ಪಡುಬಿದ್ರಿ: ಉಡುಪಿ ಜಿಲ್ಲೆಯ ಅದಾನಿ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಬ್ಬಿಣದ ದೊಡ್ಡ ಬೀಮ್ ಕುಸಿದು ರಾಜಸ್ಥಾನ ಮೂಲದ ಕಾರ್ಮಿಕ ಮುಲಾರಾಮ್ (21)ಸಾವನ್ನಪ್ಪಿದ್ದಾನೆ.
ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅದಾನಿ ಸ್ಥಾವರದೊಳಗೆ ಎಫ್‌ಜಿಡಿ ಸ್ಥಾವರದ ಕಾಮಗಾರಿ ಚಾಲ್ತಿಯಲ್ಲಿತ್ತು. ಬಹುತೇಕ 75% ಕಾಮಗಾರಿ ಮುಕ್ತಾಯಗೊಳ್ಳುತ್ತಾ ಬಂದಿದೆ. ಅದಾನಿ ಸಂಸ್ಥೆಯು `ಪವರ್ ಮೆಕ್’ ಕಂಪನಿಗೆ ಈ ಕುರಿತಾದ ಗುತ್ತಿಗೆಯನ್ನು ನೀಡಿದೆ. ಆ ಕಂಪನಿಯು ಕೇರಳದ `ಸುನ್ನಿ ಮತ್ತು ವೆಲ್ ಟೆಕ್’ ಎಂಬ ಸಂಸ್ಥೆಯನ್ನು ಪರ್ಯಾಯವಾಗಿ ಈ ಕಾರ್ಯಕ್ಕಾಗಿ ನೇಮಕ ಮಾಡಿತ್ತು.
ಇಂದು ಮಧ್ಯಾಹ್ನದ ವೇಳೆ ಕ್ರೇನ್ ಮೂಲಕ ರೋಪ್ ಕಟ್ಟಿಕೊಂಡು ಸುರಕ್ಷತಾ ಕ್ರಮವಾಗಿ 5 ಜನ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಕ್ರೇನ್‌ನ ರೋಪ್ ತುಂಡಾಗಿ ಕಟ್ಟಡದ ಬೀಮ್ ಒಂದು ನೆಲಕ್ಕುರುಳಿದೆ. ನಾಲ್ವರು ರೋಪ್ ಸಮೇತ ನೆಲಕ್ಕುರುಳಿದ್ದರು. ಇವರಲ್ಲಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಮುಲಾರಾಮ್ ಕೊನೆಯುಸಿರೆಳೆದಿದ್ದಾನೆ.
ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.