Advertisement

ಬಿಟಿಪಿಎಸ್‌ 3ನೇ ಘಟಕಕ್ಕೆ ಓಝೋನೈಝೇಷನ್‌ ಅಳವಡಿಕೆ

06:20 AM Dec 21, 2017 | Team Udayavani |

ಬಳ್ಳಾರಿ: ರಾಜ್ಯದ ವಿದ್ಯುತ್‌ ಬೇಡಿಕೆಗೆ ಒಟ್ಟು 1700 ಮೆಗಾ ವ್ಯಾಟ್‌ ವಿದ್ಯುತ್‌ ನೀಡುವ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್‌ ಉತ್ಪಾದನೆಗೆ ಅಗತ್ಯವಿರುವ ನೀರಿನ ಶುದ್ಧೀಕರಣ ಕಾರ್ಯಕ್ಕೆ ಅತ್ಯಾಧುನಿಕ ಓಝೋನೈಝೇಷನ್‌ ಘಟಕ ಅಳವಡಿಸಲಿದೆ.

Advertisement

ತಾಲೂಕಿನ ಕುಡತಿನಿ ಪಟ್ಟಣದ ಬಳಿ ಇರುವ ಬಿಟಿಪಿಎಸ್‌ನ 700 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ 3ನೇ ಘಟಕಕ್ಕೆ ಅತ್ಯಾಧುನಿಕ ಓಝೋನೈಝೇಷನ್‌ ಘಟಕ ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಆರು ತಿಂಗಳಲ್ಲಿ ಈ ಘಟಕ ಕಾರ್ಯಾರಂಭವಾಗುವ ನಿರೀಕ್ಷೆಯಿದೆ.

ಅಂದಾಜು 25 ಕೋಟಿ ರೂ.ವೆಚ್ಚದ ಈ ಘಟಕ, ಈ ಹಿಂದೆ ಇದ್ದ ಜಲಶುದ್ಧೀಕರಣ ಘಟಕಗಳಿಗಿಂತ ವಿಭಿನ್ನವಾಗಿದ್ದು, ಯಾವುದೇ ಹಾನಿಕಾರಕ ರಾಸಾಯನಿಕ ಬಳಸದೆ ವಿದ್ಯುತ್‌ ಉತ್ಪಾದನೆಗೆ ಅಗತ್ಯವಿರುವ ನೀರನ್ನು ಜೈವಿಕ ಮಾಲಿನ್ಯಕಾರಕಗಳಾದ ಪಾಚಿ, ಶಿಲೀಂದ್ರ ಸೇರಿದಂತೆ ಅನೇಕ ಏಕಾಣು ಜೀವಿಗಳಿಂದ ನೀರು ಶುದ್ಧೀಕರಿಸಲಿದೆ.

ಕಾರ್ಯಾಚರಣೆ ಹೇಗೆ?: ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ನೀರಿನ ಹಬೆಯಿಂದ ಬೃಹತ್‌ ಟಬೈìನ್‌ಗಳನ್ನು ಅತ್ಯಂತ ವೇಗದಿಂದ ತಿರುಗಿಸುವ ಮೂಲಕ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಹಬೆಯನ್ನು ಮತ್ತೆ ಶೀತಲೀಕರಣ ಪ್ರಕ್ರಿಯೆಗೆ ಒಳಪಡಿಸಿ ಆ ನೀರನ್ನು ಮತ್ತೆ ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತದೆ. ಹಬೆಯನ್ನು ಶೀತಲೀಕರಿಸಲು ಮತ್ತೂಂದು ಪೈಪ್‌ಲೈನ್‌ ವ್ಯವಸ್ಥೆಯಿಂದ ಬೇರೆ ನೀರನ್ನು ಹಾಯಿಸಿ ಹಬೆಯ ಶಾಖ ಇಳಿಸಿ ಹಬೆಯನ್ನು ನೀರಾಗಿ ಪರಿವರ್ತಿಸಲಾಗುತ್ತದೆ. ಈ ಹಂತದಲ್ಲಿ ಹಬೆಯನ್ನು ತಂಪು ಮಾಡುವ ನೀರು ಹಬೆಯ ಶಾಖ ಪಡೆಯುತ್ತದೆ. ಈ ನೀರನ್ನೂ ಪುನರ್‌ ಬಳಕೆ ಮಾಡಬಹುದಾಗಿದ್ದು, ವಾತಾವರಣದ ಸಂಪರ್ಕಕ್ಕೆ ಬಂದಾಗ ಅದರಲ್ಲಿ ಜಲ ಮಾಲಿನ್ಯಕಾರಕಗಳಾದ ಶಿಲೀಂದ್ರ, ಪಾಚಿ ಮುಂತಾದವುಗಳು ಸೇರಿಕೊಳ್ಳುತ್ತವೆ.

ಈ ಕಾರಣದಿಂದ ಈ ನೀರನ್ನೂ ಶುದ್ಧೀಕರಿಸಬೇಕಿದ್ದು, ಈ ಹಿಂದೆ ಈ ಕಾರ್ಯಕ್ಕೆ ಪರಿಸರ ಸ್ನೇಹಿ ಅಲ್ಲದ ಕ್ಲೋರಿನೇಷನ್‌ ವಿಧಾನ ಅಳವಡಿಸಲಾಗಿತ್ತು. ಕುಡಿವ ನೀರಿನ ಶುದ್ಧೀಕರಣ ಘಟಕಗಳಲ್ಲಿ ಕ್ಲೋರೀನ್‌ ಡೈ ಆಕ್ಸೆ„ಡ್‌ ಈ ಕಾರ್ಯಕ್ಕೆ ಬಳಸುವಂತೆ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲೂ ಈ ಪದ್ಧತಿ ಅಳವಡಿಸಲಾಗುತ್ತಿತ್ತು. ಇದರಿಂದ ಪರಿಸರ ಹಾನಿಯಾಗುವ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅತ್ಯಾಧುನಿಕ ಓಜೋನೈಝೇಷನ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

Advertisement

ಓಝೋನೈಝೇಷನ್‌ ಹೇಗೆ?: ವಾತಾವರಣದಲ್ಲಿರುವ ಆಮ್ಲಜನಕಕ್ಕೆ ಅದರದ್ದೇ ಆದ ಏಕಾಣು (ಒ) ಸೇರಿಸಿದರೆ ಓಝೋನ್‌ (03)ಆಗಿ ಮಾರ್ಪಡುತ್ತದೆ. ಇದು ಜೀವಿಗಳ ಉಸಿರಾಟಕ್ಕೆ ಬರುವುದಿಲ್ಲ. ಆದ್ದರಿಂದ ಜಲಮಾಲಿನ್ಯಕಾರಕಗಳು ಸತ್ತು ಹೋಗುತ್ತವೆ. ಈ ಕಾರ್ಯಕ್ಕೆ ವಾತಾವರಣದ ಗಾಳಿ ಎಳೆಯಲು ಬೃಹತ್‌ ಕಾಂಪ್ರಸ್ಸರ್‌ ಅಳವಡಿಸಲಾಗಿದೆ. ಈ ಘಟಕದ ಮುಂದಿನ ಘಟ್ಟದಲ್ಲಿ ಆಮ್ಲಜನಕ ಪ್ರತ್ಯೇಕಿಸಲಾಗುತ್ತದೆ. ನಂತರ ಆಮ್ಲಜನಕ  ವಿಭಜಿಸಿ, ಏಕಾಣುವನ್ನು ನೈಸರ್ಗಿಕ ಆಮ್ಲಜನಕಕ್ಕೆ ಸೇರ್ಪಡೆ ಮಾಡಿ ಓಝೋನ್‌ ಉತ್ಪಾದಿಸಲಾಗುತ್ತದೆ. ಇದನ್ನು ನೀರಿನಲ್ಲಿ ಹರಿಸಿ ಜಲ ಕಲ್ಮಶಗಳನ್ನು ನಾಶಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಸಂಪೂರ್ಣ ಕಾರ್ಯಕ್ಷಮತೆ ಸಾಧ್ಯವಾಗಲಿದೆ.

ಲಾಭಗಳೇನು?:  ಈ ಪ್ರಕ್ರಿಯೆಯಿಂದ ನೀರಿನ ಪುನರ್‌ಬಳಕೆ ಸಾಧ್ಯ. ಹಾನಿಕಾರಕ ರಾಸಾಯನಿಕಗಳನ್ನು ದೂರವಿಡಬಹುದು. ಇದು ಪರಿಸರ ಸ್ನೇಹಿ ಹಾಗೂ ಜನಸ್ನೇಹಿ. ವೆಚ್ಚವೂ ಕಡಿಮೆ.

ಇತರೆ ಉದ್ಯಮಗಳಿಗೆ ಮಾದರಿ
ಮಧ್ಯಪ್ರದೇಶದ ಭೂಪಾಲ್‌ ನಗರದಲ್ಲಿ 1984ರಲ್ಲಿ ಸಂಭವಿಸಿದ ಗ್ಯಾಸ್‌ ದುರಂತದಿಂದ ಅನೇಕರು ಮೃತಪಟ್ಟರು. ನಂತರ ಸರ್ಕಾರಗಳು ಕಾರ್ಖಾನೆಗಳಲ್ಲಿ ರಾಸಾಯನಿಕ ಬಳಸುವ ವಿಧಾನದಲ್ಲಿ ಸಾಕಷ್ಟು ನಿಯಂತ್ರಣ ಹೇರಿವೆ. ಆದರೂ ಈ ರಾಸಾಯನಿಕಗಳ ಬಳಕೆಯಲ್ಲಿ ನಿಯಂತ್ರಣಗಳು ಆದರೂ, ಬಹುತೇಕ ಬೃಹತ್‌ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಇಂದಿಗೂ ಹಾನಿಕಾರಕ ರಾಸಾಯನಿಕಗಳನ್ನು ಬಳಸುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬಿಟಿಪಿಎಸ್‌ ಅತ್ಯಾಧುನಿಕ, ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವುದು ಇತರೆ ಉದ್ಯಮಗಳಿಗೆ ಮಾದರಿಯಾಗಿದೆ.

ಬಿಟಿಪಿಎಸ್‌ನ 700 ಮೆವ್ಯಾ ವಿದ್ಯುತ್‌ ಉತ್ಪಾದಿಸುವ 3ನೇ ಘಟಕಕ್ಕೆ ಅತ್ಯಾಧುನಿಕ ಓಝೋನೈಝೇಷನ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಕ್ರಮೇಣ ಈ ತಂತ್ರಜ್ಞಾನವನ್ನು ತಲಾ 500 ಮೆವ್ಯಾ ವಿದ್ಯುತ್‌ ಉತ್ಪಾದಿಸುವ ಉಳಿದ ಎರಡು ಘಟಕಗಳಿಗೂ ಅಳವಡಿಸಿಕೊಳ್ಳುವ ಚಿಂತನೆ ಇದೆ.
– ಎಸ್‌.ಮೃತ್ಯುಂಜಯ, ಇಡಿ, ಬಿಟಿಪಿಎಸ್‌.

-ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next