ಮುಂಬೈ: ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ತನ್ನೆಲ್ಲ ಜಾಹೀರಾತುಗಳಿಂದ ತಾತ್ಕಾಲಿಕವಾಗಿ ಕೈಬಿಡಲು ಅದಾನಿ ವಿಲ್ಮಾರ್ ಕಂಪನಿ ತೀರ್ಮಾನಿಸಿದೆ.
ಫಾರ್ಚೂನ್ ರೈಸ್ ಬ್ರಾನ್ ಕುಕಿಂಗ್ ಆಯಿಲ್ ಜಾಹೀರಾತುಗಳಿಗೆ ಗಂಗೂಲಿ ರಾಯಭಾರಿ ರೂಪದರ್ಶಿ ಆಗಿದ್ದರು. “ಫೂರ್ಚೂನ್ ಅಡುಗೆಎಣ್ಣೆ ಆರೋಗ್ಯದಾಯಕ, ಹೃದಯಕ್ಕೂ ಒಳ್ಳೆಯದು’ ಎಂದು ಹೇಳುತ್ತಲೇ ಬಂದಿದ್ದ ಸಂಸ್ಥೆಗೆ ಈಗ, ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಗಂಗೂಲಿ ಕಾರಣದಿಂದಾಗಿ ಭಾರೀ ಇರುಸುಮುರುಸಾಗಿದೆ.
ಟ್ರೋಲ್ ದಾಳಿ: ಕರಿದ ಪದಾರ್ಥಗಳನ್ನು ಸೇವಿಸಲು ಹಿಂದೇಟು ಹಾಕುತ್ತಿರುವ ನಡುವಯಸ್ಸಿಗನಿಗೆ “40 ಆದ್ರೇನಂತೆ, ಜೀವಿಸೋದನ್ನು ನಿಲ್ಸೊದಿಕ್ಕಾಗುತ್ತಾ?’ ಎಂದು ಗಂಗೂಲಿ, ಜಾಹೀರಾತಿನಲ್ಲಿ ಹೇಳಿದ ಸಂಭಾಷಣೆ ಟ್ವಿಟರಿನಲ್ಲಿ ಭಾರೀ ತಮಾಷೆಗೀಡಾಗಿದೆ. ಇದರಿಂದಾಗಿ ಫಾರ್ಚೂನ್ ಅಡುಗೆ ಎಣ್ಣೆಗೆ ಬೇಡಿಕೆ ಕುಸಿತ ಮತ್ತು ಬ್ರ್ಯಾಂಡ್‌ಗೆ ಹೊಡೆತ ಬಿದ್ದ ಪರಿಣಾಮ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ:ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್
“ನಮ್ಮ ಎಲ್ಲ ಪ್ಲಾಟ್‌ಫಾರಂಗಳಿಂದ ಗಂಗೂಲಿ ಅಭಿನಯಿಸಿದ್ದ ಜಾಹೀರಾತುಗಳನ್ನು ಕೈಬಿಡಲಾಗಿದೆ’ ಎಂದು ಸಂಸ್ಥೆಯ ಬ್ರ್ಯಾಂಡ್ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಜಾಹೀರಾತಿನಿಂದಾದ ನಷ್ಟಕ್ಕೆ ಪರಿಹಾರ ಹುಡುಕಲು ಸಂಸ್ಥೆ ಯೋಜಿಸಿದೆ. ಫಾರ್ಚೂನ್ ಅಡುಗೆ ಎಣ್ಣೆ ಅಲ್ಲದೆ, ಅದಾನಿ ವಿಲ್ಮಾರ್ ಸಂಸ್ಥೆಯ ಸೋಯಾ ಚುಂಕ್ಸ್‌ಗೂ ಗಂಗೂಲಿ ರಾಯಭಾರಿಯಾಗಿದ್ದರು.
ಏತನ್ಮಧ್ಯೆ, ಗಂಗೂಲಿ ಅವರ ಆರೋಗ್ಯ ಸುಧಾರಿಸುತ್ತಿದ್ದು, ಬುಧವಾರದಂದು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.