ಹೊಸದಿಲ್ಲಿ: ಷೇರುಪೇಟೆಯಲ್ಲಿ ಅದಾನಿ ಗ್ರೂಪ್ ವಂಚನೆ ಎಸಗಿದೆ ಎಂಬ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ನೀಡಿದ ವರದಿಯ ಸತ್ಯಾಸತ್ಯತೆ ಪರಿಶೀಲಿಸಲು ಆರು ಸದಸ್ಯರ ಸಮಿತಿ ರಚಿಸಲಾಗಿದೆ. ಅದರ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರ ವಹಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠ ಗುರುವಾರ ಪ್ರಕಟಿಸಿದೆ. 2 ತಿಂಗಳ ಅವಧಿಯಲ್ಲಿ ತನಿಖೆ ನಡೆಸಿ, ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಸಮಿತಿಯಲ್ಲಿ ಸೆಬಿಯ ಮಾಜಿ ಅಧ್ಯಕ್ಷ ಒ.ಪಿ. ಭಟ್, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾ| ಜೆ.ಪಿ. ದೇವಧರ್, ಕನ್ನಡಿಗರಾಗಿರುವ ಬ್ಯಾಂಕರ್ ಕೆ.ವಿ. ಕಾಮತ್, ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ, ಷೇರು ಪೇಟೆಯ ವಿಚಾರಗಳ ಪರಿಣತ ಮತ್ತು ನ್ಯಾಯವಾದಿ ಸೋಮಶೇಖರನ್ ಸುಂದರೇಶನ್ ಇರಲಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಇದಲ್ಲದೆ, ಎರಡು ತಿಂಗಳ ಅವಧಿಯಲ್ಲಿ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸದ್ಯ ನಡೆಸುತ್ತಿರುವ ತನಿಖೆಯನ್ನು ಪೂರ್ಣಗೊಳಿಸುವಂತೆಯೂ ಸೂಚನೆ ನೀಡಿದೆ.
ನಿವೃತ್ತ ನ್ಯಾಯಮೂರ್ತಿ ಸಪ್ರ ನೇತೃತ್ವದ ಸಮಿತಿಗೆ ಕೇಂದ್ರ ಸರಕಾರ, ಕೇಂದ್ರ ವಿತ್ತ ಸಚಿವಾಲಯ, ಸೆಬಿ ಸೇರಿದಂತೆ ಎಲ್ಲ ಕಾನೂನಾತ್ಮಕ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆಯೂ ನ್ಯಾಯಪೀಠ ಸೂಚಿಸಿದೆ. 2 ತಿಂಗಳ ಒಳಗಾಗಿ ಹಿಂಡನ್‌ಬರ್ಗ್ ವರದಿಯಲ್ಲಿ ಆರೋಪ ಮಾಡಿರುವಂತೆ ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವವರಿಗೆ ನಷ್ಟವಾಗಿದೆಯೇ, ಅದರಿಂದಾಗಿ ಷೇರುಪೇಟೆ ವಹಿವಾಟಿಗೆ ಯಾವ ರೀತಿ ಧಕ್ಕೆ ಉಂಟಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಪೀಠ ಹೇಳಿದೆ. ದೇಶದ ಹೂಡಿಕೆ ದಾರರ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಮಿತಿ ರಚನೆ ಪ್ರಸ್ತಾವವನ್ನು ಸುಪ್ರೀಂಕೋರ್ಟ್ ಸಮರ್ಥಿಸಿಕೊಂಡಿದೆ. ಷೇರು ಪೇಟೆಯಲ್ಲಿ ಹೂಡಿಕೆ ಮಾಡುವವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಾಲಿ ಇರುವ ನಿಯಮಗಳನ್ನು ಬಲಪಡಿಸುವುದು ಸಮಿತಿಯ ಆದ್ಯತೆಯಾಗಲಿದೆ. ಅದಕ್ಕೆ ಬೇಕಾ ಗಿರುವ ಮಾಹಿತಿಯನ್ನು ಸೆಬಿ ನೀಡಬೇಕು ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದಲ್ಲದೆ, ತನಿಖೆಯ ಹಂತಗಳಲ್ಲಿ ಅಗತ್ಯ ಬಿದ್ದರೆ ಆಯಾ ಕ್ಷೇತ್ರದ ವಿಷಯ ತಜ್ಞರ ಸಲಹೆ ಪಡೆಯುವ ನಿಟ್ಟಿನಲ್ಲಿ ಕೂಡ ಸಮಿತಿಗೆ ನೆರವಾಗಬೇಕು ಎಂದೂ ಆದೇಶ ನೀಡಿದೆ.