Advertisement

ದೇಸೀಯ ತಳಿ, ಮೈಸೂರು ಅರಸರ ಸ್ಪರ್ಶ

12:30 AM Jan 31, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವಕ್ಕೆ ಪೂರ್ವಭಾವಿಯಾಗಿ ಅದಮಾರು ಮಠದಲ್ಲಿ ಬುಧವಾರ ನಡೆದ ಅಕ್ಕಿಮುಹೂರ್ತದಲ್ಲಿ ಸಾವಯವ / ದೇಸೀ ತಳಿಗಳ ಸ್ಪರ್ಶವಾಗಿದೆ.  ಮುಂದಿನ ಪರ್ಯಾಯದಲ್ಲಿ ಸಾಧ್ಯವಾದಷ್ಟುದೇಸೀ ತಳಿಗಳ ಧಾನ್ಯಗಳನ್ನು ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದ್ದು, ಅಕ್ಕಿ ಮುಹೂರ್ತಕ್ಕೆ ಸಾಂಪ್ರದಾಯಿಕ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆಗಮಿಸಿ ಶುಭ ಕೋರಿದರು.

Advertisement

ವಿವಿಧ ಸಂಪ್ರದಾಯಗಳಲ್ಲಿ ಹಲವು ಅದ್ಭುತಗಳಿವೆ. ಅವುಗಳನ್ನು ತಿಳಿಯುವ ಕುತೂಹಲ ನನಗಿದೆ. ಗುರು ಪರಂಪರೆ, ರಾಜ ಪರಂಪರೆ, ಅರಮನೆಗಳು ಒಟ್ಟೊಟ್ಟಿಗೆ ಬೆಳೆದಿವೆ. ನನ್ನ ಅಜ್ಜ ಉಡುಪಿಗೆ ಬಂದಿದ್ದರು. ಮೈಸೂರು ಅರಮನೆಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ.  ಅರಮನೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ತಿಳಿದರೆ ನಂಬಿಕೆ, ಇಲ್ಲದಿರೆ ಮೂಢನಂಬಿಕೆ!
ಶ್ರೀಕೃಷ್ಣನ ಸನ್ನಿಧಿಗೆ ಮೈಸೂರು ಯದುವಂಶದ ರಾಜರ ಪೂರ್ವಜರು ಬಂದಿದ್ದರು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ತಿಳಿಸಿದರು. ಸಂಪ್ರದಾಯಗಳನ್ನು ತಿಳಿದು ಮಾಡಿದರೆ ಅದರಲ್ಲಿರುವ ವಿಶೇಷ ಅರ್ಥ ತಿಳಿಯುತ್ತದೆ, ಇಲ್ಲವಾದರೆ ಮೂಢನಂಬಿಕೆ ಎನಿಸುತ್ತದೆ ಎಂದು ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು. 

 ಶ್ರೀ ಕೃಷ್ಣಾಪುರ, ಪೇಜಾವರ ಕಿರಿಯ, ಕಾಣಿಯೂರು, ಸೋದೆ ಸ್ವಾಮೀಜಿಯವರು ಪಾಲ್ಗೊಂಡರು.ಗಾಳದ ಕೊಂಕಣಿ ಸಮಾಜದ ಪರವಾಗಿ ಸಂಘದ ಅಧ್ಯಕ್ಷ ನರಸಿಂಹ ನಾಯಕ್‌, ಉಪಾಧ್ಯಕ್ಷ ರಂಜನ್‌ ಎಂ. ನಾಯಕ್‌, ಜತೆ ಕಾರ್ಯದರ್ಶಿ ವೆಂಕಟೇಶ್‌ ಬಂಟ್ವಾಳ, ಮಾಜಿ ಅಧ್ಯಕ್ಷ ಉಮಾನಾಥ ನಾಯಕ್‌ ಉಳ್ಳಾಲ ಭಾಗವಹಿಸಿದ್ದರು.

ಸಾವಯವ ಧಾನ್ಯ ಆರೋಗ್ಯಕ್ಕೆ ಉತ್ತಮ
ಅಕ್ಕಿ ಮುಹೂರ್ತದಲ್ಲಿ ಮುಳ್ಕರೆ, ಮಂಜುಗುಣಿ ಸಣ್ಣಕ್ಕಿ, ಹೇಮಾವತಿ, ರಾಜಕಮಲ, ಒಂದ್‌ಕಡ್ಡಿ, ಸೋನ, ಮಟ್ಟಳಗ, ಹೊನ್ನೆಕಟ್ಟು, ಮದ್ರಾಸ್‌ ಸಣ್ಣಕ್ಕಿ, ಪದ್ಮರೇಖ, ಸಿಂಧು, ಪದ್ಮ, ಗೌರಿ, ಆಲೂರು ಸಣ್ಣಕ್ಕಿ, 1001 ಬ್ರಾಂಡ್‌, 1010 ಬ್ರಾಂಡ್‌, ಕೆಂಪಕ್ಕಿ, ತನು ಮೊದಲಾದ 16 ದೇಸೀ ತಳಿಗಳ ಅಕ್ಕಿಯನ್ನು ಸಂಗ್ರಹಿಸಿ ಪೂಜೆ ಸಲ್ಲಿಸಲಾಯಿತು. ಸಾವಯವ ಧಾನ್ಯ ಆರೋಗ್ಯಕ್ಕೆ ಉತ್ತಮ. ಸಾಧ್ಯವಾದಷ್ಟು ಸಾವಯವ/ ದೇಸೀ ತಳಿಗಳ ಅಕ್ಕಿ ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ. ಸಾವಯವ ಕೃಷಿಕರನ್ನು ಸಂಪರ್ಕಿಸಲಾಗುತ್ತಿದೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸುದ್ದಿಗಾರರಿಗೆ ತಿಳಿಸಿದರು. 

Advertisement

ಒಡೆಯರ್‌ಗಳ ಉಡುಪಿ ಸಂಪರ್ಕ
ಶ್ರೀಕೃಷ್ಣ ಮಠದಲ್ಲಿ ಶ್ರೀ ಸೋದೆ ಮಠದ ಶ್ರೀ ವಿಶ್ವಪ್ರಿಯತೀರ್ಥರ 2ನೇ ಪರ್ಯಾಯದಲ್ಲಿ 1821ರ ಫೆಬ್ರವರಿ 5ರಂದು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕುಟುಂಬಸಮೇತರಾಗಿ ಬ್ರಿಟಿಷ್‌ ಪ್ರತಿನಿಧಿ ಜತೆ ಬಂದು ಚಿನ್ನ, ಕಾಲುದೀಪಗಳನ್ನು ನೀಡಿದ್ದು ಒಡೆಯರ್‌. ಶ್ರೀ ವಿಶ್ವಪ್ರಿಯತೀರ್ಥರು 1835ರಲ್ಲಿ ಮೈಸೂರು ಅರಮನೆಯಲ್ಲಿ ಪಟ್ಟದ ದೇವರ ಪೂಜೆ ಸಲ್ಲಿಸಿದ ಸಂದರ್ಭ ಸೋದೆ ಮಠಕ್ಕೆ ಒಡೆಯರ್‌ ನೀಡಿದ ಪಚ್ಚೆ ಮಂಟಪದಲ್ಲಿ ಸೋದೆ ಮಠದ ಪರ್ಯಾಯವಿರುವಾಗ ಮಠದಲ್ಲಿ ನವರಾತ್ರಿಯ ಕೊನೆಯ 3 ದಿನ ವಿಠಲನನ್ನು ಇರಿಸಿ ಪೂಜಿಸಲಾಗುತ್ತದೆ.

1952-53ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಪ್ರಥಮ ಪರ್ಯಾಯದಲ್ಲಿ ತಣ್ತೀಜ್ಞಾನ ಸಮ್ಮೇಳನವನ್ನು ಜಯಚಾಮರಾಜೇಂದ್ರ ಒಡೆಯರ್‌ ಉದ್ಘಾಟಿಸಿದ್ದರು. 

1964 ಫೆಬ್ರವರಿ 21ರಂದು ಜಯಚಾಮರಾಜೇಂದ್ರ ಒಡೆಯರ್‌ ಉಡುಪಿಯ ಪ್ರಥಮ ಛತ್ರವೆನಿಸಿದ ಅದಮಾರು ಮಠದ ಅತಿಥಿಗೃಹಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆಜಾನುಬಾಹುವಾಗಿದ್ದ ಒಡೆಯರ್‌ ಅವರಿಗೆ ಪ್ರವೇಶಿಸಲು ಅದಮಾರು ಮಠದ ಕಲ್ಲು ಹೆಬ್ಟಾಗಿಲು ಕಿರಿದಾದಾಗ ಶ್ರೀ ವಿಬುಧೇಶತೀರ್ಥರು ಹೆಬ್ಟಾಗಿಲನ್ನು ಹಿರಿದಾಗಿಸಿದರು. 2009ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಇದೇ ಅತಿಥಿಗೃಹದಲ್ಲಿ ಉಳಿದಿದ್ದರು. ಇದರ ನವೀಕೃತ ಅತಿಥಿಗೃಹವನ್ನು 2017ರ ಮೇ 30ರಂದು ಈಗಿನ ಒಡೆಯರ್‌ ಉದ್ಘಾಟಿಸಿದ್ದರು.

ಪಲಿಮಾರು ಮಠದ ಎರಡು ತಲೆಮಾರು ಹಿಂದಿನ ಶ್ರೀ ರಘುಮಾನ್ಯತೀರ್ಥರು ಮೈಸೂರು ಅರಮನೆಯಲ್ಲಿ ಪೂಜೆ ಸಲ್ಲಿಸಿದ್ದರು.  

ಮೊಮ್ಮಗನ ತಲೆಗೆ  ತಾತನ ಪೇಟ!
ಯದುವೀರ ಕೃಷ್ಣದತ್ತ ಒಡೆಯರ್‌ ಅವರು ತಾತ ಜಯಚಾಮರಾಜೇಂದ್ರ ಒಡೆಯರ್‌ ಧರಿಸಿದ ಪೇಟವನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next