Advertisement

ಆ್ಯಪ್‌, ಆನ್‌ಲೈನ್‌ನಲ್ಲೇ ನೋಂದಣಿಗೆ ಯುವಜನರ ಒಲವು

10:51 PM Jan 23, 2022 | Team Udayavani |

ಮಂಗಳೂರು: ಆನ್‌ಲೈನ್‌, ಮೊಬೈಲ್‌ ಆ್ಯಪ್‌ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಇತ್ಯಾದಿ ಪ್ರಕ್ರಿಯೆಗಳಿಗೆ ಚುನಾವಣ ಆಯೋಗ ಅವಕಾಶ ಮಾಡಿಕೊಟ್ಟಿದ್ದು, ಯುವಜನರನ್ನು ಆಕರ್ಷಿಸುತ್ತಿದೆ.
ಒಟ್ಟು ಜನಸಂಖ್ಯೆಯಲ್ಲಿರುವ ಯುವಜನತೆಯ ಸಂಖ್ಯೆಗೂ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವ ಯುವ ಮತದಾರರ (18ರಿಂದ 19 ವರ್ಷ)ರ ಸಂಖ್ಯೆಗೂ ತುಂಬಾ ಅಂತರ ಇರುವುದರಿಂದ ಆಯೋಗವು ಯುವ ಮತದಾರರನ್ನು ಸೆಳೆಯಲು ಮುಂದಾಗಿದೆ. ಆನ್‌ಲೈನ್‌, ಮೊಬೈಲ್‌ ಆ್ಯಪ್‌ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಲು ದ.ಕ. ಜಿಲ್ಲೆಯ ಕಾಲೇಜುಗಳಲ್ಲಿ ಅಭಿಯಾನ ನಡೆಸಲಾಗಿದೆ. ಉಡುಪಿ ಜಿಲ್ಲೆಯ ಕಾಲೇಜುಗಳಲ್ಲಿ ಇಎಲ್‌ಸಿ (ಎಲೆಕ್ಟೋರಲ್‌ ಲಿಟರೆಸಿ ಕ್ಲಬ್‌) ಇದೆ. ಕಾಲೇಜುಗಳಲ್ಲಿ ವೋಟರ್‌ ಹೆಲ್ಪ್ಲೈನ್‌ ಮೊಬೈಲ್‌ ಆ್ಯಪ್‌(ವಿಎಚ್‌ಎ) ಹಾಗೂ ನ್ಯಾಷನಲ್‌ ವೋಟರ್ ಸರ್ವೀಸ್‌ ಪೋರ್ಟಲ್‌ (ಎನ್‌ವಿಎಸ್‌ಪಿ) ಮೂಲಕ ನೋಂದಣಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

Advertisement

ವೋಟರ್‌ ಹೆಲ್ಪ್ಲೈನ್‌ ಮೊಬೈಲ್‌ ಆ್ಯಪ್‌, ಎನ್‌ವಿಎಸ್‌ಪಿ ವೆಬ್‌ಪೋರ್ಟಲ್‌ (https://nvsp.in), ವೋಟರ್‌ ಪೋರ್ಟಲ್‌ (voterportal.eci.gov.in)ಮತ್ತು “ಗರುಡಾ’ ಆ್ಯಪ್‌ಗ್ಳ ಮೂಲಕವೇ ಮತದಾರರ ನೋಂದಣಿ, ತಿದ್ದುಪಡಿ ಮೊದಲಾದವು ನಡೆಯುತ್ತಿದ್ದು, ಗರುಡಾ ಆ್ಯಪ್‌ ಹೊರತುಪಡಿಸಿ ಉಳಿದೆಲ್ಲ ಆನ್‌ಲೈನ್‌ ಪೋರ್ಟಲ್‌/ ಆ್ಯಪ್‌ಗಳನ್ನು ಸಾರ್ವಜನಿಕರು ನೇರವಾಗಿ ಬಳಸಿಕೊಳ್ಳಬಹುದಾಗಿದೆ. ಗರುಡಾ ಆ್ಯಪ್‌ ಬಿಎಲ್‌ಒಗಳ ಬಳಕೆಗಾಗಿ ರೂಪಿಸಲಾಗಿದೆ. ಇವು ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುತ್ತಿದೆ. ಮುಖ್ಯವಾಗಿ ಯುವಜನಾಂಗವನ್ನು ಸೆಳೆಯುತ್ತಿದೆ.

ದ.ಕ. ಜಿಲ್ಲೆಯಲ್ಲಿ ನ. 8ರಿಂದ ಜ. 20ರ ವರೆಗೆ ಎನ್‌ವಿಎಸ್‌ಪಿಯಲ್ಲಿ 4,452, ವಿಎಚ್‌ಎನಲ್ಲಿ 11,501, ಗರುಡಾದಲ್ಲಿ 22,260, ವೋಟರ್ ಪೋರ್ಟಲ್‌ನಲ್ಲಿ 917 ಸೇರಿದಂತೆ ಒಟ್ಟು 39,130 ಅರ್ಜಿಗಳು ಸ್ವೀಕೃತಗೊಂಡಿವೆ. ಜಿಲ್ಲೆಯಲ್ಲಿ 18ರಿಂದ 19 ವರ್ಷ ವಯಸ್ಸಿನ (ಯುವ) 14,852 ಮಂದಿ ಮತದಾರರು ನೋಂದಣಿಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಎನ್‌ವಿಎಸ್‌ಪಿ ಮೂಲಕ 4,050, ವಿಎಚ್‌ಎ ಮೂಲಕ 7,310, “ಗರುಡಾ’ ಮೂಲಕ 15,383, ವಿ ಪೋರ್ಟಲ್‌ ಮೂಲಕ 320 ಅರ್ಜಿಗಳು ಸ್ವೀಕೃತಗೊಂಡಿವೆ. ಜಿಲ್ಲೆಯಲ್ಲಿ 8,392 ಮಂದಿ ಯುವ ಮತದಾರರು ನೋಂದಣಿಯಾಗಿದ್ದಾರೆ.

ಮಾಹಿತಿ ಸರಿಪಡಿಸಲು ಅವಕಾಶ
ತಪುಗಳಿದ್ದರೆ (ಹೆಸರು, ತಂದೆಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿ) ತಿದ್ದುಪಡಿ ಮಾಡಿಕೊಳ್ಳ ಬಹುದು. ಒಂದೇ ವಿಧಾನಸಭಾ ಕ್ಷೇತ್ರದ ಒಂದು ಮನೆಯಿಂದ ಮತ್ತೂಂದು ಮನೆಗೆ ಸ್ಥಳಾಂತರ ಗೊಂಡಿದ್ದರೆ ವಿಳಾಸ ತಿದ್ದುಪಡಿ ಮಾಡಿಕೊಳ್ಳಬಹುದು. ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದಲ್ಲಿ ಈ ಹಿಂದೆ ವಾಸವಿದ್ದ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದುಹಾಕಬಹುದು. ಹೊಸದಾಗಿ ಸ್ಥಳಾಂತರಗೊಂಡ ಪ್ರದೇಶದಲ್ಲಿ ನೊಂದಾಯಿಸಿಕೊಳ್ಳಬಹುದು. ಕುಟುಂಬದ ಸದಸ್ಯರು ಮೃತಪಟ್ಟಿದ್ದರೆ ಪಟ್ಟಿಯಿಂದ ಹೆಸರು ತೆಗೆಯಬಹುದಾಗಿದೆ. ಈ ಪ್ರಕ್ರಿಯೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌/ಆ್ಯಪ್‌ ಮೂಲಕ ಮಾಡಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ 2022ರ ಜ. 1ರಂತೆ 18 ವರ್ಷ (2004ರ ಜ. 1ರ ಮೊದಲು ಜನನ) ಮೇಲ್ಪಟ್ಟಿರಬೇಕು.

ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ಕಾಲೇಜಿನಲ್ಲಿ ಈಗಾಗಲೇ ಎಲೆಕ್ಟೋರಲ್‌ ಕ್ಲಬ್‌ ಲಿಟರೆಸಿ ಕ್ಲಬ್‌ ಆರಂಭಿಸಲಾಗಿದೆ. ಅವುಗಳ ಮುಖಾಂತರ ಆನ್‌ಲೈನ್‌, ಮೊಬೈಲ್‌ ಆ್ಯಪ್‌ ಬಳಸಿ ಮತದಾರರ ನೋಂದಣಿ ಮಾಡಲಾಗುತ್ತಿದೆ.
-ಡಾ| ನವೀನ್‌ ಭಟ್‌,
ಸಿಇಒ, ಉಡುಪಿ ಜಿ.ಪಂ.

Advertisement

ಕಾಲೇಜುಗಳಲ್ಲಿ ವಿಶೇಷ ಅಭಿಯಾನ ನಡೆಸಿ ಆನ್‌ಲೈನ್‌, ಆ್ಯಪ್‌ ಮೂಲಕ ಮತದಾರರ ಪಟ್ಟಿ ಸೇರ್ಪಡೆ ಕುರಿತು ಮಾಹಿತಿ ನೀಡಲಾಗಿದೆ. ಅದರ ಫ‌ಲವಾಗಿ ಸಾವಿರಾರು ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿಂದೆ ಒಟ್ಟು ಜನಸಂಖ್ಯೆಯಲ್ಲಿ ಇದ್ದ ಯುವಜನತೆಯ ಸಂಖ್ಯೆಗೂ ಮತದಾರರ ಪಟ್ಟಿಯಲ್ಲಿ ನೋಂದಣಿಯಾದ ಯುವ ಮತದಾರರ ಸಂಖ್ಯೆಗೂ ತುಂಬಾ ಅಂತರವಿತ್ತು. ಈ ಅಂತರ ಈಗ ಕಡಿಮೆಯಾಗುತ್ತಿದೆ.
-ಡಾ| ಕುಮಾರ್‌, ಸಿಇಒ, ದ.ಕ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next