ಗದಗ: ಕೋವಿಡ್-19 ಸೋಂಕು ನಿಯಂತ್ರಣ ಸಂಕಷ್ಟದ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ವಿಳಂಬವಾಗಬಾರದು. ಮಾನವ ಸಂಪನ್ಮೂಲ ಒದಗಿಸಿರುವ ಸಂಸ್ಥೆ ಒಂದು ವಾರದಲ್ಲಿ ಬಾಕಿ ವೇತನ ಪಾವತಿಸಬೇಕು. ಇಲ್ಲವೇ ಸಂಸ್ಥೆಯ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 402 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರೂಪ್ “ಡಿ’ ಹಾಗೂ ನರ್ಸ್ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಆಗಿಲ್ಲವೆಂಬ ದೂರುಗಳು ಕೇಳಿ ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್.ಭೂಸರೆಡ್ಡಿ, ಹೊರಗುತ್ತಿಗೆ ಸಿಬ್ಬಂದಿ ಕುರಿತಂತೆ 2020ರ ಜನವರಿಯಲ್ಲಿ 289 ಸಿಬ್ಬಂದಿ ಪೈಕಿ 277 ಸಿಬ್ಬಂದಿಗೆ ವೇತನ ಪಾವತಿಯಾಗಿದೆ. ಫೆಬ್ರವರಿಯಲ್ಲಿ 290ರ ಪೈಕಿ 276 ಜನರಿಗೆ ಹಾಗೂ ಮಾರ್ಚ್‌ನಲ್ಲಿ 296 ಜನರಲ್ಲಿ 275 ಜನರಿಗೆ ವೇತನ ಪಾವತಿಯಾಗಿದೆ. 47 ಜನ ಸಿಬ್ಬಂದಿಯ ವೇತನ ಪಾವತಿಯಾಗಿಲ್ಲ. ಇದಲ್ಲದೇ 104 ಜನ ಸಿಬ್ಬಂದಿಯು ದಾಖಲೆ ನೀಡದಿರುವ ಕಾರಣ ವೇತನ ಬಾಕಿ ಉಳಿದಿದೆ ಎಂದು ಗುತ್ತಿಗೆ ಸಂಸ್ಥೆ ತಿಳಿಸಿದೆ.
ಅಲ್ಲದೇ, ಮಾರ್ಚ್ ತಿಂಗಳಲ್ಲಿ 6 ಜನ, ಏಪ್ರಿಲ್‌ನಲ್ಲಿ 16 ಜನ ನರ್ಸ್‌ಗಳು ನೇಮಕವಾಗಿದ್ದು, ಅವರ 30 ದಿನದ ವೇತನ ಮಾತ್ರ ಬಾಕಿ ಇದೆ. ಸಿಬ್ಬಂದಿಯನ್ನು ಒದಗಿಸುವ ಗುತ್ತಿಗೆ ಸಂಸ್ಥೆಗೆ ಸಂಬಳ ಬಾಕಿ ಇರುವ ಪ್ರಕರಣಗಳಿಗೆ ಈಗಾಗಲೇ ಮೂರು ಬಾರಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಸಭೆಗೆ ವಿವರಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಒ ಡಾ| ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಮ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು.