ಬೆಂಗಳೂರು: ಬ್ರಿಗೇಡ್ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಕಾಫಿಶಾಪ್ ಮಾರಾಟ ಸಂಬಂಧ ಕರೀಂ ತೆಲಗಿಯಿಂದ ಪಡೆದುಕೊಂಡಿದ್ದ 25 ಲಕ್ಷ ರೂ.ಗಳನ್ನು ಬಡ್ಡಿ ಸಹಿತ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸುವಂತೆ ಶಂಶಾದ್ ಅಹಮದ್ ಎಂಬುವವರಿಗೆ ಹೈಕೋರ್ಟ್ ಆದೇಶಿಸಿದೆ.
ಬಹುಕೋಟಿ ಹಗರಣದ ಆರೋಪಿಯಾಗಿರುವ ತೆಲಗಿ ಕಾಫೀಶಾಪ್ ಖರೀದಿಸಲು ಮುಂದೆ ಬಂದಿದ್ದ. ಇದಕ್ಕೆ ಮುಂಗಡವಾಗಿ 25 ಲಕ್ಷಗಳನ್ನು ಶಂಶಾದ್ ಅಹಮದ್ ಪಡೆದಿದ್ದ. ಈ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸುವಂತೆ ಸಿಬಿಐ ನೀಡಿದ್ದ ನೋಟಿಸ್ ರದ್ದುಕೋರಿ ಶಂಶಾದ್ ಅಹಮದ್ ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ರವೀಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಅಹಮದ್ ಹಿಂದೆ ತೆಲಗಿಯಿಂದ ಪಡೆದುಕೊಂಡಿದ್ದ 25 ಲಕ್ಷ ರೂ.ಗಳಿಗೆ 2010ರಿಂದ ಅನ್ವಯವಾಗುವಂತೆ ಶೇ. 16ರಷ್ಟು ಬಡ್ಡಿ ಸೇರಿಸಿ ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ಆದೇಶದಲ್ಲಿ ನ್ಯಾಯಪೀಠ ಉಲ್ಲೇಖೀಸಿದೆ.
ಏನಿದು ಪ್ರಕರಣ: ಅವೆನ್ಯೂ ರಸ್ತೆಯಲ್ಲಿರುವ ಕಾಫೀಶಾಪ್ ಖರೀದಿಸಲು ಆಸಕ್ತಿ ಹೊಂದಿದ್ದ ತೆಲಗಿ, ಕಾಫೀಶಾಪ್ ಮಾಲೀಕ ಶಂಶಾದ್ ಅಹಮದ್ ಅವರನ್ನು ಸಂಪರ್ಕಿಸಿದ್ದ. ಅದರಂತೆ 50 ಲಕ್ಷ ರೂ.ಗೆ ಮಾರಾಟ ಒಪ್ಪಂದವಾಗಿತ್ತು. ತೆಲಗಿ ಮುಂಗಡ ರೂಪದಲ್ಲಿ ಶಂಶಾದ್‌ಗೆ 25 ಲಕ್ಷ ರೂ. ನೀಡಿದ್ದ. ಉಳಿದ 25 ಲಕ್ಷ ರೂ. ನೀಡುವಷ್ಟರಲ್ಲಿ ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿ ಬಂಧಿತನಾಗಿದ್ದ.
ತೆಲಗಿ ಪ್ರಕರಣ ಕುರಿತು ತನಿಖೆ ನಡೆಸಿದ್ದ ಸಿಬಿಐ, ಕಾಫಿಶಾಪ್ ಖರೀದಿಗಾಗಿ ತೆಲಗಿಯಿಂದ ಪಡೆದಿದ್ದ ಮುಂಗಡವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಶಂಶಾದ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಶಂಶಾದ್ ಹೈಕೋರ್ಟ್ ಮೆಟ್ಟಿಲೇರಿದ್ದ. ಸಿಬಿಐ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್, ತೆಲಗಿ ಅಕ್ರಮ ಮಾರ್ಗದಿಂದ ಗಳಿಸಿರುವ ಹಣವನ್ನೇ ಕಾಫೀಶಾಪ್ ಖರೀದಿಸಲು ನೀಡಿದ್ದಾನೆ.
ಹೀಗಾಗಿ ಆತನಿಂದ ಮುಂಗಡ ಪಡೆದಿರುವ 25 ಲಕ್ಷ ರೂ. ಸರ್ಕಾರಕ್ಕೆ ಹಿಂತಿರುಗಿಸುವುದು ನ್ಯಾಯಸಮ್ಮತವಾಗಿದೆ ಎಂದು ಹೇಳಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಹಣವನ್ನು ಬಡ್ಡಿ ಸಹಿತ ಪಾವತಿಸುವಂತೆ ಶಂಶಾದ್‌ಗೆ ಸೂಚಿಸಿದೆ.