ಮುಂಬಯಿ : ಆದರ್ಶ್ ಹೌಸಿಂಗ್ ಸೊಸೈಟಿ ಹಗಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ವಿರುದ್ಧ ರಾಜ್ಯಪಾಲರು 2016ರಲ್ಲಿ ನೀಡಿದ್ದ ವಿಚಾರಣಾ ಅನುಮತಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಹೈಕೋರ್ಟಿನ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಚವಾಣ್, “ಸತ್ಯವೇ ಜಯಿಸಿದೆ; ನನಗೆ ನ್ಯಾಯಾಂಗದಲ್ಲಿ ಪೂರ್ತಿ ವಿಶ್ವಾಸವಿದೆ; ಸರಕಾರದ ಆದೇಶ ರಾಜಕೀಯ ಪ್ರೇರಿತವಾಗಿದೆ” ಎಂದು ಹೇಳಿದ್ದಾರೆ.
2013ರಲ್ಲಿ ಆಗಿನ ರಾಜ್ಯಪಾಲರಾಗಿದ್ದ ಕೆ ಶಂಕರನಾರಾಣ ಅವರು ಅಶೋಕ್ ಚವಾಣ್ ವಿರುದ್ದ ವಿಚಾರಣೆ ನಡೆಸಲು ಸಿಬಿಐ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದರು.ಅದಾಗಿ 2016ರಲಿ ಅಂದಿನ ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ಅವರು ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಚವಾಣ್ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರವಾಗಿ ಸಿಬಿಐ ತಾನು ಚವಾಣ್ ವಿರುದ್ಧ ಹೊಸ ಸಾಕ್ಷ್ಯಗಳು ತನ್ನ ಬಳಿ ಇವೆ ಮತ್ತು ಅವುಗಳನ್ನು ತಾನು ಶೀಘ್ರವೇ ಸಲ್ಲಿಸುವುದಾಗಿ ಬಾಂಬೆ ಹೈಕೋರ್ಟಿಗೆ ತಿಳಿಸಿತ್ತು. ಆದರೆ ಸಿಬಿಐ ತಾನು ಹೇಳಿದ ಪ್ರಕಾರ ಯಾವುದೇ ಸಾಕ್ಷ್ಯವನ್ನು ಸಲ್ಲಿಸಲಿಲ್ಲ.
ಸಿಬಿಐ ತಾನು ಹೇಳಿದಂತೆ ಯಾವುದೇ ಹೊಸ ಸಾಕ್ಷ್ಯ ಈ ವರೆಗೂ ಸಲ್ಲಿಸಿಲ್ಲವಾದ್ದರಿಂದ ಚವಾಣ್ ವಿರುದ್ಧದ ತನಿಖಾ ಅನುಮತಿಯನ್ನು ನಾವು ತಿರಸ್ಕರಿಸುತ್ತಿದ್ದೇವೆ ಎಂದು ಇಂದು ನ್ಯಾಯಾಧೀಶರಾದ ರಣಜಿತ್ ಮೋರೆ ಮತ್ತು ಸಾಧನಾ ಜಾಧವ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.
ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಚವಾಣ್ ವಿರುದ್ಧ ತನಿಖಾ ಅನುಮತಿ ನೀಡುವ ಮುನ್ನ ಸಿಬಿಐ ಸಲ್ಲಿಸಿದ್ದ ಸಾಕ್ಷ್ಯಗಳನ್ನು ವಿಶ್ವಾಸಾರ್ಹ ಸಾಕ್ಷ್ಯಗಳೆಂದು ಪರಿಗಣಿಸಲಾಗದು ಎಂದು ವಿಭಾಗೀಯ ಪೀಠ ಹೇಳಿತು.
ತನಿಖಾ ಅನುಮತಿ ನೀಡಿರುವ ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಯಾರೊಬ್ಬರ ಅಭಿಪ್ರಾಯದಿಂದಲೂ ಪ್ರಭಾವಿತರಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.