Advertisement

ಮೀನು ಸಾಕಾಣಿಕೆಯಿಂದ ಅಧಿಕ ಲಾಭ; ಸಚಿವ ಎಸ್‌. ಅಂಗಾರ

05:43 PM Apr 19, 2022 | Team Udayavani |

ಸಿರುಗುಪ್ಪ: ಕಡಿಮೆ ಬಂಡವಾಳ, ಹೆಚ್ಚು ಲಾಭ, ಕಡಿಮೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು. ಮೀನು ಒಂದು ಪೌಷ್ಠಿಕ ಆಹಾರವಾಗಿದೆ. ಮೀನಿನಿಂದ 19 ವಿವಿಧ ಆಹಾರ ಉತ್ಪಾದನೆಗಳನ್ನು ಮಾಡಬಹುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ಬಳ್ಳಾರಿ ಜಿಪಂ ಜಿಲ್ಲಾ ಮೀನುಗಾರಿಕೆ ಇಲಾಖೆಯಿಂದ ನಗರದಲ್ಲಿ ನಬಾರ್ಡ್‌ ಯೋಜನೆಯಡಿಯಲ್ಲಿ ರೂ. ಒಂದು ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ನೂತನ ಮೀನು ಮಾರುಕಟ್ಟೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಬಳ್ಳಾರಿ ಭಾಗದಲ್ಲಿ ಅತಿ ಹೆಚ್ಚು ಉಷ್ಣಾಂಶವಿದ್ದು, ಸಿರುಗುಪ್ಪದಲ್ಲಿ ತುಂಗಭದ್ರಾ ನದಿಯ ಸಿಹಿನೀರನ್ನು ಬಳಸಿಕೊಂಡು ಭತ್ತಕ್ಕೆ ಪರ್ಯಾಯವಾಗಿ ಮೀನುಗಾರಿಕೆ ಮಾಡುವುದರಿಂದ ರೈತರು ಮತ್ತು ನಿರುದ್ಯೋಗಿಗಳು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಭತ್ತದ ನಾಡೆಂದು ಪ್ರಸಿದ್ಧಿ ಪಡೆದಿರುವ ಸಿರುಗುಪ್ಪ ನಗರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಪ್ರಾರಂಭಿಸಿದ್ದು ಕೃಷಿಹೊಂಡ, ಮೀನಿನ ಕೆರೆ, ಬಂಜರು ಭೂಮಿ, ಸವಳು ಭೂಮಿಯಲ್ಲಿ ಭತ್ತದ ಬೆಳೆಯೊಂದಿಗೆ ಮೀನುಗಾರಿಕೆಯ ಕೃಷಿಯನ್ನು ಅಳವಡಿಸಿಕೊಂಡರೆ ಹೆಚ್ಚಿನ ಲಾಭವನ್ನು ಗಳಿಸಬಹುದು ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಜನಸಂಖ್ಯೆ ಮತ್ತು ನಿರುದ್ಯೋಗ ಬಹುದೊಡ್ಡ ಎರಡು ಸಮಸ್ಯೆಗಳಾಗಿವೆ. ಇವುಗಳನ್ನು ಹೋಗಲಾಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಯೋಜನೆ ಮೂಲಕ ಅನೇಕ ಗುಂಪುಗಳನ್ನು ರಚಿಸಿ, ತರಬೇತಿ ನೀಡಿ ಉದ್ಯೋಗಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡಲಾಗುತ್ತಿದ್ದು, ಇಂಥ ಯೋಜನೆಗಳನ್ನು ಈ ಭಾಗದ ನಿರುದ್ಯೋಗಿ ಯುವಕರು ಸದುಪಯೋಗಪಡಿಸಿಕೊಳ್ಳಬೇಕು.

ಕರಾವಳಿ ಭಾಗದಲ್ಲಿ 327 ಕಿಮೀ, ಒಳನಾಡು ಭಾಗದಲ್ಲಿನ ಮೀನುಗಾರರ ಸಮಸ್ಯೆಗಳನ್ನು ಪರಿಶೀಲಿಸಿ, ಇಲಾಖೆಯಿಂದ ಮತ್ತು ನಿಗಮದಿಂದ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸುಕೊಡುವ ಮೂಲಕ ದೇಶದಲ್ಲಿ ಕರ್ನಾಟಕ ರಾಜ್ಯವು ಮೀನುಗಾರಿಕೆ ಉತ್ಪಾದನೆಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಮೀನು ಮಾರುಕಟ್ಟೆಯನ್ನು ಪ್ರಾರಂಭಿಸುವುದರಿಂದ ಮೀನು ಮಾರಾಟ ಮಾಡುವವರಿಗೆ ಸೌಲಭ್ಯಗಳು, ಮೀನಿನ ಗುಣಮಟ್ಟತೆ ಕಾಪಾಡಲು ಕೋಲ್ಡ್‌ ಸ್ಟೋರೇಜ್‌ ಘಟಕ, ವಿಶ್ರಾಂತಿ ಘಟಕ, ಮೀನಿನ ದುರಸ್ತಿ ಘಟಕ ಇದರೊಂದಿಗೆ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುವುದು.

Advertisement

ಭತ್ತದ ಕೃಷಿಗೆ ಹೆಚ್ಚಿನ ಕಾರ್ಮಿಕರು ಅವಶ್ಯಕತೆಯಿದ್ದು ಮನೆಯ ಕಡಿಮೆ ಸ್ಥಳದಲ್ಲಿಯೇ ಮೀನು ಕೃಷಿಗೆ ಕುಟುಂಬದವರೇ ನಿರ್ವಹಿಸಿ ಹೆಚ್ಚಿನ ಆದಾಯ ಗಳಿಸಬಹುದು, ಮೀನು ಕೃಷಿಗೆ ಕಡಿಮೆ ಕಾರ್ಮಿಕರು ಹೆಚ್ಚು ಉತ್ಪಾದನೆ, ಹೆಚ್ಚು ಆದಾಯ ಗಳಿಸಬಹದು, ಕೃಷಿಗೆ ಪೂರಕವಾಗಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೀನುಗಾರಿಕೆಯೂ ಒಂದು ಉತ್ತಮ ಉಪಕಸುಬಾಗಿದೆ ಎಂದು ಹೇಳಿದರು.

ಕೊಪ್ಪಳ ಸಂಸದ ಕರಡಿಸಂಗಣ್ಣ, ಶಾಸಕ.ಎಂ.ಎಸ್‌. ಸೋಮಲಿಂಗಪ್ಪ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಗಳೂರು ಅಧ್ಯಕ್ಷ ನಿತಿನ್‌ ಕುಮಾರ್‌, ವ್ಯವಸ್ಥಾಪಕ ನಿರ್ದೇಶಕ ದಿನೇಶ್‌ ಕುಮಾರ್‌ ಕಳ್ಳರೇ, ಉಪನಿರ್ದೇಶಕ ಎಂ.ಎಲ್‌.ದೊಡ್ಡಮನಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರ ಕೆ. ನಟರಾಜ್‌, ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರು ಬಸವನಗೌಡ, ಜಿಲ್ಲಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಶಿವಣ್ಣ, ತಹಶೀಲ್ದಾರ್‌ ಎನ್‌.ಆರ್‌. ಮಂಜುನಾಥಸ್ವಾಮಿ, ನಗರಸಭೆ ಅಧ್ಯಕ್ಷ ಕೆ. ಸುಶೀಲಮ್ಮ, ಗ್ರಾಪಂ ಅಧ್ಯಕ್ಷೆ ಎಸ್‌.ಶೇಖಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next