Advertisement

ಗಾಜಿನ ಮನೆಗೆ ಹೆಚ್ಚುವರಿ 5.28 ಕೋಟಿ ಪ್ರಸ್ತಾವನೆ

05:01 PM Sep 23, 2018 | Team Udayavani |

ದಾವಣಗೆರೆ: ಕುಂದುವಾಡ ಕೆರೆ ಬಳಿ ನಿರ್ಮಿಸಲಾಗಿರುವ ಗಾಜಿನ ಮನೆ ನಿರ್ವಹಣೆ ಸೇರಿ ಇತರೆ ವೆಚ್ಚಗಳಿಗೆ 5.28 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ತೋಟಗಾರಿಕಾ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಮಂಜೂರು ಮಾಡಿಸುವುದಾಗಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಭರವಸೆ ನೀಡಿದ್ದಾರೆ.

Advertisement

ಶನಿವಾರ, ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ 26.28 ಕೋಟಿ ಮೊತ್ತದಲ್ಲಿ ಕೆಆರ್‌ ಐಡಿಎಲ್‌ ವತಿಯಿಂದ ಅತ್ಯಾಕರ್ಷಕ ಗಾಜಿನ ಮನೆ ನಿರ್ಮಿಸಲಾಗಿದೆ. ದೀಪಾಲಂಕಾರ, ಜನರೇಟರ್‌ ಖರೀದಿ ಹಾಗೂ ನಿರ್ವಹಣೆಗೆ ಹೆಚ್ಚುವರಿಯಾಗಿ 5.28 ಕೋಟಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಆದಷ್ಟು ಬೇಗ ಹಣ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದರು.

ಪ್ರಕೃತಿ ವಿಕೋಪದಿಂದ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 65 ಹೆಕ್ಟೇರ್‌ನಷ್ಟು ತೋಟಗಾರಿಕಾ ಬೆಳೆ ಹಾನಿಯಾಗಿದೆ. ಬೆಳೆ ಪರಿಹಾರ ಯೋಜನೆಯಡಿ ಜಿಲ್ಲೆಗೆ 12 ಕೋಟಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 7 ಕೋಟಿ ರೂ. ವಿವಿಧ ಹಂತದ ರೈತರಿಗೆ ವಿತರಿಸಲಾಗಿದೆ. ಇಲಾಖೆ ವತಿಯಿಂದ ಯಾವುದೇ ರೀತಿ ತೊಂದರೆಯಾಗದಂತೆ ರೈತರಿಗೆ ಪರಿಹಾರ ವಿತರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳು, ವಿವಿಧ ಯೋಜನೆಗಳು ರೈತರಿಗೆ ಸಮರ್ಪಕವಾಗಿ ತಲುಪಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ ಅನಾವೃಷ್ಟಿಯಿಂದಾಗಿ ಬರಗಾಲ ಆವರಿಸಿದೆ. ಆದರೆ, ಈ ಭಾಗದಲ್ಲಿ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿದೆ. ದಾವಣಗೆರೆ ಜಿಲ್ಲೆಯ ಕೆಲವು ತಾಲೂಕಲ್ಲೂ ಮಳೆ ಕೊರತೆ ಇದೆ. ಈಗಾಗಲೇ ತೆಂಗು ಬೆಳೆ ಹಾನಿಗೆ ಹೆಕ್ಟೇರ್‌ಗೆ 18 ಸಾವಿರ ರೂ., ಅರ್ಧ ಹಾನಿಗೆ 6,500 ರೂ. ಪರಿಹಾರ ಧನ ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನಕ್ಕೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. 

ಯೋಜನೆಗಳ ಸಬ್ಸಿಡಿ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದರೂ ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಎಷ್ಟೇ ಕೆಲಸ ಮಾಡಿದರೂ ಎನೂ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತವೆ. ಆದರೂ ಸಹ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಅರ್ಹ ಪಲಾನುಭವಿಗಳಿಗೆ ತಲುಪುವಂತಾಗಬೇಕಿದೆ ಎಂದು ಹೇಳಿದರು.

Advertisement

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ, ಇತರೆ ಅಧಿಕಾರಿಗಳು ಇದ್ದರು. ಗಾಜಿನ ಮನೆಯಲ್ಲೇ ಫಲ-ಪುಷ್ಪ ಪ್ರದರ್ಶನ ಗಾಜಿನ ಮನೆಗೆ ಸಣ್ಣ ಮಟ್ಟದಲ್ಲಿ ಹಾನಿ ಉಂಟಾಗಿತ್ತು. ಅದನ್ನು ಈಗ ದುರಸ್ತಿ
ಪಡಿಸಲಾಗಿದೆ. ಈ ಬಾರಿ ಫಲ-ಪುಷ್ಪ ಪ್ರದರ್ಶನ ಈ ಗಾಜಿನ ಮನೆಯಲ್ಲೇ ನಡೆಯಲಿದೆ. ಮುಂದಿನ ದಿನಗಳಲ್ಲಿ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಸಹ ಗಾಜಿನ ಮನೆಗೆ ಸ್ಥಳಾಂತರಗೊಳ್ಳಲಿದೆ. ಡಿಸೆಂಬರ್‌ ತಿಂಗಳಲ್ಲಿ ವೈನ್‌
ಹಾಗೂ ಒಣದ್ರಾಕ್ಷಿ ಮೇಳ ಹಮ್ಮಿಕೊಳ್ಳಲಾಗುವುದು. ಸದ್ಯ ಸಾರ್ವಜನಿಕರಿಗೆ ಗಾಜಿನ ಮನೆ ವೀಕ್ಷಿಸಲು ಉಚಿತವಾಗಿ ಅನುವು ಮಾಡಿಕೊಡಲಾಗಿದೆ.

ಶನಿವಾರ, ಭಾನುವಾರದಂದು ಒಂದೂವರೆಯಿಂದ ಎರಡು ಸಾವಿರ ಜನರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿರ್ವಹಣಾ ವೆಚ್ಚ ಭರಿಸುವ ಉದ್ದೇಶದಿಂದ ವಯಸ್ಕರಿಗೆ 20 ಮತ್ತು ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕ ವಿಧಿಸುವ ಬಗ್ಗೆ ಯೋಜಿಸಲಾಗುತ್ತಿದೆ. 
 ಟಿ.ಆರ್‌. ವೇದಮೂರ್ತಿ, ತೋಟಗಾರಿಕಾ ಉಪ ನಿರ್ದೇಶಕರು.

ಅ. 2ರಂದು ಹಸ್ತಾಂತರ ರಾಜ್ಯದಲ್ಲಿ ಮೊದಲನೇ ಬಾರಿಗೆ ಕೆಆರ್‌ಐಡಿಎಲ್‌ ವತಿಯಿಂದ ಗಾಜಿನ ಮನೆ ನಿರ್ಮಿಸಲಾಗಿದೆ.
12.5 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್‌ ಕಾಮಗಾರಿ, ಗಾಜಿನ ಕಾಮಗಾರಿ ಕೈಗೊಳ್ಳಲಾಗಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಗಾರ್ಡನ್‌, 9 ಕೋಟಿ ರೂ. ವೆಚ್ಚದಲ್ಲಿ, ರಸ್ತೆ, ಚರಂಡಿ, ಇತರೆ ಕೆಲಸ, ಕಾಮಗಾರಿ ಕೈಗೊಳ್ಳಲಾಗಿದೆ. ಶೇ. 99ರಷ್ಟು ನಿರ್ಮಾಣ ಪೂರ್ಣಗೊಂಡಿದ್ದು ಅ. 2ರಂದು ತೋಟಗಾರಿಕೆ ಇಲಾಖೆಗೆ ಗಾಜಿನ ಮನೆ ಹಸ್ತಾಂತರಿಸಲಾಗುವುದು.
 ಚಂದ್ರಶೇಖರ್‌, ಕೆಆರ್‌ಐಡಿಎಲ್‌ ಅಭಿಯಂತರ

ವಿಪಕ್ಷದವರು ಎಷ್ಟೇ ಅಲ್ಲಾಡಿಸಿದರೂರಾಜ್ಯ ಸರ್ಕಾರ ಸುಭದ್ರ: ಮನಗೂಳಿ
ದಾವಣಗೆರೆ:
ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಹಿಂದಿದ್ದ ಹೋರಾಟದ ವೇಗ ಈಗಿಲ್ಲ. ವಿರೋಧ ಪಕ್ಷದವರು ಎಷ್ಟೇ ಅಲುಗಾಡಿಸಿದರೂ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ
ಹೇಳಿದರು. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ನಾನು, ಮಾಜಿ ಪ್ರಧಾನಿ ದೇವೇಗೌಡರ ಪರಮಶಿಷ್ಯ. ಏನೇ ಆದರೂ ಆಪರೇಷನ್‌ ಕಮಲಕ್ಕೆ ತುತ್ತಾಗುವುದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮಾಡಲು ಕೆಲಸ ಇಲ್ಲ. ಹಾಗಾಗಿ ಹತ್ತು ಮಂದಿ ಶಾಸಕರನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಅವರಲ್ಲಿ ಹಿಂದಿದ್ದ ಹೋರಾಟದ ಸ್ಪೀಡ್‌ ಈಗಿಲ್ಲ. ಬಿಜೆಪಿಯಲ್ಲೇ
ಗುಂಪುಗಾರಿಕೆ, ಭಿನ್ನಾಭಿಪ್ರಾಯವಿದೆ. ಬಿಎಸ್‌ ವೈ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲ್ಲ. ನಾವು ಗಟ್ಟಿಯಾಗಿದ್ದೇವೆ. ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ. ಮೇಲಾಗಿ ನಾವು ಬಿಜೆಪಿ ಶಾಸಕರನ್ನೂ ಸೆಳೆಯುವುದಿಲ್ಲ. ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ ಎಂದರು. 

ಇನ್ನು ಸಿಎಂ ಕುಮಾರಸ್ವಾಮಿಯವರು ಬಳಸಿರುವ ದಂಗೆ ಪದಕ್ಕೆ ವಿಶೇಷ ಅರ್ಥ ಕೊಡುವ ಅವಶ್ಯಕತೆ ಇಲ್ಲ. ದಂಗೆ ಎಂದರೆ ಹೊಡೆದಾಡುವುದಲ್ಲ. ಅದು ತಪ್ಪು ಕಲ್ಪನೆ. ನಮ್ಮ ವಿಜಯಪುರದ ಕಡೆ ದಂಗೆ ಎಂದರೆ ಬಾಯಿ ಬಡಿಯುವುದು ಎನ್ನುತ್ತೇವೆ. ಅದೇ ರೀತಿ ಕೊಡಗು, ಹಳೇ ಮೈಸೂರು ಭಾಗದಲ್ಲಿ ಒಂದೊಂದು ಪದಕ್ಕೆ ಬೇರೆ ಬೇರೆ ಅರ್ಥ ಇದೆ. ಹಾಗಾಗಿ ಸಿಎಂ ಬಳಸಿದ ದಂಗೆ ಶಬ್ದಕ್ಕೆ ವಿಶೇಷ ಅರ್ಥ ಕೊಡಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next