ಮಂಗಳೂರು: ಬಂಟರು ಯಾನೆ ನಾಡವರನ್ನು ಪ್ರವರ್ಗ 2 (ಎ)ಗೆ ಸೇರಿಸಬೇಕು. ಅಭಿವೃದ್ಧಿ ನಿಗಮ ಸ್ಥಾಪಿಸಿ ಪ್ರತಿ ವರ್ಷ 500 ಕೋಟಿ ರೂ. ಅನುದಾನ ನೀಡಬೇಕು. ಸರಕಾರದ ಅಧೀನದಲ್ಲಿರುವ ಹಿಂದೆ ಬಂಟರು ಆಡಳಿತದಾರರಾಗಿದ್ದ ಹಾಗೂ ಅನುವಂಶಿಕ ಮೊಕ್ತೇಸರರನ್ನು ಹೊಂದಿದ್ದ ದೇವಸ್ಥಾನ, ದೈವಸ್ಥಾನ ಹಾಗೂ ಇತರ ಆರಾಧನಾ ಕ್ಷೇತ್ರಗಳ ಆಡಳಿತವನ್ನು ಸಂಬಂಧಪಟ್ಟವರಿಗೆ ವಾಪಾಸು ನೀಡಬೇಕು ಸೇರಿದಂತೆ ತಮ್ಮ 12 ಬೇಡಿಕೆಗಳನ್ನು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ಈಡೇರಿಸಬೇಕು ಎಂದು ಬಂಟರು ಯಾನೆ ನಾಡವರ ಮಾತೃ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಬಂಟ್ಸ್ ಹಾಸ್ಟೆಲ್‌ನ ಅಮೃತೋತ್ಸವ ಕಟ್ಟಡ ಸಭಾಂಗಣದಲ್ಲಿ ಮಂಗಳವಾರ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸುದ್ದಿಗೋಷ್ಠಿಯಲ್ಲಿ ಸಂಘದ ಬೇಡಿಕೆಗಳ ಬಗ್ಗೆ ವಿವರ ನೀಡಿದರು.
ಸಂಘವು 1956ರಿಂದ 2004ರವರೆಗೆ ಸರಕಾರಿ ಹಾಗೂ ಸಂಬಂಧಪಟ್ಟ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದ ಬಂಟರ ಸಂಖ್ಯೆಯ ಬಗ್ಗೆ ಅಧ್ಯಯನ ಮಾಡಿ ಅದರ ವರದಿಯ ಆಧಾರದಲ್ಲಿ ನಿಗಮ ಸ್ಥಾಪನೆ ಹಾಗೂ ಮೀಸಲಾತಿಗೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಗಿದೆ. ಖುದ್ದು ನಾಲ್ಕು ಬಾರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಎದುರು ಹಾಜರಾಗಿ ವಾದ ಮಂಡಿಸಿದ್ದೇನೆ. ಪ್ರಸಕ್ತ ಎಲ್ಲಾ ಜಾತಿಗಳಿಗೂ ನಿಗಮಗಳು ಕ್ಷಿಪ್ರಗತಿಯಲ್ಲಿ ಮಂಜೂರಾಗುತ್ತಿದೆ. ಹಾಗಿದ್ದರೂ ಬಂಟರ ಬಗೆಗಿನ ಸರಕಾರಗಳ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮದ ಮೂಲಕ ಧ್ವನಿ ಎತ್ತುತ್ತಿರುವುದಾಗಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ಸಂಪಿಗೆದಡಿ ಸಂಜೀವ ಶೆಟ್ಟಿ, ಸಿಎ ರಾಮ ಮೋಹನ ರೈ ಉಪಸ್ಥಿತರಿದ್ದರು.