Advertisement
ಖಾಸಗಿ ಮೆಡಿಕಲ್ ಕಾಲೇಜಿನಿಂದಲೇ ಟೆಸ್ಟ್ ರಿಪೋರ್ಟ್ ದೊರೆಯುವಂತೆ ಮಾಡಿದರೆ ರಿಪೋರ್ಟ್ ಬೇಗನೆ ದೊರೆಯಬಹುದು; ಹೀಗಾಗಿ, ಅವಕಾಶ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ಇದು ಸಾಧ್ಯವಾದರೆ ಪರೀಕ್ಷಾ ಫಲಿತಾಂಶ 24 ಗಂಟೆಯೊಳಗೆ ದೊರೆಯುವ ಸಾಧ್ಯತೆಯಿದೆ.
Related Articles
Advertisement
ಕೋವಿಡ್ ನಿಯಂತ್ರಣಕ್ಕೆ ಶೀಘ್ರ ರೋಗ ಪತ್ತೆಯೇ ಅತ್ಯಂತ ಮುಖ್ಯ. ವರದಿ ವಿಳಂಬವಾದಷ್ಟು ರೋಗಿಗಳನ್ನು ಗುರುತಿಸಿ ಪ್ರತ್ಯೇಕಿಸುವುದು ಕಷ್ಟ. ಹೀಗಾಗಿ ಸೋಂಕು ವೃದ್ಧಿಗೂ ಕಾರಣವಾಗುತ್ತದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ 8 ವೈದ್ಯಕೀಯ ಕಾಲೇಜ, ವೆನ್ಲಾಕ್ ಆಸ್ಪತ್ರೆಯಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಯುತ್ತಿವೆ. ವೆನ್ಲಾಕ್‌ನಲ್ಲಿ ಪ್ರತೀದಿನ 2,500ಕ್ಕೂ ಅಧಿಕ ಪರೀಕ್ಷೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 300ರಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ವ್ಯಾಬ್ ಸಂಗ್ರಹ ಹೆಚ್ಚುತ್ತಿರುವ ಕಾರಣದಿಂದ ಪರೀಕ್ಷೆ ವರದಿ ದಿನದಿಂದ ದಿನಕ್ಕೆ ಬಾಕಿಯಾಗುತ್ತಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ 24ರಿಂದ 48 ಗಂಟೆ ಅವಧಿಯಲ್ಲಿ ದೊರೆಯಬೇಕು. ಆದರೆ ಈಗ ವಾರ ಕಳೆದರೂ ವರದಿ ಸಿಗುತ್ತಿಲ್ಲ.
ವೆನ್ಲಾಕ್‌ನಲ್ಲಿ ಕಾರ್ಯಾರಂಭಿಸಿದ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರ :
ವೆನ್ಲಾಕ್ ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ ಕೋವಿಡ್ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಕಾರ್ಯದೊತ್ತಡದಿಂದಾಗಿ ಟೆಸ್ಟಿಂಗ್ ವ್ಯವಸ್ಥೆ ನಿಧಾನ ವಾಗುತ್ತಿತ್ತು. ಸ್ವ್ಯಾಬ್ ತೆಗೆದು 7-8 ದಿನಗಳಾದರು ವರದಿ ದೊರಕದೆ ವಿಳಂಬವಾಗುತ್ತಿತ್ತು ಎಂಬ ದೂರು ಕೇಳಿಬಂದಿತ್ತು. ಹೀಗಾಗಿ ಕೊರೊನಾ ಪರೀಕ್ಷೆಯ ಫಲಿತಾಂಶ ವಿಳಂಬವಿಲ್ಲದೇ ದೊರೆಯಬೇಕು ಎಂಬ ಉದ್ದೇಶದಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರವನ್ನು ಬುಧವಾರ ಹೊಸದಾಗಿ ತರಿಸಲಾಗಿದೆ. ಹೀಗಾಗಿ ಮುಂದೆ ಪ್ರತೀದಿನಕ್ಕೆ 3500 ಸ್ವ್ಯಾಬ್ ಟೆಸ್ಟ್ ಮಾಡಿ 24 ಅಥವಾ 36 ಗಂಟೆಯೊಳಗೆ ವರದಿ ನೀಡಲು ಸಾಧ್ಯವಾಗಲಿದೆ.
ದ.ಕ. ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಯ ಹೆಚ್ಚುವರಿ ಸ್ವ್ಯಾಬ್‌ಗಳ ವರದಿಯನ್ನು ಶೀಘ್ರ ನೀಡುವ ನಿಟ್ಟಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಿಂದಲೇ ವರದಿ ನಡೆಸಲು ಅನುಮತಿ ಕೇಳಿ ಆರೋಗ್ಯ ಸಚಿವರನ್ನು ಕೋರಲಾಗಿದೆ. ಒಂದೆರಡು ದಿನದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ. ಜತೆಗೆ ವೆನ್ಲಾಕ್‌ನಲ್ಲಿ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರವು ಬುಧವಾರದಿಂದ ಕಾರ್ಯಾರಂಭಿಸಿದ್ದು, ವರದಿ ಬೇಗ ದೊರೆಯಲಿದೆ. –ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು