Advertisement

ಭಾವಾಂತರ ಯೋಜನೆಗೆ ತೊಗರಿ ಸೇರಿಸಿ

05:37 AM Jan 11, 2019 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕವಲ್ಲದೇ ಉತ್ತರ ಕರ್ನಾಟಕದಾದ್ಯಂತ ಬೆಳೆಯುತ್ತಿರುವ ಪ್ರಮುಖ ವಾಣಿಜ್ಯ ಬೆಳೆ ತೊಗರಿಯನ್ನು ಭಾವಾಂತರ ಯೋಜನೆಗೆ ಸೇರ್ಪಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಬಂದ್‌ ಮಾಡಲು ಎಚ್ಕೆಸಿಸಿಐ ಸಭಾಂಗಣದಲ್ಲಿ ನಡೆದ ರೈತ ನಾಯಕರು, ಎಚ್ಕೆಸಿಸಿಐ ಪದಾಧಿಕಾರಿಗಳು, ಎಪಿಎಂಸಿ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಸಭೆಯಲ್ಲಿ ಎಪಿಎಂಸಿ ವ್ಯಾಪಾರಸ್ಥರ, ದಾಲ್‌ಮಿಲ್‌ ಸಮಸ್ಯೆಗಳ ಜತೆಗೆ ರೈತರ ಸಮಸ್ಯೆಗಳಿಗೂ ಸ್ಪಂದಿಸುವ ಮಹತ್ವದ ಭಾವಾಂತರ ಯೋಜನೆ ಜಾರಿಗೆ ತರಬೇಕೆಂಬ ನಿಟ್ಟಿನಲ್ಲಿ ಚರ್ಚಿಸಲಾಯಿತು.

ಭಾವಾಂತರ ಯೋಜನೆ ಅನುಷ್ಠಾನಕ್ಕೆ ತರುವ ಬೇಡಿಕೆ ಸಮರ್ಥಿಸಿದ ರೈತ ಮುಖಂಡರು ಈ ಬಗ್ಗೆ ಹೋರಾಟ ಮಾಡಲು ಮಾರ್ಗೊಪಾಯಗಳನ್ನು ಉತ್ತರ ಕರ್ನಾಟಕದ ಎಪಿಎಂಸಿ ಸಂಘಗಳೊಡನೆ ಸಮಾಲೋಚಿಸಿ ಕಂಡುಹಿಡಿಯಲು ನಿರ್ಧರಿಸಿದರು. ನಂತರ ರೈತರು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಜಂಟಿಯಾಗಿ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲು ಒಕ್ಕೊರಲಿನ ನಿರ್ಧಾರ ತೆಗೆದುಕೊಳ್ಳಲಾಯಿತು.

ಮುಂದಿನ ದಿನಗಳಲ್ಲಿ ಒಂದು ದಿನ ಉತ್ತರ ಕರ್ನಾಟಕ ಬಂದ್‌ ಆಚರಿಸಿ ಅಂದು ಎಪಿಎಂಸಿ ವ್ಯಾಪಾರದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬೇಕೆಂದು ಹಾಗೂ ಆಯಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ತೊಗರಿಗೆ ಭಾವಾಂತರ ಯೋಜನೆ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಲು ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಯಿತು.

ಜಂಟಿ ಸಭೆಯಲ್ಲಿ ರೈತ ನಾಯಕರಾದ ಮಾರುತಿ ಮಾನ್ಪಡೆ, ಸಿದ್ರಾಮಪ್ಪ ಪಾಟೀಲ ಧಂಗಾಪುರ, ಬಸವರಾಜ ಇಂಗಿನ, ಮೌಲಾ ಮುಲ್ಲಾ ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು. ಎಚ್ಕೆಸಿಸಿಐ ಎಪಿಎಂಸಿ ಉಪ ಸಮಿತಿ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ಭಾವಾಂತರ ಯೋಜನೆ ಅನುಷ್ಠಾನ ಎಲ್ಲರಿಗೂ ಅತ್ಯಗತ್ಯವಾಗಿದೆ ಎಂದು ಹೇಳಿದರು.

Advertisement

ಎಪಿಎಂಸಿ ಸದಸ್ಯ ಶ್ರೀಮಂತ ಉದನೂರ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಭಾವಾಂತರ ಯೋಜನೆ ಅನುಷ್ಠಾನ ಖಚಿತ. ಈ ದಿಸೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗೋಣ ಎಂದರು. ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ಸೋಮನಾಥ ಜೈನ, ದಾಲ್‌ಮಿಲ್‌ ಸಂಘದ ಮಾಜಿ ಕಾರ್ಯದರ್ಶಿ ಸಂಗಣ್ಣ ಪಾಟೀಲ, ಸೇಡಂ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗರಾಜ ತೊಟ್ನಳ್ಳಿ, ಶ್ರೀ ಜಗನ್ನಾಥ ಸಂಗಾಪುರ, ಚನ್ನಮಲ್ಲಿಕಾರ್ಜುನ ಅಕ್ಕಿ ಸಲಹೆ ನೀಡಿದರು.

ರಾಣಿಬೆನ್ನೂರು ವರ್ತಕರ ಸಂಘದಿಂದ ಬಸಣ್ಣ ಹೊನ್ನಾಳಿ, ಬಾಗಲಕೋಟೆಯಿಂದ ಪಿ.ಟಿ. ಕಜ್ಜರಿ, ಯಾದಗಿರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ವಿಷ್ಣುಕುಮಾರ ವ್ಯಾಸ್‌, ಹನುಮಾನದಾಸ ಮುಂದಡಾ, ಸೋಮನಾಥ ಜೈನ, ಬೀದರಿನಿಂದ ವೀರೇಂದ್ರ, ಬೆಂಗಳೂರಿನಿಂದ ಚನ್ನಮಲ್ಲಿಕಾರ್ಜುನ ಅಕ್ಕಿ ಹಾಗೂ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next