ಬೆಂಗಳೂರು: “ಗ್ರಾಮಗಳ ಸಬಲೀಕರಣ’ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹತ್ತು ಹಳ್ಳಿಗಳು ಆಯ್ಕೆಯಾಗಿವೆ.
2010ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದ್ದು, 2ನೇ ಹಂತದ ಯೋಜನೆಗೆ ಚಾಲನೆ ನೀಡಿದ್ದು, ಆಯ್ಕೆಯಾದ ಹಳ್ಳಿಗಳ ಪಟ್ಟಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಇಲಾಖೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ನಗರ ಜಿಪಂ ವ್ಯಾಪ್ತಿಯ ಗುಡ್ಡಹಟ್ಟಿ, ಗುಳಕ ಮಲೆ, ಹುಲ್ಲಹಳ್ಳಿ, ಐವರ್ ಕುಂದಾಪುರ, ಮಹಾಂತಲಿಂಗಾಪುರ, ಮಾರನಾಯಕನಹಳ್ಳಿ, ಸೊನ್ನನಾಯಕನಪುರ, ಕೊಪ್ಪಗೇಟ್, ವಿಟ್ಟ ಸಂದ್ರ ಗ್ರಾಮಗಳು ಸ್ಥಾನ ಪಡೆದಿವೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಪ್ರಧಾನ ಮಂತ್ರಿ ಆದರ್ಶ ಗ್ರಾಮ’ ಯೋಜನೆಗೆ ಹಳ್ಳಿಗಳನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಕೆಲ ಮಾನದಂಡಗಳನ್ನು ನಿರ್ದಿಷ್ಟಗೊಳಿಸಿದೆ. ಅವುಗಳಿಗೆ ತಕ್ಕಂತೆ ಹಳ್ಳಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿರುವ ಮಾನದಂಡವೆಂದರೆ, ಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಶೇ.50ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದರೆ, ಅಂತಹ ಗ್ರಾಮವನ್ನು ಯೋಜನೆಗೆ ಪರಿಗಣಿಸ ಲಾಗುತ್ತದೆ. ಹಳ್ಳಿಗಾಡಿನ ಜನರ ಜೀವನ ಮಟ್ಟ ಸುಧಾರಿಸುವ ಜೊತೆಗೆ ಹಳ್ಳಿಗಳನ್ನು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿ ಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇಂತಹ ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಗೂಡಿ 50 ಲಕ್ಷ ರೂ. ಅನುದಾನ ನೀಡಲಿವೆ.
ಅನುಕೂಲಗಳು ಹಲವು: ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾದ ಹಳ್ಳಿಗಳಿಗೆ ಕೆಲ ಸೌಲಭ್ಯಗಳು ಸಿಗಲಿವೆ. ಬ್ಯಾಂಕ್‌ಗಳು, ಎಟಿಎಂ ಕೇಂದ್ರಗಳು ಕೂಡ ಸ್ಥಾಪನೆಯಾಗಲಿವೆ. ಅಂಚೆ ಕಚೇರಿ,ಟೆಲಿಫೋನ್ ಕೇಂದ್ರಗಳು ತೆರೆಯಲಿವೆ. ರಸ್ತೆಗಳ ಅಭಿವೃದ್ಧಿ ಜೊತೆಗೆ ಅವುಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಬೆಸೆಯಲಾಗುವುದು. ಶುದ್ಧ ಕುಡಿ ಯುವ ನೀರಿಗೂ ಮನ್ನಣೆ ನೀಡಲಾಗುತ್ತದೆ. ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಮತ್ತು ಶೌಚಾಲಯ ನಿರ್ಮಾಣ
ಕಾರ್ಯ ನಡೆಯ ಲಿದೆ. ಸೂರಿಲ್ಲದವರಿಗೆ ಸೂರು ಕಲ್ಪಿಸಲಾಗುವುದು. ಶಾಲೆ ಬಿಡದಂತೆ ನೋಡಿಕೊಳ್ಳು ವುದು: ಪ್ರಮುಖವಾಗಿ ಮಕ್ಕಳ ಶಿಕ್ಷಣ, ಮಹಿಳೆಯರ ಸಬಲೀಕರಣ ಮತ್ತು ಹಿರಿಯ ಜೀವಿಗಳ ಆರೋಗ್ಯಕ್ಕೆ ಮನ್ನಣೆ ನೀಡಲಾಗುತ್ತದೆ. ಹಳ್ಳಿಯಲ್ಲಿ ಸುಸಜ್ಜಿತ ಅಂಗನವಾಡಿ ಮತ್ತು ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುವುದು. 3-6 ವರ್ಷದ ಮಕ್ಕಳು ಅಂಗನವಾಡಿ ಮತ್ತು 6-14 ವರ್ಷದ
ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು. ಲಿಂಗ- ತಾರತಮ್ಯ ನಿವಾರಣೆಗೆ ಯೋಜನೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ. ಬಿಪಿಎಲ್ ಕಾರ್ಡ್‌ದಾರರಿಗೆ ಆಹಾರ ಭದ್ರತೆ ಕಲ್ಪಿಸಲಾಗುವುದು. ಈ ಯೋಜನೆ ಜಾರಿಯಿಂದ ಹಳ್ಳಿಗರ ಜೀವನ ಮಟ್ಟ ಸುಧಾರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಶಸ್ಸಿನ ನಂತರ ವಿಸ್ತಾರ :
2009-10ರಲ್ಲಿ ಕೇಂದ್ರ ಸರ್ಕಾರ ಪ್ರಯೋಗಿಕವಾಗಿ ಈ ಯೋಜನೆಯನ್ನು (ಸಾವಿರ ಹಳ್ಳಿಗಳಲ್ಲಿ) ಹಿಮಾಚಲ ಪ್ರದೇಶ,
ಬಿಹಾರ, ರಾಜಸ್ಥಾನ, ತಮಿಳು ನಾಡು, ಅಸ್ಸಾಂನಲ್ಲಿ ಆರಂಭಿಸಲಾಗಿತ್ತು. ನಂತರ 2015ರಲ್ಲಿ ಕರ್ನಾಟಕ, ಪಂಜಾಬ್, ಒಡಿಶಾ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಹರಿಯಾಣ ಸೇರಿದಂತೆ 1500 ಹಳ್ಳಿಗಳಿಗೆ ವಿಸ್ತರಿಸಿತು
ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ 10 ಹಳ್ಳಿಗಳು ಆಯ್ಕೆಯಾಗಿರುವುದು ಸಂತಸ ಪಡುವ ವಿಚಾರ. ●ಕೆ.ಶಿವರಾಮೇಗೌಡ, ಜಿಪಂ ಸಿಇಒ