ಲಾಕ್‌ಡೌನ್ ವೇಳೆ ಎಲ್ಲರೂ ಮನೆಯೊಳಗೆ ಇದ್ದರೆ, ಪೋಸ್ಟ್‌ಮನ್‌ಗಳು ಮಾತ್ರ ಬೀದಿಯಲ್ಲಿ. ಔಷಧ, ಪೋಸ್ಟ್, ಪಾರ್ಸೆಲ್ ಹೊತ್ತು, ಅಂಗೈಯಲ್ಲಿ ಜೀವ ಹಿಡಿದುಕೊಂಡು ಕೆಲಸ ಮಾಡಬೇಕಾಗುತ್ತದೆ. ಈ ಕೊರೊನಾ ವಾರಿಯರ್ಸ್‌ಗಳ ಅನುಭವ ಹೇಗಿದೆ ಅನ್ನೋದನ್ನು, ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿರುವ ಪೋಸ್ಟ್‌ಮನ್ ಎ.ಎಸ್. ಚಂದ್ರಶೇಖರ್ ವಿವರಿಸಿದ್ದಾರೆ…
ಲಾಕ್‌ಡೌನ್ ಶುರುವಾದಾಗ, ಎರಡು ದಿನ ಮನೆಯಲ್ಲಿ ಕೂತಿದ್ದಾಯ್ತು. ಮುಂದೇನು, ಏನು ಮಾಡಬೇಕು, ಯಾವಾಗ ಸೋಂಕು ಹೋಗುತ್ತೆ? ಪೋಸ್ಟಾಫೀಸಿಗೆ ಬಂದಿರುವ ಪತ್ರಗಳು, ಪಾರ್ಸೆಲ್‌ಗಳ ಗತಿ ಏನು? ಯಾವುದಕ್ಕೂ ನನ್ನಲ್ಲಿ ಉತ್ತರ ಇರಲಿಲ್ಲ. ಸಾಮಾನ್ಯವಾಗಿ, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ನನ್ನ ಶಿಫ್ಟ್ ಸದಾ ಗಜಿಬಿಜಿ ಎನ್ನುವ ವಿಧಾನಸೌಧ, ಕಮರ್ಷಿಯಲ್ ಸ್ಟ್ರೀಟ್ ಪ್ರದೇಶ, ನನ್ನ ಔದ್ಯೋಗಿಕ ಕ್ಷೇತ್ರ. ಚರ್ಚ್‌ಸ್ಟ್ರೀಟ್‌ನಲ್ಲಿ ಶೇಷ ಮಹಲ್ ಎಂಬ ಹೋಟೆಲ್ ಇದೆ.
ಅಲ್ಲಿ ಕಾಫಿ ಕುಡಿದರೇನೇ ನಮ್ಮ ಎಂಜಿನ್ ಚಾಲೂ ಆಗ್ತಿದ್ದದ್ದು. ನಮ್ಮ ಪೋಸ್ಟ್‌ಮ್ಯಾನ್ ತಂಡ ಬರುತ್ತಿದ್ದಂತೆ, ಆ ಹೋಟೆಲಿನಲ್ಲಿ ಕಾಫಿ ಕೊಡುತ್ತಿದ್ದರು. ಕಾಫಿ ಕುಡಿದು, ಪೋಸ್ಟಿಂಗ್ ಕೆಲಸ ಶುರುಮಾಡಿಬಿಡುತ್ತಿದ್ದೆವು. ಲಾಕ್‌ಡೌನ್ ಸಮಯದಲ್ಲಿ ಹೆಂಡತಿ ಕಾಫಿ ಕೊಡುವಾಗ, ಈ ಎಲ್ಲವೂ ನೆನಪಾಗುತ್ತಿತ್ತು. ಲಾಕ್‌ಡೌನ್ ಆಗಿ ಮೂರನೇ ದಿನ ಆರಂಭದ ಹೊತ್ತಿಗೆ- “ರಾಶಿ ರಾಶಿ ಪಾರ್ಸೆಲ್ ಗಳು ಬಂದಿವೆ. ನಾಳೆಯಿಂದ ಕೆಲಸಕ್ಕೆ ಬನ್ನಿ’ ಎಂಬ ಸಂದೇಶ ಕಚೇರಿಯಿಂದ ಬಂತು. ವಿಷಯ ತಿಳಿದಾಗ, ಹೆಂಡತಿ- ಮಕ್ಕಳ ಮುಖದಲ್ಲಿ ಬೇಸರದ ನೆರಿಗೆ ಎದ್ದವು.
“ರೀ, ಮನೆಯಿಂದ ಆಚೆ ಹೋಗೋಕೆ ಎಲ್ಲರೂ ಬೆಚ್ಚಿ ಬೀಳುತ್ತಿರುವಾಗ, ನೀವು ಹೋಗ್ತಿರ? ರಜೆ ಹಾಕಿಡಿ’ ಅಂದಳು ಹೆಂಡತಿ. “ಹೆದರಿ ಎಷ್ಟು ದಿನ ಅಂತ ಮನೇಲಿ ಕೂರೋದು? ಸರ್ಕಾರಿ ಕೆಲಸ ಅಂದಮೇಲೆ ಮಾಡಲೇಬೇಕು…’ ಎಂದೆಲ್ಲಾ ಹೇಳಿ, “ಹೆಂಡತಿ-ಮಕ್ಕಳನ್ನು ಒಪ್ಪಿಸಿ, ಕಡೆಗೊಮ್ಮೆ ರಸ್ತೆಗೆ ಕಾಲಿಟ್ಟರೆ, ನಾನು ಅಂಥ ಬೆಂಗಳೂರನ್ನು ನೋಡೇ ಇರಲಿಲ್ಲ. ಇಷ್ಟು ವರ್ಷಗಳ ಕಾಲ ಅಡ್ಡಾಡಿದ್ದೀನಿ. ಸಾವಿರಾರು ಮನೆಗಳಿಗೆ ಪೋಸ್ಟು ಕೊಟ್ಟಿದ್ದೀನಿ. ಯಾವತ್ತೂ, ಮ್ಯೂಸಿಯಂ ರಸ್ತೆ ನನ್ನ ಕಡೆ ನೋಡಿರಲಿಲ್ಲ. ಆವತ್ತು ಬರೀ ನೋಡಿದ್ದಲ್ಲ, ತಲೆಬಾಗಿದ್ದ ಮರಗಳು, ನನಗೆ ಸ್ವಾಗತ ಮಾಡೋಕೆ ನಿಂತಂತೆ ಇದ್ದವು.
ಇಡೀ ಬೀದಿಯಲ್ಲಿ ಯಾರೂ ಇಲ್ಲ. ನಾನೊಬ್ಬನೇ. ಅಲ್ಲಲ್ಲಿ ಪೊಲೀಸರು. ಎಲ್ಲರ ಮುಖದಲ್ಲಿ ಅವ್ಯಕ್ತ ಭಯ. ಕಣ್ಣಲ್ಲಿ, ಹುಷಾರಪ್ಪಾ ಅಂತ ಹೇಳುವ ಭಾವ. ಹೀಗೆ ಭಯದ ನೆರಳಲ್ಲೇ ಬಟವಾಡೆ ಮಾಡಿದ್ದಾಯಿತು. ಇಷ್ಟೆಲ್ಲಾ ರಿಸ್ಟ್ ತಗೊಂಡು ನಾವು ಹೋದರೆ, ಪಾರ್ಸೆಲ್‌ನ ವಾರಸುದಾರರು, ಅದನ್ನು ಅಲ್ಲೇ ಹೊರಗೆ ಇಟ್ಟು ಹೋಗ್ರೀ ಅಂದಾಗ, ಮನಸ್ಸಿಗೆ ಚುರ್ ಅನ್ನೋದು. ಔಷಧಗಳನ್ನು ತಗೊಂಡು ಹೋದ್ರೂ ಹೀಗೇ ಮಾಡೋರು. ಮಧ್ಯಾಹ್ನ ನಮ್ಮ ಚೀಫ್ ಪೋಸ್ಟ್ ಮಾಸ್ಟರ್ ಡಿ. ರಾಧಾಕೃಷ್ಣ ಅವರು, ಊಟದ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಂಡಿದ್ದರು. ಊಟದ ನಂತರ ಮತ್ತೆ ಡ್ನೂಟಿ.
ಭಯದ ಬೆಂಗಳೂರಲ್ಲಿ, ಕುಡಿಯೋಕೆ ನೀರು ಸಿಗೋದೂ ಕಷ್ಟ ಅಂತ, ಆಫೀಸಿಂದಲೇ ಫಿಲ್ಟರ್ ನೀರು ತಗೊಂಡು ಹೋಗ್ತಾ ಇದ್ವಿ. ಒಂದು ದಿನ ಅನಿಸಿಬಿಡು: ಒಂದು ಪಕ್ಷ ಸೋಂಕು ನನಗೂ ಹರಡಿ, ಹೆಂಡತಿ ಮಕ್ಕಳನ್ನೂ ತಲುಪಿ ಬಿಟ್ರೆ ಗತಿ ಏನು? ಅವರು ನನ್ನನ್ನು, ನಾನು ಅವರನ್ನು ನೋಡುವ ಹಾಗಿಲ್ವಲ್ಲ. ನನ್ನಿಂದ ಯಾರಿಗೂ ತೊಂದರೆ ಆಗೋದು ಬೇಡವೇ ಬೇಡ ಅನಿಸಿದ್ದೇ ಆಗ. ತ
ಕ್ಷಣವೇ ಕಸ್ತೂರಬಾ ರಸ್ತೆಯಲ್ಲಿ ಒಂದು ರೂಮ್ ಮಾಡಿದೆ. ಪ್ರತಿದಿನ ಬಟವಾಡೆಗೆ ಹೋಗುವ ಮೊದಲು, ಕೆಲಸದಿಂದ ಬಂದ ನಂತರ, ಸ್ನಾನ ಮಾಡುತ್ತೇನೆ. ಆಗಾಗ, ಸ್ಯಾನಿಟೈಸರ್ ಬಳಸುತ್ತೇನೆ. ಮೂತಿಗೆ ಮಾಸ್ಟ್, ಕೈಗೆ ಗ್ಲೌಸ್ ತಪ್ಪಲ್ಲ. ಮಕ್ಕಳು, ಹೆಂಡತಿ ಆಗಾಗ ಫೋನ್ ಮಾಡ್ತಾರೆ. ಮಗಳು ಓದುವಾಗ ಏನಾದರೂ ಡೌಟ್ ಬಂದರೆ, ಫೋನ್ ಮಾಡಿ ಕೇಳುತ್ತಾಳೆ. ಮಗ ಫೋನ್ ಮಾಡಿ- ಅಪ್ಪಾ, ನೀನು ನಾಟಕದ ಸ್ಕ್ರಿಕ್ಟ್ ಓದಿಸ್ತಿದ್ದೆ ಕೊರೊನಾದಿಂದ ಅದನ್ನು ಮಿಸ್ ಮಾಡ್ಕೊತಾ ಇದ್ದೀನಿ, ಅಂತಾನೆ. ಆಗೆಲ್ಲಾ, ಹದಯ ಹಿಂಡಿದಂತೆ ಆಗುತ್ತೆ.
“ಶೆಲ್ಪ್ ಮೇಲೆ ಮೂರು ನಾಟಕದ ಸ್ಕ್ರಿಕ್ಟ್ ಇದೆ. ನಾನು ಬೇಗ ಬರ್ತೀನಿ. ಅಷ್ಟೊತ್ತಿಗೆ ಅದನ್ನು ಮುಗಿಸಿ ಬಿಡು’ ಅಂತೆಲ್ಲ ಹೇಳಿ, ಅವನನ್ನು ಸಮಾಧಾನ ಮಾಡ್ತೀನಿ. ಹೀಗೆ, ಮನೆ ಒಳಗೂ, ಹೊರಗೂ ಭಯ. ಇದರ ಹೆಗಲ ಮೇಲೆ ಕೈ ಹಾಕ್ಕೊಂಡೇ, ನಾವು ದಿನಾ ಕೆಲಸ ಮಾಡಬೇಕು. ಅಡ್ರೆಸ್ ಹುಡುಕೋ ನಾವೇ ಅಡ್ರೆಸ್ ಇಲ್ಲದಂಗೆ ಆಗಿಬಿಟ್ರೆ ಅನ್ನೋ ಅನುಮಾನ ಹೆಡೆ ಎತ್ತಿದಾಗೆಲ್ಲಾ, ನಮಗೂ ಭಯ ಆಗ್ತದೆ. ಆಗೆಲ್ಲಾ, ಬೆಂಗಳೂರಿನ ನಿಶ್ಯಬ್ದವೇ ಬೆನ್ನುತಟ್ಟೋದು…