್ಗಲು ಬದಲಾಯಿಸಲಿದೆ. ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಪಂದ್ಯವೊಂದು ಮೊದಲ ಬಾರಿಗೆ ಹಗಲು-ರಾತ್ರಿಯಾಗಿ ನಡೆಯಲಿದೆ. ಮೊದಲ ಸಲ ಆ್ಯಶಸ್‌ನಲ್ಲಿ ಗುಲಾಲಿ ಬಣ್ಣದ ಚೆಂಡು ಅಂಗಳದ ಮುಂಬ ಹರಿದಾಡಲಿದೆ.

Advertisement

ಡೇ-ನೈಟ್‌ ಟೆಸ್ಟ್‌ ಪಂದ್ಯವೀಗ ಹೊಸತಾಗೇನೂ ಉಳಿದಿಲ್ಲ. 2015ರಿಂದ ಇದು ಮೊದಲ್ಗೊಂಡಿದ್ದು, ಈವರೆಗೆ 6 ಟೆಸ್ಟ್‌ ಪಂದ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ಅಡಿಲೇಡ್‌ನ‌ಲ್ಲೇ 2 ಟೆಸ್ಟ್‌ಗಳು ನಡೆದಿವೆ. ಆಸ್ಟ್ರೇಲಿಯ, ಇಂಗ್ಲೆಂಡ್‌ ಕೂಡ ಇದರಲ್ಲಿ ಪಾಲ್ಗೊಂಡಿವೆ. ಆದರೆ ಈ ಎರಡು ತಂಡಗಳು ಡೇ-ನೈಟ್‌ ಟೆಸ್ಟ್‌ನಲ್ಲಿ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ಹೀಗಾಗಿ ಸಹಜವಾಗಿಯೇ ಕುತೂಹಲ ಗರಿಗೆದರಿದೆ.

ಆಸ್ಟ್ರೇಲಿಯ ಈವರೆಗೆ 3 ಡೇ-ನೈಟ್‌ ಟೆಸ್ಟ್‌ಗಳನ್ನಾಡಿದ್ದು, ಮೂರನ್ನೂ ಗೆದ್ದ ಹೆಗ್ಗಳಿಕೆ ಹೊಂದಿದೆ. ಇದರಲ್ಲಿ 2 ಗೆಲುವು ಅಡಿಲೇಡ್‌ ಅಂಗಳದಲ್ಲೇ ಒಲಿದಿತ್ತು. ಇಂಗ್ಲೆಂಡ್‌ ಈವರೆಗೆ ಆಡಿದ್ದು ಒಂದು ಡೇ-ನೈಟ್‌ ಟೆಸ್ಟ್‌ ಮಾತ್ರ. ಕಳೆದ ಆಗಸ್ಟ್‌ನಲ್ಲಿ ಬರ್ಮಿಂಗಂನಲ್ಲಿ ನಡೆದ ಈ ಪಂದ್ಯದಲ್ಲಿ ಅದು ವೆಸ್ಟ್‌ ಇಂಡೀಸನ್ನು ಇನ್ನಿಂಗ್ಸ್‌ ಅಂತರದಿಂದ ಮಣಿಸಿತ್ತು. ಹೀಗಾಗಿ ಎರಡೂ ತಂಡಗಳಿಗೆ ಹೊನಲು ಬೆಳಕು, ಪಿಂಕ್‌ ಬಾಲ್‌ ಹೊಸತೇನಲ್ಲ. ಆದರೆ ಆ್ಯಶಸ್‌ ಮಟ್ಟಿಗೆ ಎಲ್ಲವೂ ನವನವೀನ!

ವಿಜೇತ ತಂಡವೇ ಕಣಕ್ಕೆ
ಇನ್ನು ದ್ವಿತೀಯ ಟೆಸ್ಟ್‌ ಬಗ್ಗೆ… ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು 10 ವಿಕೆಟ್‌ಗಳಿಂದ ಅಧಿಕಾರಯುತವಾಗಿ ಗೆದ್ದ ಆಸ್ಟ್ರೇಲಿಯ, ಅಡಿಲೇಡ್‌ನ‌ಲ್ಲೂ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಸ್ಟೀವನ್‌ ಸ್ಮಿತ್‌ ಅವರ ಕಪ್ತಾನನ ಆಟ, ವೇಗಿಗಳಾದ ಸ್ಟಾರ್ಕ್‌-ಹ್ಯಾಝಲ್‌ವುಡ್‌, ಸ್ಪಿನ್ನರ್‌ ಲಿಯೋನ್‌ ಅವರ ಘಾತಕ ದಾಳಿ, ದ್ವಿತೀಯ ಸರದಿಯಲ್ಲಿ ವಾರ್ನರ್‌-ಬಾನ್‌ಕ್ರಾಫ್ಟ್ ಜೋಡಿಯ ಅಜೇಯ 173 ರನ್‌ ಆಸೀಸ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಅಡಿಲೇಡ್‌ ಟೆಸ್ಟ್‌ನಲ್ಲಿ ಆಸೀಸ್‌ ವಿಜೇತ ತಂಡವನ್ನೇ ಕಣಕ್ಕಿಳಿಸಲಿದೆ.

ಸ್ಟೋಕ್ಸ್‌ ಗೈರು, ಅಲಿ ಗಾಯಾಳು
ಇಂಗ್ಲೆಂಡಿಗೆ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಗೈರು ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಅನುಭವಿ ಕುಕ್‌ ಅವರ ಕಳಪೆ ಫಾರ್ಮ್ ಮತ್ತೂಂದು ಹಿನ್ನಡೆ. ಬ್ಯಾಟಿಂಗ್‌ ಸರದಿಯಲ್ಲಿ ಬಹುತೇಕ ಹೊಸಬರೇ ತುಂಬಿದ್ದು, ಇವರಿಂದ ಸ್ಥಿರ ಪ್ರದರ್ಶನ ಹೊರಹೊಮ್ಮಬೇಕಿದೆ.

Advertisement

ಆಲ್‌ರೌಂಡರ್‌ ಮೊಯಿನ್‌ ಅಲಿ ಗಾಯಾಳಾಗಿದ್ದು, ದ್ವಿತೀಯ ಟೆಸ್ಟ್‌ ಆಡುವುದು ಅನುಮಾನ ಎನ್ನಲಾಗಿದೆ. ಇದು ಆಂಗ್ಲರ ಸಂಕಟವನ್ನು ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ. ಅಲಿ ಗೈರಲ್ಲಿ 20ರ ಹರೆಯದ ಲೆಗ್‌ಸ್ಪಿನ್ನರ್‌ ಮಾಸನ್‌ ಕ್ರೇನ್‌ ಟೆಸ್ಟ್‌ ಕ್ಯಾಪ್‌ ಧರಿಸುವ ಸಾಧ್ಯತೆ ಇದೆ.

ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳು
ವರ್ಷ    ತಂಡಗಳು    ಸ್ಥಳ    ಫ‌ಲಿತಾಂಶ

2015    ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌    ಆಡಿಲೇಡ್‌    ಆಸ್ಟ್ರೇಲಿಯಕ್ಕೆ 3 ವಿಕೆಟ್‌ ಜಯ
2016    ಪಾಕಿಸ್ಥಾನ-ವೆಸ್ಟ್‌ ಇಂಡೀಸ್‌    ದುಬಾೖ    ಪಾಕಿಸ್ಥಾನಕ್ಕೆ 56 ರನ್‌ ಜಯ
2016    ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ    ಆಡಿಲೇಡ್‌    ಆಸ್ಟ್ರೇಲಿಯಕ್ಕೆ 7 ವಿಕೆಟ್‌ ಜಯ
2016    ಆಸ್ಟ್ರೇಲಿಯ-ಪಾಕಿಸ್ಥಾನ    ಬ್ರಿಸ್ಬೇನ್‌    ಆಸ್ಟ್ರೇಲಿಯಕ್ಕೆ 39 ರನ್‌ ಜಯ
2017    ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌    ಬರ್ಮಿಂಗಂ    ಇಂಗ್ಲೆಂಡಿಗೆ ಇ/209 ರನ್‌ ಜಯ
2017    ಪಾಕಿಸ್ಥಾನ-ಶ್ರೀಲಂಕಾ    ದುಬಾೖ    ಶ್ರೀಲಂಕಾಕ್ಕೆ 68 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next