Advertisement

ಅದಮಾರು ಪರ್ಯಾಯ: ಪ್ಲಾಸ್ಟಿಕ್‌ಮುಕ್ತ ಅಭಿಯಾನ

10:59 PM Dec 09, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜನವರಿಯಲ್ಲಿ ನಡೆಯಲಿರುವ ಅದಮಾರು ಮಠದ ಪರ್ಯಾಯೋತ್ಸವದಲ್ಲಿ ಪರಿಸರ ಜಾಗೃತಿಗೆ ಗಮನ ಹರಿಸಲಾಗುತ್ತಿದ್ದು, ಪ್ಲಾಸ್ಟಿಕ್‌ ನಿರ್ಮೂಲನಕ್ಕೆ ಸಾರ್ವಜನಿಕ ಜಾಗೃತಿ ಮೂಡಿಸಲಾಗುವುದು ಎಂದು ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಪರ್ಯಾಯೋತ್ಸವ ಸಂದರ್ಭ ಪ್ಲಾಸ್ಟಿಕ್‌ ಅಥವಾ ಪ್ಲಾಸ್ಟಿಕ್‌ಮಿಶ್ರಿತ ಬ್ಯಾನರ್‌, ಫ್ಲೆಕ್ಸ್‌ ಹಾಕದೆ ಇರಲು ನಿರ್ಧರಿಸಲಾಗಿದೆ. ವಸ್ತ್ರದ ಬ್ಯಾನರ್‌ಗಳನ್ನೇ ಉಪಯೋಗಿಸಲಾಗುತ್ತಿದೆ. ಪೋಸ್ಟರ್‌ಗಳನ್ನು ಕಾಗದದಿಂದ ತಯಾರಿಸಲಾಗುವುದು. ಪ್ಲಾಸ್ಟಿಕ್‌ನಿಂದ ತಯಾರಾಗುವ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲು ಪ್ರಯತ್ನಿಸಲಾಗುವುದು. ಈ ಮೂಲಕ “ಸ್ವಚ್ಛ ಉಡುಪಿ’ ಸಂದೇಶ ಸಾಕಾರಗೊಳ್ಳಬೇಕು ಎಂದು ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.

ಸ್ವಾಮೀಜಿಯವರ ಪುರಪ್ರವೇಶ ಮತ್ತು ಪರ್ಯಾಯೋತ್ಸವದಲ್ಲಿ ಮೆರವಣಿಗೆ ಬರುವ ಇಕ್ಕೆಲಗಳನ್ನು ತಳಿರು ತೋರಣ, ದೀಪ, ರಂಗವಲ್ಲಿಗಳಿಂದ ಸಿಂಗರಿಸಬೇಕು. ಮೆರವಣಿಗೆ ಯಲ್ಲಿ ಕುಣಿತದ ಭಜನೆಗೆ ಅವಕಾಶವಿದ್ದು, ಆಸಕ್ತ ತಂಡಗಳು ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಎಂದರು.

ಪರ್ಯಾಯದ ಟ್ಯಾಬ್ಲೊ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಾಗತ ಕಮಾನು ಗಳನ್ನು ನೀಡಬಯಸುವವರು, ಆಸಕ್ತ ಸ್ವಯಂಸೇವಕರು, ಸಂಘ-ಸಂಸ್ಥೆಗಳು ಶ್ರೀಕೃಷ್ಣ ಸೇವಾ ಬಳಗದ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಯಶಪಾಲ್‌ ಸುವರ್ಣ ಅವರು ವಿನಂತಿಸಿದರು.
ಜ. 17ರ ರಾತ್ರಿ ಪರ್ಯಾಯೋತ್ಸವದ ಸಂದರ್ಭ ನಗರದ ವಿವಿಧೆಡೆಗಳಲ್ಲಿ ಆಯೋಜಿಸುವ ಮನೋರಂಜನ ಕಾರ್ಯಕ್ರಮಗಳು ಧಾರ್ಮಿಕ ಮತ್ತು ಭಾರತೀಯ ಸಂಸ್ಕೃತಿಯ ಚೌಕಟ್ಟಿನೊಳಗೆ ಇರಲಿ ಎಂದು ಆಶಿಸಿದರು.

ಯು.ಕೆ. ರಾಘವೇಂದ್ರ ರಾವ್‌, ವೈ.ಎನ್‌. ರಾಮಚಂದ್ರ ರಾವ್‌, ಅನಂತ ನಾಯಕ್‌, ಸಂತೋಷ್‌, ಶ್ರೀಪತಿ, ಪ್ರದೀಪ್‌ ರಾವ್‌, ರಾಮಚಂದ್ರ ಆಚಾರ್ಯ, ಅದಮಾರು ಮಠದ ವ್ಯವಸ್ಥಾಪಕ ರಾಘವೇಂದ್ರ ರಾವ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

ಜ. 8: ಅದಮಾರು ಸ್ವಾಮೀಜಿಗಳ ಪುರಪ್ರವೇಶ
ಅದಮಾರು ಸ್ವಾಮೀಜಿಯವರ ಪುರಪ್ರವೇಶದ ಮೆರವಣಿಗೆ ಜ. 8ರ ಅಪರಾಹ್ನ 3ಕ್ಕೆ ಜೋಡುಕಟ್ಟೆಯಿಂದ ಆರಂಭವಾಗಲಿದೆ. ಸಂಜೆ 5.45ಕ್ಕೆ ಅದಮಾರು ಮಠವನ್ನು ಪ್ರವೇಶಿಸುವರು. ಮೆರವಣಿಗೆ ತೆಂಕಪೇಟೆ ಮಾರ್ಗವಾಗಿ ಬರಲಿದೆ.

ಪ್ರತಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸ್ವೀಕಾರ
ಹೊರೆಕಾಣಿಕೆಯನ್ನು ಏಕಕಾಲದಲ್ಲಿ ಸ್ವೀಕರಿಸುವ ಬದಲು ಪ್ರತಿ 15 ದಿನಗಳಿಗೊಮ್ಮೆ ಸ್ವೀಕರಿಸಲು ನಿರ್ಧರಿಸಲಾಗಿದ್ದು ಜ. 15ರಂದು ಅದಮಾರು, ಮಲ್ಪೆ, ಕೊಡವೂರು, ಮಟ್ಟು ಗ್ರಾಮದ ಗ್ರಾಮಸ್ಥರಿಂದ ಮೊದಲ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಪ್ರತಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಮರ್ಪಣೆಯಾದರೆ ಗ್ರಾಮಸ್ಥರೊಂದಿಗೆ ಸ್ವಾಮೀಜಿಯವರಿಗೆ ಮಾತುಕತೆ ನಡೆಸಿ ಪ್ರಸಾದ ನೀಡಲು ಅವಕಾಶವಾಗುತ್ತದೆ ಎಂದು ಪುರಾಣಿಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next