Advertisement

ಅದಮಾರು ಮಠದಲ್ಲಿ ವಾರ್ಷಿಕ ರಾಮನವಮಿ ಉತ್ಸವಕ್ಕೆ ಪೂರ್ವ ಸಿದ್ಧತೆ

05:02 PM Apr 03, 2017 | Team Udayavani |

ಮುಂಬಯಿ: ನೆಮ್ಮದಿಯ ಬದುಕಿಗೆ ಆಧ್ಯಾತ್ಮಿಕತೆಯನ್ನು  ನಂಬುವ ಕಾಲ ಇದಾಗಿದೆ. ರಾಮನ ಉಪನಿಷತ್ತುಗಳು ಸನ್ಮಾರ್ಗದ ಸಂದೇಶ ಸಾರುತ್ತವೆ. ಲೌಕಿಕ ಬದುಕನ್ನು ಬದಿಗೊತ್ತಿ ನಿಸ್ವಾರ್ಥ, ಪರಸ್ಪರ ಪ್ರೀತಿ, ಸಹಕಾರ ಮನೋಭಾವನೆಯಿಂದ  ಬದುಕಿದಾಗ ಜೀವನ ಪಾವನವಾಗುವುದು ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನುಡಿದರು.

Advertisement

ಮಾ. 29ರಂದು   ಸಂಜೆ  ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ  ಅದಮಾರು ಮಠದಲ್ಲಿ 2017ನೇ  ವಾರ್ಷಿಕ ಶ್ರೀ ರಾಮನವಮಿ ಉತ್ಸವದ ಪೂರ್ವ ಸಿದ್ಧತೆ ಹಾಗೂ ವಾರ್ಷಿಕ ರಾಮಾಯಣ ಪ್ರವಚನಕ್ಕೆ ಚಾಲನೆಯನ್ನಿತ್ತು ಆಶೀರ್ವಚನ ನೀಡಿದ ಅವರು, ಪ್ರಕೃತಿ ಅಂದರೆ ಸರ್ವನಾಮವಾಗಿದೆ. ಇದರ ಅಧ್ಯಯನದಿಂದ ಬದುಕು ಸಮೃದ್ಧಿಯಾಗುವುದು. ಅಪರಕ್ರಿಯೆ ಮತ್ತು ಪರಕ್ರಿಯೆಗಳ ಅರಿವು ಮೂಡಿಸುವ ಅಗತ್ಯ ನಮಗಿದ್ದು, ಇದರಿಂದ ಪ್ರಕೃತಿಬದ್ಧವಾಗಿ ಬಾಳಬಹುದು. ಬಲತ್ಕಾರಕ್ಕೆ ಬಗ್ಗದೆ ಬಾಳುವ ಅಗತ್ಯ ಪ್ರಸಕ್ತ ಜನತೆಗಿದ್ದು ಜೀವನವನ್ನು ಪ್ರಾಮಾಣಿಕವಾಗಿ ಬದುಕಬೇಕು. ತುಂಬಿಸಿ ಉಳಿಸಿಕೊಳ್ಳುವ ಬದುಕನ್ನು ನಾವು ರೂಡಿಸಿಕೊಳ್ಳಬೇಕು. ಆ ಜೀವನವೇ ನಮ್ಮನ್ನು ಸನ್ಮಾರ್ಗದತ್ತ ಒಯ್ಯುತ್ತದೆ ಎಂದೂ ನುಡಿದರು.

ಪ್ರವಚನ ಕಾರ್ಯಕ್ರಮದ ಮುನ್ನ ಸಯಾನ್‌ನ ಗೋಕುಲ ಭಜನಾ ಮಂಡಳಿ ನೇತೃತ್ವದಲ್ಲಿ ಭಜನೆ ನಡೆಸಿದರು. ಸ್ವಾಮೀಜಿಯವರು ಮಠದಲ್ಲಿನ  ಶ್ರೀ ದೇವರಿಗೆ ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರು ಹಾಗೂ ಭಜನಾ ಮಂಡಳಿ ಸದಸ್ಯರಿಗೆ  ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಪ್ರವಚನ ಕಾರ್ಯಕ್ರಮದಲ್ಲಿ ವಾಸುದೇವ ಉಡುಪ, ಸಾಬಕ್ಕ ಖೇಡ್ಕರ್‌,  ಎಸ್‌. ಎನ್‌. ಉಡುಪ, ಪರೇಲ್‌ ಶ್ರೀನಿವಾಸ ಭಟ್‌, ವಾಣಿ ರಾಜೇಶ್‌ ಭಟ್‌, ಮಾ| ಶ್ರೀಶ ಆರ್‌. ಭಟ್‌, ಪ್ರಹ್ಮಾದ ರಾವ್‌, ಸುಧೀರ್‌ ಎಲ್‌. ಶೆಟ್ಟಿ, ಎ. ಎಸ್‌. ರಾವ್‌, ಕೆ. ಹಲಗೇರಿ, ಟಿ. ಜಿ. ಹುನ್ನೂರು, ಶಿವರಾಮ ಬಿ. ನಾೖಕ್‌, ಎ. ಭುಜಂಗರಾವ್‌, ಶರದ್‌ ನರಗುಂದಕರ್‌ ಸೇರಿದಂತೆ ಪುರೋಹಿತರು ಗಣ್ಯರು ಉಪಸ್ಥಿತರಿದ್ದರು.

ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಸುಖಾಗಮನ ಬಯಸಿ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಲ ಕಲಾವೃಂದ ಸಯನ್‌ ತಂಡವು ಕೃತಿ ಚಡಗ ಮತ್ತು ತಾನ್ವಿ ರಾವ್‌ ನಿರ್ದೇಶನದಲ್ಲಿ ನೃತ್ಯಾವಳಿಗಳನ್ನು ಪ್ರಸ್ತುತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರೇಮಾ ಬಿ. ರಾವ್‌ ನಿರೂಪಿಸಿದರು. ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ಶ್ರೀಗಳನ್ನು ಪುಷ್ಪಗೌರವದೊಂದಿಗೆ ಸ್ವಾಗತಿಸಿ ವಂದಿಸಿದರು.

Advertisement

ರಾಮನವಮಿಯ  ಸಿದ್ಧತೆಯಾಗಿಸಿ ಮಾ. 29ರಿಂದ  ಎ. 4ರ ರಾಮ ನವಮಿ ತನಕ ಪ್ರತಿದಿನ ಸಂಜೆ 5.30ರಿಂದ ರಾತ್ರಿ 7ರವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಎ. 4 ರಂದು ರಾಮನವಮಿಯ ದಿನದಂದು ಬೆಳಗ್ಗೆ 7ರಿಂದ  ಪಂಚಾಮೃತ ಅಭಿಷೇಕ, ಪೂರ್ವಾಹ್ನ 11.30 ರಿಂದ ವಾಗೆªàವಿ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 12ರಿಂದ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6ರಿಂದ ಪಲ್ಲಕ್ಕಿ ಉತ್ಸವ, ಅನಂತರ ಅದಮಾರುಶ್ರೀ ಅವರಿಂದ  ಉಪನ್ಯಾಸ‌, ರಾತ್ರಿ 8ರವರೆಗೆ ಪೂಜೆ ಮತ್ತು ಅನ್ನ ಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆ ಪ್ರಯುಕ್ತ ಮಹಾನಗರದಲ್ಲಿನ ಸಮಸ್ತ ಭಕ್ತಾದಿಗಳು ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ರಾಜೇಶ್‌ ರಾವ್‌ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next