Advertisement

ಇಂದು ಅದಮಾರು ಶ್ರೀ ಕಾಲ್ನಡಿಗೆಯಲ್ಲಿ ಪುರಪ್ರವೇಶ

11:36 PM Jan 07, 2020 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜಾ ದೀಕ್ಷಿತರಾಗಲಿರುವ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜ. 8ರಂದು ಪುರಪ್ರವೇಶ ನಡೆಸಲಿದ್ದಾರೆ.

Advertisement

ಇದುವರೆಗೆ ಅಲಂಕೃತ ವಾಹನದಲ್ಲಿ ಬರುತ್ತಿದ್ದ ಭಾವೀ ಪರ್ಯಾಯ ಮಠಾಧೀಶರು ಈ ಬಾರಿ ಜೋಡುಕಟ್ಟೆಯಿಂದ ರಥಬೀದಿಯ ವರೆಗೆ ಕಾಲ್ನಡಿಗೆಯಲ್ಲೇ ಆಗಮಿಸುವರು. ಅಪರಾಹ್ನ 2.30ಕ್ಕೆ ಪುರಪ್ರವೇಶ ಮಾಡಲಿರುವ ಶ್ರೀಪಾದರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ಉಡುಗೆಯಲ್ಲಿ ಮತ್ತು ವಿವಿಧ ಜಾನಪದೀಯ ತಂಡಗಳಾಗಿ ಆಗಮಿಸಲಿದ್ದಾರೆ. ವಿದ್ವಾಂಸರು ಶ್ವೇತವಸ್ತ್ರಧಾರಿಗಳಾಗಿ ಆಗಮಿಸುವರು. ಒಂಟೆ, ಕುದುರೆಗಳು ಮೆರವಣಿಗೆಯಲ್ಲಿರುತ್ತವೆ. ಭಜನ ತಂಡದವರು ಭಜನೆಗಳನ್ನು ಹಾಡುತ್ತ ಮೆರವಣಿಗೆಯಲ್ಲಿ ಸಾಗುವರು.

ಸ್ವಾಮೀಜಿಯವರು ಸಂಜೆ ಶ್ರೀ ಚಂದ್ರೇಶ್ವರ, ಶ್ರೀ ಅನಂತೇಶ್ವರನ ದರ್ಶನವಾದ ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನವನ್ನು ಪಡೆಯುವರು. ಬಳಿಕ 5.55ಕ್ಕೆ ಅದಮಾರು ಮಠವನ್ನು ಪ್ರವೇಶಿಸುವರು. ರಾತ್ರಿ ಉತ್ಸವವಾದ ಬಳಿಕ ರಥಬೀದಿಯ ವೇದಿಕೆಯಲ್ಲಿ ನಿರ್ಗಮನ ಪರ್ಯಾಯ ಪೀಠಾಧೀಶ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರ ಅಧ್ಯಕ್ಷತೆಯಲ್ಲಿ ಪೌರ ಸಮ್ಮಾನ, ಸಾರ್ವಜನಿಕ ಗೌರವಾರ್ಪಣ ಕಾರ್ಯಕ್ರಮ ಜರಗಲಿದೆ. ಸಚಿವರು, ಜನಪ್ರತಿನಿಧಿಗಳು ಭಾಗವಹಿಸುವರು.

ಅದಮಾರು ಮಠ ನವೀಕರಿಸಿದ ಕಾರಣ ಮತ್ತು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಸಂಚಾರ ಮುಗಿಸಿ ಬುಧವಾರ ಪಟ್ಟದ ದೇವರ ಜತೆಗೆ ಪ್ರವೇಶಿಸುವ ಕಾರಣ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವಾಸ್ತು ರಾಕ್ಷೊಘ್ನ ಹೋಮ, ಹವನ ಗಳನ್ನು ವೈದಿಕರು ಮಂಗಳವಾರ ರಾತ್ರಿ ನೆರವೇರಿಸಿದರು.

ಜ. 17ರ ರಾತ್ರಿ ಭೋಜನ
ಜ. 18ರ ಪ್ರಾತಃಕಾಲ ಮೇನೆಯಲ್ಲಿ ಆಗಮಿಸುವ ಸ್ವಾಮೀಜಿಯವರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಈ ಬಾರಿ ಜ. 17ರ ರಾತ್ರಿ ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆಯನ್ನು ಪಾರ್ಕಿಂಗ್‌ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಜ. 18ರಂದು ಪರ್ಯಾಯೋತ್ಸವದ ಭೋಜನದಲ್ಲಿ ಸಾವಿರಾರು ಭಕ್ತರು ಭಾಗವಹಿಸುವರು. ಜ. 17ರ ಮಧ್ಯಾಹ್ನ ಪ್ರಸಕ್ತ ಪರ್ಯಾಯ ಪಲಿಮಾರು ಮಠದಿಂದ ವಿಶೇಷ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜ. 17ರ ರಾತ್ರಿ ಭೋಜನದ ವ್ಯವಸ್ಥೆ ಇದ್ದಿರಲಿಲ್ಲ. 2016ರಲ್ಲಿ ಪೇಜಾವರ ಶ್ರೀಗಳು ಜ. 17ರ ರಾತ್ರಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next