ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.
ಈ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಅವರು, ಕೆರೆಯ ದಡದಲ್ಲಿನ ಹುಲ್ಲಿಗೆ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಅಥವಾ ಮಿಥೇನ್ ಅಂಶದಿಂದ ಬೆಂಕಿ ಕಾಣಿಸಿಕೊಂಡಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಲಾಗಿದೆ ಎಂದರು.
ಸಂಸ್ಕರಿಸದ ಒಳಚರಂಡಿ ನೀರು ಕೆರೆಗೆ ಹರಿಸುತ್ತಿರುವುದು ಕೆರೆಯ ಕಲುಷಿತವಾಗಲು ಮುಖ್ಯ ಕಾರಣವಾಗಿದ್ದು, ಈಗಾಗಲೇ ಒಳಚರಂಡಿ ನೀರು ಸಂಸ್ಕರಣೆಗೆ ತ್ಯಾಜ್ಯನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಘಟಕಗಳ ಕಾಮಗಾರಿ ಪೂರ್ಣಗೊಂಡ ನಂತರ ಇಂತಹ ಸಮಸ್ಯೆ ಮರುಕಳಿಸುವುದಿಲ್ಲ ಎಂದು ತಿಳಿಸಿದರು.
ಬಿಡಿಎಗೆ ನೋಟಿಸ್ ಜಾರಿ: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡಿಎಗೆ ನೋಟಿಸ್ ಜಾರಿಗೊಳಿಸಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಿದೆ.
ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಈ ಹಿಂದೆ ಬೆಳ್ಳಂದೂರು ಕೆರೆಯ ನೀರಿನ ಮಾದರಿ ಪರೀಕ್ಷಿಸಿದಾಗ ಮಿಥೇನ್ ಅಂಶ ರಾಷ್ಟ್ರೀಯ ನಿಗದಿಗಿಂತ ಕಡಿಮೆಯಿರುವುದು ಕಂಡುಬಂದಿತ್ತು. ಪ್ರಕರಣದ ನಂತರ ಮತ್ತೂಮ್ಮೆ ನೀರಿನ ಮಾದರಿ ಸಂಗ್ರಹಿಸಿದ್ದು, ಮಿಥೆನ್ ಅಂಶ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಬೆಳ್ಳಂದೂರು ಕೆರೆ ಸಂರಕ್ಷಣೆಗೆ ತಾನು ಕೈಗೊಳ್ಳುವ ಕ್ರಮಗಳ ಕುರಿತು ಬಿಡಿಎ ಎನ್‌ಜಿಟಿಗೆ ಅಫಿಡವಿಟ್ ಸಲ್ಲಿಸಿದ್ದು, ಅಫಿಡವಿಟ್‌ನಲ್ಲಿರುವ ಅಂಶಗಳನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.