ಬೆಂಗಳೂರು: “ಪ್ರಜಾಪ್ರಭುತ್ವದ ಹಬ್ಬ’ಕ್ಕೆ ನಗರ ಈಗ ಕಳೆಗಟ್ಟಿದೆ. ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಕಡೆಗೆ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆ ಯಲ್ಲಿ ಜನ ತೆರಳುತ್ತಿದ್ದು, ಸಾರಿಗೆ ಸೇವೆಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಈ ಹಿನ್ನೆಲೆ ಹೆಚ್ಚುವರಿಯಾಗಿ ಬಸ್, ರೈಲು ಸೇವೆಗಳನ್ನು ಒದಗಿಸಲಾಗಿದೆ.
ಮತದಾನ ಪ್ರಯುಕ್ತ ಬುಧವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಜತೆಗೆ ಜನರಲ್ಲೂ ತಮ್ಮ ಹಕ್ಕಿನ ಬಗ್ಗೆ ತಕ್ಕಮಟ್ಟಿಗೆ ಜಾಗೃತಿ ಉಂಟಾಗಿದೆ. ಇದರ ಫಲವಾಗಿ ಐಟಿ-ಬಿಟಿ, ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರು, ಕಟ್ಟಡ ಮತ್ತಿತರ ಕಾರ್ಮಿಕರು ಸೇರಿದಂತೆ ಬೇರೆ ಕಡೆಗಳಿಂದ ನಗರಕ್ಕೆ ಆಗಮಿಸಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕರು ಮತ ಚಲಾಯಿಸಲು ತಮ್ಮ ಊರುಗಳಿಗೆ ಹೊರಟಿದ್ದಾರೆ. ಇದರಿಂದ ಮಂಗಳವಾರ (ಮೇ 9) ಬಸ್ ಮತ್ತು ರೈಲುಗಳ ಬುಕಿಂಗ್‌ಗೆ ಭಾರಿ ಬೇಡಿಕೆ ಬಂದಿದೆ.
ದಟ್ಟಣೆ ನಿರ್ವಹಣೆ ಜತೆಗೆ ಜನರ ಮತದಾನದ ಉತ್ಸಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಹಾಗೂ ಕೆಎಸ್‌ಆರ್ ಟಿಸಿ ಹೆಚ್ಚುವರಿ ಸೇವೆಗಳನ್ನು ಒದಗಿಸಿದೆ. ಅದೇ ರೀತಿ, ಚುನಾವಣಾ ಕರ್ತವ್ಯ ಮುಗಿಸಿ ತಮ್ಮ ಊರುಗಳಿಗೆ ವಾಪಸ್ಸಾಗುವವರಿಗೆ ಅನುಕೂಲವಾಗಲೆಂದು ಮೇ 10ರಂದು “ನಮ್ಮ ಮೆಟ್ರೋ’ ಸೇವೆ ಮಧ್ಯ ರಾತ್ರಿವರೆಗೂ ವಿಸ್ತರಣೆ ಮಾಡಲಾಗಿದೆ. ಇನ್ನು ಖಾಸಗಿ ಬಸ್‌ಗಳಲ್ಲೂ ಬುಕಿಂಗ್‌ಗೆ ಬೇಡಿಕೆ ಬಂದಿದ್ದು, ಪರಿಣಾಮ ಪ್ರಯಾಣ ದರದಲ್ಲಿ ಏರಿಕೆ ಯಾಗಿದೆ. ಉದಾಹರಣೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಮಾನ್ಯ ದಿನಗಳಲ್ಲಿ ನಾನ್ ಎಸಿ ಸ್ಲೀಪರ್ 1,000- 1,200 ರೂ. ಇರುತ್ತಿತ್ತು. ಮಂಗಳ ವಾರ 1,600- 1,800 ರೂ. ಇದ್ದುದು ಕಂಡು ಬಂತು. ಇದು ಹಬ್ಬದ ಸೀಜನ್ ನೆನಪಿಸುವಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
3 ವಿಶೇಷ ರೈಲು: ರೈಲ್ವೆ ಇಲಾಖೆಯು ಮತ ದಾನದ ತೆರಳಲು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಬೆಂಗಳೂರು-ಬೆಳಗಾವಿ (ರೈಲು ಸಂಖ್ಯೆ 06585/ 06586), ಯಶವಂತಪುರ- ಮುಡೇìಶ್ವರ (06587) ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ- ಬೀದರ್ (06597/ 06598) ಮಾರ್ಗಗಳಲ್ಲಿ ಮೂರು ವಿಶೇಷ ರೈಲುಗಳನ್ನು ಕಾರ್ಯಾ ಚರಣೆ ಮಾಡುತ್ತಿದೆ. ಈ ರೈಲುಗಳು ತಲಾ ಒಂದು ಟ್ರಿಪ್ ಅಂದರೆ ಇಲ್ಲಿಂದ ಹೋಗಿ ವಾಪಸ್ ಬರಲಿವೆ. ಅಷ್ಟೇ ಅಲ್ಲ, ತಾತ್ಕಾಲಿಕವಾಗಿ ಮೈಸೂರು- ಬಾಗಲಕೋಟೆ (17307/ 17308), ಕೆಎಸ್‌ಆರ್ ಬೆಂಗಳೂರು-ನಾಂದೇಡ್ (16593/ 16594), ಕೆಎಸ್‌ಆರ್ ಬೆಂಗಳೂರು- ಎಸ್‌ಎಸ್‌ಎಸ್ ಹುಬ್ಬಳ್ಳಿ (12079/ 12080), ವಾಸ್ಕೋ-ಡ-ಗಾಮ- ಯಶ ವಂತಪುರ (17309/ 17310), ಕೆಎಸ್‌ಆರ್ ಬೆಂಗಳೂರು- ಕಾರವಾರ (16595/ 16596) ತಲಾ ಒಂದು ಬೋಗಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಅದೇ ರೀತಿ, ಕೆಎಸ್‌ಆರ್‌ಟಿಸಿಯು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಸೇವೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಹತ್ತಾರು ಹೆಚ್ಚುವರಿ ಬಸ್‌ಗಳು ಅಂದು ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಮಂಗಳೂರು ಮತ್ತಿತರ ಕಡೆಗಳಲ್ಲಿ ಸಂಚರಿಸುತ್ತಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯರಾತ್ರಿವರೆಗೂ “ನಮ್ಮ ಮೆಟ್ರೋ’: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಬೆಂಗಳೂರು ಮೆಟ್ರೋ ರೈಲು ನಿಗಮ “ನಮ್ಮ ಮೆಟ್ರೋ’ ರೈಲು ಸಂಚಾರದ ಅವಧಿಯನ್ನು ಮಧ್ಯರಾತ್ರಿವರೆಗೆ ವಿಸ್ತರಿಸಿದೆ. ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್μàಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಓಡಾಡಲಿವೆ. ಈ ಮಾರ್ಗದ ರೈಲುಗಳು ಮೇ 11ರಂದು ಮಧ್ಯರಾತ್ರಿ 12.05ರವರೆಗೆ ಸಂಚರಿಸಲಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಕೊನೆಯ ರೈಲಿನ ಸೇವೆಯು ಮಧ್ಯರಾತ್ರಿ 12.35ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆಯಿಂದ ಹೊರಡಲಿದೆ ಎಂದು ನಿಗಮ ತಿಳಿಸಿದೆ. ಮತದಾನ ಸಂಬಂಧ ಪ್ರಯಾಣಿಕರ ಸಂಖ್ಯೆ ಬುಧವಾರ ಎಂದಿಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಜನತೆಗೆ ಅನುಕೂಲವಾಗಲು ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸೇವೆ ಸಿಗುವಂತೆ ಸಮಯವನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ.