Advertisement

ಮದ್ಯ ವಹಿವಾಟಿಗೆ ಚುನಾವಣಾ ಆಯೋಗದ ಲಗಾಮು

11:12 AM Apr 12, 2018 | Team Udayavani |

ಮಂಗಳೂರು: ರಜೆ, ವಿವಿಧ ಸಮಾರಂಭಗಳ ಕಾರಣ ಪ್ರತೀ ವರ್ಷ ಎಪ್ರಿಲ್‌- ಮೇ ಅವಧಿಯಲ್ಲಿ ಅತ್ಯಧಿಕ ಮದ್ಯ ಮಾರಾಟ ನಡೆಯುತ್ತದೆ. ಆದರೆ ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟ ಕುಸಿದಿದೆ.

Advertisement

ಮದ್ಯ ಅಕ್ರಮ ಮಾರಾಟ ಹಾಗೂ ಮತದಾರರಿಗೆ ಆಮಿಷವಾಗಿ ಬಳಸದಂತೆ ಮದ್ಯದಂಗಡಿಗಳ ಮೇಲೆ
ಚುನಾವಣಾಧಿಕಾರಿಗಳು ನಿಗಾ ಇರಿಸಿದ್ದಾರೆ. ಕಾನೂನು ಪ್ರಕಾರ ಸಾಮಾನ್ಯ ದಿನಗಳಲ್ಲಿ ಒಬ್ಬ ಗ್ರಾಹಕನಿಗೆ ಗರಿಷ್ಠ 6 ಬಾಟಲ್‌ (4.5 ಲೀ.) ಮದ್ಯ ನೀಡಬಹುದು. ನೀತಿ ಸಂಹಿತೆ ಜಾರಿಯಲ್ಲಿರುವಾಗ 2 ಬಾಟಲ್‌ ಮಾತ್ರ ಮಾರಬಹುದು.

ಜತೆಗೆ ಅಂಗಡಿ ಮಾಲಕರು ನಿತ್ಯವೂ ತಮಗಿರುವ ಬೇಡಿಕೆ, ವ್ಯವಹಾರದ ಲೆಕ್ಕವನ್ನು ನೀಡಬೇಕು. ಬೇಡಿಕೆ ಹೆಚ್ಚಿಸದಂತೆಯೂ ಸೂಚನೆ ಇದೆ. ಅಧಿಕಾರಿಗಳು ಮದ್ಯದಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು, ಮಾರಾಟ ವಿವರವನ್ನೂ ಪರಿಶೀಲಿಸುವರು.

ಮಾರಾಟಕ್ಕೆ ಕಡಿವಾಣ
ಸಾಮಾನ್ಯವಾಗಿ ಎಪ್ರಿಲ್‌-ಮೇ ಮದ್ಯದಂಗಡಿ ಗಳಿಗೆ ಹೆಚ್ಚು ವ್ಯಾಪಾರದ ಸಮಯ. ಈ ಅವಧಿಯಲ್ಲೇ ಚುನಾವಣೆ ಬಂದಿರುವುದರಿಂದ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿದೆ. ಆಯೋಗವು ವಿವಿಧ ಬಗೆಯ ಸತ್ಕಾರ ಕೂಟಗಳ ಮೇಲೂ ಕಣ್ಣಿಟ್ಟಿದ್ದು, ಮದ್ಯ ಪಾರ್ಟಿಗಳ ಆಯೋಜನೆಗೆ ಪರವಾನಿಗೆ ನೀಡುತ್ತಿಲ್ಲ. ಅನುಮತಿ ನೀಡಿದರೂ ಪಾರ್ಸೆಲ್‌ ತರಬಹುದಾದ ಮದ್ಯ ಬಾಟಲಿಗಳ ಸಂಖ್ಯೆಗೆ ಕಡಿವಾಣ ಹಾಕಿದೆ. 

ಜಿಲ್ಲೆಯಲ್ಲಿ ಪ್ರತಿವರ್ಷ ಫೆಬ್ರವರಿ-ಮಾರ್ಚ್‌ನಲ್ಲಿನ ದುಪ್ಪಟ್ಟು ಮದ್ಯ ಮಾರಾಟ ಎಪ್ರಿಲ್‌-ಮೇ ನಲ್ಲಿ ನಡೆಯುತ್ತದೆ. ಈ ವರ್ಷ ಎಪ್ರಿಲ್‌ ಮೊದಲ ವಾರದಿಂದಲೇ ವ್ಯಾಪಾರ ಕುಸಿತವಾಗಿದೆ ಎನ್ನುತ್ತಾರೆ ಮದ್ಯದಂಗಡಿ ಮಾಲಕರೊಬ್ಬರು.

Advertisement

ಬೆಲೆ ಏರಿಕೆಯೂ ಕಾರಣ
ಚುನಾವಣಾ ನೀತಿ ಸಂಹಿತೆಯ ಜತೆಗೆ ಮದ್ಯ ದರದಲ್ಲಿ ಆಗಿರುವ ಶೇ.8 ರಷ್ಟು ಏರಿಕೆಯೂ ವ್ಯವಹಾರ ಕುಸಿತಕ್ಕೆ ಕಾರಣವಾಗಿದೆ. ದರ ವ್ಯತ್ಯಾಸವಾದಾಗ ಲೇಬಲ್‌ಗ‌ಳು ಬದಲಾಗಬೇಕಾಗುತ್ತದೆ. ಇದಾಗದೆ ಕೆಲವು ವಿಧದ ಮದ್ಯಗಳು ಸಿಗುತ್ತಿಲ್ಲ. 

ಅಬಕಾರಿ ನಿಯಮ ಪ್ರಕಾರ ವೈನ್‌ ಸ್ಟೋರ್‌, ವೈನ್‌ಶಾಪ್‌ಗ್ಳಲ್ಲಿ ಮದ್ಯ ಮಾರಾಟಕ್ಕಷ್ಟೇ ಅವಕಾಶ, ಅಲ್ಲಿ ಕುಳಿತು ಕುಡಿಯುವಂತಿಲ್ಲ. ಆದರೆ ಬಹುತೇಕ ಅಂಗಡಿಯವರು ಕುಳಿತು ಕುಡಿಯುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರುತ್ತಾರೆ. ಆಯೋಗ ಅವುಗಳ ಮೇಲೂ ಕ್ರಮ ಕೈಗೊಳ್ಳುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಕುಸಿದಿದೆ. ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ 8,544 ಕೇಸ್‌ ಬಾಕ್ಸ್‌ಗಳು ಕಡಿಮೆ ಮಾರಾಟವಾಗಿವೆ. ಗ್ರಾಮೀಣ ಭಾಗದಲ್ಲಿ ಶೇ. 90ರಷ್ಟು ಮದ್ಯ ಮಾರಾಟ ನಿಯಂತ್ರಣಕ್ಕೆ ಬಂದಿದೆ. ಅಧಿಕ ಪ್ರಮಾಣದಲ್ಲಿ ಪಾರ್ಸೆಲ್‌ ಕೊಡಲು ಅಂಗಡಿ ಮಾಲಕರಿಗೆ ಅವಕಾಶವಿಲ್ಲ. ದಿನನಿತ್ಯದ ದಾಸ್ತಾನು ಸಾಗಣೆಯೂ ಕಡಿಮೆಯಾಗಿದೆ. ಮದ್ಯ ಸಾಗಣೆ ಕುರಿತು ನಮ್ಮ ಇಲಾಖೆ ಮತ್ತು ಪೊಲೀಸರೂ ಹೆಚ್ಚಿನ ನಿಗಾ ವಹಿಸಿದ್ದೇವೆ.
ಶೈಲಜಾ ಎ. ಕೋಟೆ, ಅಬಕಾರಿ ಡಿಸಿ, ದಕ್ಷಿಣ ಕನ್ನಡ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next