ಮಧುಗಿರಿ: ಮಧುಗಿರಿಯು ಬರಪೀಡಿತ ಹಾಗೂ ಆಂಧ್ರದ ಗಡಿ ಭಾಗದ ಹಿಂದುಳಿದ ಪ್ರದೇಶ. ಇಲ್ಲಿನ ಕೊಡಿಗೇನಹಳ್ಳಿ, ಮಿಡಿಗೇಶಿ, ಐಡಿಹಳ್ಳಿ ಹೋಬಳಿಯ ನಂಟು ಆಂಧ್ರದೊಂದಿಗೆ ಬೆಸೆದುಕೊಂಡಿದೆ. ಗಡಿ ಭಾಗದ ಜನರಿಗೆ ಆ್ಯಂಬುಲೆನ್ಸ್ ಇಲ್ಲದೇ ತುರ್ತು ಆರೋಗ್ಯ ಸೇವೆ ಮಾತ್ರ ಮರೀಚಿಕೆಯಾಗಿದ್ದು, ಮತ್ತೆ ಬಡ ಜೀವಗಳ ಜೊತೆ ಆರೋಗ್ಯ ಇಲಾಖೆ ಚೆಲ್ಲಾಟಕ್ಕೆ ಇಳಿದಿದೆ.
ತಾಲೂಕಿನಲ್ಲಿ ಉಂಟಾಗುವ ಎಲ್ಲ ರೀತಿಯ ಅಪಘಾತಗಳಲ್ಲಿ ಹೆಚ್ಚಾಗಿ ಗಡಿ ಭಾಗದ ಹೋಬಳಿ ಯಲ್ಲೇ ನಡೆದಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದಕ್ಕಾಗಿಯೇ ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅವರು ತಮ್ಮ ಅನುದಾನ ದಲ್ಲಿ ಒಂದೊಂದು ಆ್ಯಂಬುಲೆನ್ಸ್ ನೀಡಿದ್ದಾರೆ. ಆದರೂ, ಅಪಘಾತಗಳು ನಡೆ ದಾಗ ಗಾಯಾಳುಗಳ ನೆರವಿಗೆ ತುರ್ತು ವಾಹನಗಳ ಕೊರತೆಯಿಂದ ಇರುವ ವಾಹನಗಳು ಸಮಯಕ್ಕೆ ಸರಿಯಾಗಿ ಬಾರದೇ ಪ್ರಾಣಹಾನಿ ಸಂಭವಿಸುತ್ತಿವೆ. ಇಂತಹ ಸಮಯದಲ್ಲಿ ಕಳೆದ ತಿಂಗಳು ಹೆಚ್ಚುವರಿಯಾಗಿ ಮಧುಗಿರಿಗೆ ಮತ್ತೂಂದು ಆಂಬ್ಯುಲೆನ್ಸ್ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದ್ದು ತುರುವೇಕೆರೆಯಿಂದ ವಾಹನ ಬಂದಿದೆ. ಆದರೆ ಅದು ಇಂದಿಗೂ ಬಳಕೆಯಾಗುತ್ತಿಲ್ಲ.
ಬಳಕೆಗೆ ಅಧಿಕಾರಿಗಳ ನಿರುತ್ಸಾಹ: ಸದರಿ ತುರುವೇ ಕೆರೆಯಿಂದ ಬಂದಿರುವ ಹೆಚ್ಚುವರಿ ಆಂಬ್ಯುಲೆನ್ಸ್ ಬಳಕೆಯಾಗದೆ ನಿಂತಲ್ಲೇ ನಿಂತಿದ್ದು, ಪೂಜೆ ಮಾಡಿದ ಬಾಳೆ ಕಂದು ಕೂಡ ತೆಗೆದಿಲ್ಲ. ಆಸ್ಪತ್ರೆಯ ಹಿಂಭಾಗದಲ್ಲಿ ಕೆಟ್ಟು ನಿಂತಿರುವ ಸ್ಥಿತಿಯಲ್ಲಿ ಈ ತುರ್ತು ವಾಹನವಿದ್ದು, ಇದಕ್ಕೆ ಚಾಲಕನಿಲ್ಲದ ಕಾರಣ ಹೇಳಿ ಬಳಕೆ ಮಾಡುತ್ತಿಲ್ಲ. ಇಂತಹ ಸಂಪತ್ತಿಗೆ ವಾಹನವನ್ನು ಏಕೆ ತರಬೇಕಿತ್ತು? ಸಾರ್ವಜನಿಕರ ಜೀವ ಕಾಪಾಡಲು ವಾಹನವಿದ್ದರೂ ಚಾಲಕನನ್ನು ನೇಮಿಸಿಕೊಂಡು ಜನರಿಗೆ ಸೇವೆ ನೀಡದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಇಲ್ಲಿ ಎದ್ದು ಕಾಣುತ್ತಿದೆ.
ವೃದ್ಧೆ ಸಾವು ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು : ಕಳೆದ ತಿಂಗಳು ಐಡಿಹಳ್ಳಿಯಲ್ಲಿ ಆಂಬ್ಯುಲೆನ್ಸ್ ಬಾರದೆ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಜಿಲ್ಲಾಡಳಿತ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತಲ್ಲದೆ ಆಂಬ್ಯುಲೆನ್ಸ್ ಕೊರತೆಯನ್ನು ಸರಿಪಡಿಸುವ ಮಾತನಾಡಿ ತುರುವೇಕೆರೆಯಿಂದ ಈ ತುರ್ತು ವಾಹನವನ್ನು ಕರೆಸಿಕೊಂಡಿತ್ತು. ಈಗ ಅದಕ್ಕೆ ಚಾಲಕನೇ ಇಲ್ಲದೆ ನಿಂತಲ್ಲೇ ನಿಂತಿದ್ದು, ಮತ್ತೆ ಬಡ ಜೀವಗಳ ಜೊತೆ ಆರೋಗ್ಯ ಇಲಾಖೆ ಚೆಲ್ಲಾಟಕ್ಕೆ ನಿಂತಿದೆ.
ವಾರದಿಂದ ಪತ್ರ ಬರೆದು ಡಿಎಚ್‌ಒಗೆ ಒತ್ತಾಯ : ತುರ್ತು ವಾಹನ ಸೇವೆಗಳು ಹಾಗೂ ಚಾಲಕನ ನೇಮಕ ಟಿಎಚ್‌ಒ ನಿಯಂತ್ರಣಕ್ಕೆ ಬರುತ್ತದೆ. ವೇತನದ ವ್ಯವಸ್ಥೆ ಮಿಡಿಗೇಶಿ ಆಸ್ಪತ್ರೆಯ ವೈದ್ಯರಿಗೆ ಬರಲಿದ್ದು ನನಗೆ ಜವಾಬ್ದಾರಿ ಹಾಕಿದ್ದಾರೆ. ಈ ಬಗ್ಗೆ ಡಿಎಚ್‌ಒ ಅವರಿಗೆ ಒಂದು ವಾರದಿಂದ ಪತ್ರ ಬರೆದು ಒತ್ತಾಯಿಸಿದ್ದೇನೆ. ಶೀಘ್ರವಾಗಿ ಚಾಲಕನ ನೇಮಕ ಮಾಡಿ ತುರ್ತು ವಾಹನಕ್ಕೆ ಚಾಲನೆ ನೀಡುತ್ತೇವೆ ಎಂದು ಮಧುಗಿರಿ ಸಾರ್ವ ಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಶ್ ಸಿಂಗ್ ಉದಯವಾಣಿಗೆ ತಿಳಿಸಿದರು.
ಈ ಆ್ಯಂಬುಲೆನ್ಸ್‌ನ್ನು ಮಿಡಿಗೇಶಿಗೆ ಮೀಸಲಿಟ್ಟಿದ್ದು, ಚಾಲಕನನ್ನು ನೇಮಿಸಿದೆ. ಇನ್ನೆರಡು ದಿನದಲ್ಲಿ ಚಾಲಕ ಕರ್ತವ್ಯಕ್ಕೆ ಹಾಜರಾಗಲಿದ್ದು ಮಿಡಿಗೇಶಿಯ 15 ಕಿ.ಮೀ. ವ್ಯಾಪ್ತಿಯಲ್ಲಿ 108 ರೀತಿ ಕೆಲಸ ಮಾಡಲಿದೆ. ಇದರಲ್ಲಿ ಸ್ಟಾಫ್ ನರ್ಸ್ ಇರುವುದಿಲ್ಲ. ರೋಗಿಯನ್ನು ಮಧುಗಿರಿ ಆಸ್ಪತ್ರೆಗೆ ಸಾಗಸುವುದಷ್ಟೇ ಇವರ ಕೆಲಸ.
– ಡಾ.ಮಂಜುನಾಥ್, ಡಿಎಚ್‌ಒ, ತುಮಕೂರು
– ಮಧುಗಿರಿ ಸತೀಶ್