ಮಡಿಕೇರಿ: ಇತ್ತೀಚೆಗೆ ಹಾಕಿ ಕ್ರೀಡೆಯಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ತರಲಾಗಿದ್ದು, ಈ ಬದಲಾವಣೆಗೆ ಯುವ ಕ್ರೀಡಾಪಟುಗಳು ಹೊಂದಿಕೊಂಡು ಕ್ರೀಡಾ ಸಾಧನೆ ಮೆರೆಯಬೇಕೆಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷ್‌ನ ತಾಂತ್ರಿಕ ಅಧಿಕಾರಿ ಪಿ.ರೋಹಿಣಿ ಬೋಪಣ್ಣ ಅವರು ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಸಾಯಿ ಸಿಂಥೆಟಿಕ್ ಟಫ್ì ಮೈದಾನದಲ್ಲಿ ನಡೆದ ಪುಳ್ಳಂಗಡ ಚಿಣ್ಣಪ್ಪ ಸ್ಮರಣಾರ್ಥ ಮಹಿಳಾ ರೋಲಿಂಗ್ ಟ್ರೋಫಿ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ಕ್ರೀಡೆಯಾಗಿ ಹೊರ ಹೊಮ್ಮಿರುವ ಹಾಕಿ ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಆಸಕ್ತಿಯ ಕ್ರೀಡೆಯಾಗಿ ಮಾರ್ಪಟ್ಟಿದೆ. ಹಾಕಿ ಆಟದಲ್ಲಿ ತಾಂತ್ರಿಕವಾಗಿ ಕೆಲವು ಬದಲಾವಣೆಗಳಾಗಿದ್ದು, ಇದನ್ನು ಕ್ರೀಡಾಪಟುಗಳು ಗಮನಿಸಬೇಕು. ಬದಾವಣೆಗೆ ತಕ್ಕಂತೆ ತಮ್ಮ ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಂಡಾಗ ಗುರಿ ಸಾಧಿಸಲು ಸಾಧ್ಯವೆಂದು ರೋಹಿಣಿ ಬೋಪಣ್ಣ ತಿಳಿಸಿದರು.
ಸಮವಸ್ತ್ರ, ಕ್ರೀಡಾ ನಿಯಮ ಮತ್ತು ಶಿಸ್ತು ಪಾಲನೆ ಮಾಡುವುದು ಕ್ರೀಡಾಪಟುಗಳ ಆದ್ಯ ಕರ್ತವ್ಯವಾಗಿರಬೇಕೆಂದು ಕಿವಿಮಾತು ಹೇಳಿದರು. ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರ ಪುಳ್ಳಂಗಡ ಬೋಪಣ್ಣ, ಫೀ.ಮಾ. ಕಾರ್ಯಪ್ಪ ಕಾಲೇಜ್‌ನ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಗನ್ನಾಥ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಎಚ್.ಎನ್.ರಮೇಶ್, ವಿವಿಧ ಕಾಲೇಜ್‌ನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಮಾರು ಒಂಬತ್ತು ತಂಡಗಳು ಪಾಲ್ಗೊಂಡಿದ್ದ ಪಂದ್ಯಾವಳಿಯಲ್ಲಿ ಫೀ.ಮಾ.ಕಾರ್ಯಪ್ಪ ಕಾಲೇಜು ತಂಡ ಮೂಡಬಿದಿರೆಯ ಆಳ್ವಾಸ್ ತಂಡದ ಎದುರು 1-0 ಗೋಲಿನ ಅಂತರದಿಂದ ಗೆಲುವು ಸಾಧಿಸಿತು.ಆಳ್ವಾಸ್ ಕಾಲೇಜು ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳ ನಡುವೆ ಮೊದಲ ಪಂದ್ಯ ನಡೆಯಿತು.
ಕ್ರೀಡಾಸಕ್ತಿಯೂ ಇರಲಿ
ಫೀ.ಮಾ.ಕಾರ್ಯಪ್ಪ ಕಾಲೇಜ್‌ನ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು ಮಾತನಾಡಿ, ಪಠ್ಯಕ್ರಮದೊಂದಿಗೆ ಕ್ರೀಡಾಸಕ್ತಿಯನ್ನೂ ಬೆಳೆಸಿಕೊಳ್ಳಬೇಕು. ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹೆಚ್ಚು ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೊಡಗಿನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದು, ಇವರನ್ನು ಮಾದರಿಯನ್ನಾಗಿಸಿಕೊಂಡು ಇಂದಿನ ಯುವ ಸಮೂಹ ಕ್ರೀಡಾ ಸಾಧನೆಗೆ ಒತ್ತು ನೀಡಬೇಕು. ಕಾರ್ಯಪ್ಪ ಕಾಲೇಜ್‌ನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.