ವಾಡಿ: ಭಾರತದ ದಿಗ್ಗಜ ಉದ್ಯಮಿ ಅದಾನಿ ಕಳೆದ 85 ವರ್ಷಗಳಿಂದ ಭಾರತದಲ್ಲಿ ವಿಜೃಂಭಿಸುತ್ತಿರುವ ವಿಶ್ವಪ್ರಖ್ಯಾತ ಅಸೋಸಿಯೇಟೆಡ್ ಸಿಮೆಂಟ್ ಕಂಪನಿ (ಎಸಿಸಿ)ಯ ವಾಡಿ ಸೇರಿದಂತೆ ಒಟ್ಟು 14 ಘಟಕಗಳನ್ನು ಖರೀದಿಸಿದ್ದಾರೆ.
ಎಸಿಸಿ ಮತ್ತು ಅಂಬೂಜಾ ಸಿಮೆಂಟ್ಸ್ ಕಂಪನಿಯಲ್ಲಿ ಸ್ವಿಡ್ಜ್ರ್ಲೆಂಡ್ ಮೂಲದ ಹೋಲ್‌ಸಿಮ್ಸ್ ಕಂಪನಿ ಹೊಂದಿದ್ದ ಪೂರ್ಣ ಪಾಲನ್ನು ಅದಾನಿ ಸಮೂಹ 10.5 ಶತಕೋಟಿ ಡಾಲರ್ (ಅಂದಾಜು 78000 ಕೋಟಿ ರೂ.)ಗೆ ಖರೀದಿಸಿದೆ.
ಇದರ ವಾರ್ಷಿಕ ಆದಾಯ 10,000 ಕೋಟಿ ರೂ. ಎಂಬುದು ಗಮನಾರ್ಹ ವರ್ಷಕ್ಕೆ 4.60 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಪಟ್ಟಣದ ಎಸಿಸಿ ಕಾರ್ಖಾನೆಯಲ್ಲಿ ಪ್ರಸಕ್ತವಾಗಿ 427 ಕಾಯಂ ಕಾರ್ಮಿಕರು, 350 ದಿನಗೂಲಿ ಕಾರ್ಮಿಕರು, 1700 ಮಂದಿ ಹೊರ ಗುತ್ತಿಗೆ ಕಾರ್ಮಿಕರು ಹಾಗೂ 500 ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 2977 ಜನ ಶ್ರಮಿಕರಿದ್ದಾರೆ. ಕಾಗಿಣಾ ಮತ್ತು ಭೀಮಾ ನದಿಗಳ ಅಪಾರ ಪ್ರಮಾಣದ ಜಲಮೂಲವನ್ನು ಅವಲಂಬಿಸಿ ಉದ್ಯಮ ಸಾಗುತ್ತಿದ್ದು, ಗಣಿಗಾರಿಕೆ ನಡೆಸಲು ಈಗಾಗಲೇ ಸಾವಿರಾರು ಎಕರೆ ಜಮೀನು ಖರೀದಿಯಾಗಿದೆ.
ಮುಂದಿನ ನೂರು ವರ್ಷಕ್ಕಾಗುವಷ್ಟು ಸುಣ್ಣದ ಕಲ್ಲು ಶೇಖರಣೆಯಿದೆ. 2022ನೇ ಸಾಲಿನ ಮೇ 15ರಿಂದ ವಾಡಿ ಉತ್ಪಾದನಾ ಘಟಕ ಸೇರಿದಂತೆ ದೇಶದ ಇತರ ಎಸಿಸಿ ಕಂಪನಿಗಳು ಹೆಸರಾಂತ ಉದ್ಯಮಿ ಬಂಡವಾಳಶಾಹಿ ಅದಾನಿ ತೆಕ್ಕೆಗೆ ಸೇರಿಕೊಂಡಿವೆ.
ಆರು ದಶಕಗಳಿಂದ ಸಿಮೆಂಟ್ ಉತ್ಪಾದನೆ ಜತೆಗೆ ಕಾರ್ಮಿಕರಿಗೆ ಉತ್ತಮ ಸೇವೆ ನೀಡಿದ ಎಸಿಸಿ ಆಡಳಿತ ಈಗ ಅದಾನಿ ಹಿಡಿತಕ್ಕೆ ಹೋಗಿದೆ. ಕಾರ್ಮಿಕರಿಗೆ ದೇಶದ ಯಾವುದೇ ಕಂಪನಿ ನೀಡದಷ್ಟು ಸೌಲಭ್ಯಗಳನ್ನು ಎಸಿಸಿ ನೀಡಿತ್ತು. ಈಗ ಕಂಪನಿಯನ್ನು ಯಾರೇ ಖರೀದಿಸಿದರೂ ಕಾರ್ಮಿಕರಿಗೆ ಮುಂದೆಯೂ ಉತ್ತಮ ಸೌಲಭ್ಯ ಒದಗಿಸಬೇಕು. ಸ್ಥಳೀಯ ಯುವಕರಿಗೆ ಹೆಚ್ಚು ಉದ್ಯೋಗಾವಕಾಶ ಒದಗಿಸಲಿ. ವಾಡಿ ನಗರ ಸೇರಿದಂತೆ ಸುತ್ತಲ ಗ್ರಾಮಗಳ ಅಭಿವೃದ್ಧಿಗೂ ಜನಪರ ಯೋಜನೆ ರೂಪಿಸಲಿ.
–ವಿಶಾಲ ನಂದೂರಕರ, ಖಜಾಂಚಿ, ಎಸಿಸಿ ಕಾರ್ಮಿಕ ಸಂಘ (ಎಐಟಿಯುಸಿ)