ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿವೇಶನ ಮತ್ತು ವಸತಿರಹಿತರನ್ನು ಗುರುತಿಸಿ ಅವರಿಗೆ ನಿವೇಶನ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲು ಸಂಕಲ್ಪ ಮಾಡಿರುವ ಆರೋಗ್ಯ ಸಚಿವ ಡಾ,ಕೆ,ಸುಧಾಕರ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರ ಮೇಲೆ ಒತ್ತಡ ಹೇರಿ ಕೊನೆಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಸವ ವಸತಿ ಯೋಜನೆ 3200 ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 45 ಸಾವಿರ ನಿವೇಶನ ರಹಿತರಿಗೆ ನಿವೇಶ ನೀಡುವ ಸಲುವಾಗಿ ಜಿಲ್ಲಾಡಳಿತ ಸರ್ಕಾರಿ ಜಮೀನನ್ನು ಕಾಯ್ದಿರಿಸಿದೆ. ಈ ಮಧ್ಯೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚುವರಿಯಾಗಿ 3200 ಮನೆಗಳನ್ನು ಮಂಜೂರು ಮಾಡಿಸಿದ್ದರಿಂದ ಸಹಜವಾಗಿ ವಸತಿ ಹೀನರಿಗೆ ಅನುಕೂಲ ಕಲ್ಪಿಸಿದಂತಾಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿ ಸಾವರ್ಕರ್ ವೃತ್ತ ನಿರ್ಮಾಣಕ್ಕೆ ಚಿಂತನೆ: ಶಾಸಕ ಕೆ.ರಘುಪತಿ ಭಟ್
2021-22ನೇ ಸಾಲಿನಲ್ಲಿ ವಿವಿದ ವಸತಿ ಯೋಜನೆಗಳಡಿ ಗ್ರಾಪಂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಬಸವ ವಸತಿ ಯೋಜನೆ ಮತ್ತು ಡಾ.ಬಿಆರ್ ಅಂಬೇಡ್ಕರ್ ನಿವಾಸ್ ಯೋಜನೆ ( ಗ್ರಾಮೀಣ) ಯಡಿ ಎಬಿಸಿ ವರ್ಗಗಳಂತೆ ಗ್ರಾಪಂವಾರು ಮನೆಗಳನ್ನು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತು ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ಹೆಚ್ಚುವರಿ ಮನೆಗಳನ್ನು ಬಸವ ವಸತಿ ಯೋಜನೆಯಡಿ ತಲಾ 100 ರಿಂದ 150 ಮನೆಗಳನ್ನು 2021-22ನೇ ಸಾಲಿನ ಮನೆಗಳ ಗುರಿಯಲ್ಲಿ ಮಂಜೂರು ಮಾಡುವಂತೆ ರಾಜೀವ್‍ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದರು.
ರಾಜೀವ್ ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಪ್ರಯತ್ನದಿಂದಾಗಿ ಸರ್ಕಾರ ಚಿಕ್ಕಬಳ್ಳಾಪುರ ಜಿಲಲೆಯ ಎಲ್ಲಾ ಗ್ರಾಪಂಗಳಿಗೆ ಬಸವ ವಸತಿ ಯೋಜನೆಯಡಿ 3200 ಹೆಚ್ಚುವರಿ ಮನೆಗಳನ್ನು 2021-22ನೇ ಸಾಲಿನ ಮನೆಗಳ ಗುರಿಯಲ್ಲಿ ಮಂಜೂರು ಮಾಡಿ ಆದೇಶಿಸಿ ಸರ್ಕಾರದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ-2 ಜ.ಲಕ್ಷ್ಮಣ್ ಅವರು ಆದೇಶ ಹೊರಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ಬಸವ ವಸತಿ ಯೋಜನೆಯಡಿ ಒಟ್ಟು 3200 ಮನೆಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ ಚಿಕ್ಕಬಳ್ಳಾಪುರದ ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರು ಕಲ್ಪಿಸುವ ನನ್ನ ಪ್ರಯತ್ನಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಧನ್ಯವಾದಗಳು.
-ಆರೋಗ್ಯ ಸಚಿವ ಡಾ.ಕೆ.ಸುಧಾಕರ್