Advertisement

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

09:53 AM Nov 25, 2024 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರ, ಝಾರ್ಖಂಡ್‌ ವಿಧಾನಸಭೆ ಚುನಾವಣೆ ಫ‌ಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸೋಮವಾರ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.

Advertisement

ಡಿ.20ರ ವರೆಗೂ ಅಧಿವೇಶನ ನಡೆಯಲಿದ್ದು, ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಇದೇ ಅವಧಿಯಲ್ಲಿ ಮಂಡಿಸಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ. ಇನ್ನೊಂದೆಡೆ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ದೋಷಾರೋಪ ನಿಗದಿ, ಮಣಿಪುರ ಗಲಭೆ ಮುಂತಾದ ವಿಚಾರಗಳನ್ನಿಟ್ಟುಕೊಂಡು ಸರಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ “ಐಎನ್‌ಡಿಐಎ’ ಒಕ್ಕೂಟ ಸಜ್ಜಾಗಿದೆ.

ಸರ್ವಪಕ್ಷ ಸಭೆ: ಸುಗಮ ಕಲಾಪದ ಉದ್ದೇಶದಿಂದ ಕೇಂದ್ರ ಸರಕಾರವು ರವಿವಾರ ಸರ್ವಪಕ್ಷಗಳ ಸಭೆ ನಡೆಸಿದೆ. ಅಧಿವೇಶನದಲ್ಲಿ ಅದಾನಿ ಗ್ರೂಪ್‌ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಗಳ ಕುರಿತು ಚರ್ಚೆಯಾಗಬೇಕು ಎಂದು ವಿಪಕ್ಷಗಳ ನಾಯಕರು ಈ ವೇಳೆ ಒತ್ತಾಯಿಸಿದ್ದಾರೆ. ಜತೆಗೆ ಮಣಿಪುರ ಗಲಭೆ, ರೈಲು ಅಪಘಾತ, ವಾಯುಮಾಲಿನ್ಯ ಬಗ್ಗೆಯೂ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಸಭೆಯ ಬಳಿಕ ಈ ಬಗ್ಗೆ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ಸರಕಾರವು ಯಾವುದೇ ವಿಷಯದ ಚರ್ಚೆಗೂ ಸಿದ್ಧವಿದೆ. ಆದರೆ ಯಾವ ವಿಷಯದ ಬಗ್ಗೆ ಚರ್ಚೆಯಾಗಬೇಕು ಎಂಬುದನ್ನು ಎರಡೂ ಸದನಗಳ ಕಲಾಪ ಸಲಹಾ ಸಮಿತಿಯು ನಿರ್ಧರಿಸಲಿದೆ ಎಂದಿದ್ದಾರೆ.

ಒಂದು ಚುನಾವಣೆ ಮಸೂದೆ ಮಂಡನೆಗೂ ಸಿದ್ಧತೆ
ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಯಲ್ಲಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸಿ, ಅಂಗೀಕಾರ ಪಡೆಯಲು ಸರಕಾರ ಚಿಂತನೆ ನಡೆಸಿದೆ. ಜತೆಗೆ, ಮತ್ತೂಂದು ವಿವಾದಿತ ಮಸೂದೆಯಾದ “ಒಂದು ದೇಶ, ಒಂದು ಚುನಾವಣೆ’ಯನ್ನೂ ಇದೇ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.

ನಾಳೆ ಸಂವಿಧಾನ ದಿನ: ಹಳೇ ಸಂಸತ್‌ ಭವನದಲ್ಲಿ ವಿಶೇಷ ಕಾರ್ಯಕ್ರಮ
ದೇಶವು ಸಂವಿಧಾನವನ್ನು ಸ್ವೀಕರಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನ.26ರ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದರಂತೆ, ಹಳೆಯ ಸಂಸತ್‌ ಭವನದ ಐತಿಹಾಸಿಕ ಸಂವಿಧಾನದ ಸದನದ ಸೆಂಟ್ರಲ್‌ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲೇ 1949ರ ನವೆಂಬರ್‌ 26ರಂದು ಸಂವಿಧಾನಕ್ಕೆ ಅಂಗೀಕಾರ ದೊರೆತಿತ್ತು.

Advertisement

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next