Advertisement

ಜವಾಬ್ದಾರಿ ಹಸ್ತಾಂತರಿಸಿದ ಅದಮಾರು ಹಿರಿಯ ಯತಿ

09:28 AM Nov 11, 2018 | |

ಉಡುಪಿ: ಶ್ರೀ ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವ ಪ್ರಿಯತೀರ್ಥ ಶ್ರೀಪಾದರು ಮಠದ ಸಕಲ ಜವಾಬ್ದಾರಿಗಳನ್ನು ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯತೀರ್ಥರಿಗೆ ಹಸ್ತಾಂತರಿಸಿದ್ದಾರೆ. ಲೌಕಿಕದಲ್ಲಿ ನಿವೃತ್ತಿಯ ವಯಸ್ಸು 60 ವರ್ಷ, ವಿಶ್ವಪ್ರಿಯತೀರ್ಥ ಶ್ರೀಪಾದರೂ ಇದೇ ವಯಸ್ಸಿಗೆ ಕಾಲಿಡುವಾಗ ಅಧಿಕಾರವನ್ನು ಹಸ್ತಾಂತರಿಸಿರುವುದು ಗಮನಾರ್ಹ.

Advertisement

ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸ್ಥಾನವನ್ನು ತಾವಿರಿಸಿಕೊಂಡು ಕಿರಿಯ ಶ್ರೀಗಳನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ. ಸದ್ಯ ಇಬ್ಬರೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದು, ಕ್ರಮೇಣ ಇದನ್ನೂ ಕಿರಿಯ ಶ್ರೀಗಳಿಗೆ ಹಸ್ತಾಂತರಿಸುವ ಇರಾದೆಯನ್ನು ಶ್ರೀವಿಶ್ವಪ್ರಿಯತೀರ್ಥರು ಹೊಂದಿದ್ದಾರೆ. 

ಮಠದ ಆಗುಹೋಗುಗಳು, ಹಣಕಾಸು ವ್ಯವಹಾರ, ಪೂಜೆ, ಭಕ್ತರ ಭೇಟಿ ಇತ್ಯಾದಿ ಜವಾಬ್ದಾರಿಗಳನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದ್ದೇವೆ ಎಂದು ಶ್ರೀವಿಶ್ವಪ್ರಿಯತೀರ್ಥರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. 

ಯೋಗ್ಯ ಶಿಷ್ಯನನ್ನು ಕರುಣಿಸಬೇಕೆಂದು ಶ್ರೀ ಅನಂತೇಶ್ವರನಲ್ಲಿ ಪ್ರಾರ್ಥಿಸುತ್ತಿದ್ದೆ. ಅದನ್ನು ದೇವರು ಈಡೇರಿಸಿದ್ದಾನೆ. ಈಗ ಲೌಕಿಕ- ವೈದಿಕ ಎರಡೂ ವಿದ್ಯೆಗಳನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಲೌಕಿಕರಿಗೂ ಆಧ್ಯಾತ್ಮಿಕ ಸಂದೇಶವನ್ನು ತಿಳಿಸಬೇಕಾದರೆ ಲೌಕಿಕ ಜ್ಞಾನವೂ ಬೇಕು. ನಮ್ಮ ಶಿಷ್ಯರು ಇವೆರಡನ್ನೂ ಕರಗತ ಮಾಡಿ ಕೊಂಡಿದ್ದಾರೆ. ಸಮಾಜಸೇವೆಗಾಗಿ ನಮ್ಮ ಗುರುಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ನಡೆಯುವುದಿದೆ. ಹೀಗಾಗಿ ಎಲ್ಲದಕ್ಕೂ ಹೋಗಲು ಆಗುತ್ತಿರಲಿಲ್ಲ. ಇನ್ನು ಮುಂದೆ ನಾವಿಬ್ಬರೂ ಹಂಚಿಕೊಂಡು ನಿರ್ವಹಿಸುತ್ತೇವೆ. ನಾವು ದೈಹಿಕವಾಗಿ ಸಮರ್ಥರಿರುವಾಗಲೇ ಶಿಷ್ಯರಿಗೆ ಜವಾಬ್ದಾರಿ ನೀಡಿ, ಅವರದನ್ನು ಸಮರ್ಥವಾಗಿ ನಿರ್ವಹಿಸುವುದನ್ನು ಕಾಣಬೇಕೆನ್ನುವುದು ನಮ್ಮ ಇರಾದೆ ಎಂದು ಶ್ರೀವಿಶ್ವಪ್ರಿಯತೀರ್ಥರು ತಿಳಿಸಿದ್ದಾರೆ. 

ಪರ್ಯಾಯ ಪೂಜೆ ಯಾರಿಂದ?
ಮುಂದಿನ ಪರ್ಯಾಯ ಪೂಜೆಯನ್ನು ಯಾರು ಮಾಡುತ್ತಾರೆಂಬ ಪ್ರಶ್ನೆಗೆ ಉತ್ತರಿಸಿ, ಆ ಬಗ್ಗೆ ಯಾವ ನಿರ್ಧಾರವನ್ನೂ ಮಾಡಿಲ್ಲ. ಮುಂದಿ ನದು ನಮ್ಮ ಪರ್ಯಾಯ, ಜತೆಯಾಗಿ ನಿರ್ವಹಿಸುವೆವು  ಎಂದರು.  ಹಿಂದೆಯೂ ಗುರುಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳಿದ್ದರು. ನಾವೇ ಬೇಡವೆಂದು ಹೇಳಿದ್ದೆವು. ಅಧಿಕಾರ “ನಮಗೆ ಬೇಡ’ ಎಂಬ ತ್ಯಾಗಭಾವವಿದ್ದರೆ ಅದು ಆದರ್ಶ. ಈಗ ಒತ್ತಾಯದಿಂದ ಒಪ್ಪಿದ್ದೇವೆ. ಗುರುಗಳಲ್ಲಿ ಕೇಳಿಯೇ ನಿರ್ಧಾರ ತಳೆಯುತ್ತೇವೆ ಎಂದು ಕಿರಿಯ ಯತಿಗಳು ತಿಳಿಸಿದರು. 

Advertisement

* 1972ರಲ್ಲಿ ಶ್ರೀ ಅದಮಾರು ಮಠದ 31ನೆಯ ಯತಿ ಶ್ರೀ ವಿಬುಧೇಶ ತೀರ್ಥರು ತಮ್ಮ ಎರಡನೆಯ ಪರ್ಯಾಯದಲ್ಲಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಉತ್ತರಾಧಿಕಾರಿಯನ್ನಾಗಿ ನಿಯೋಜಿಸಿದರು. 
* 2014ರ ಜೂ. 19ರಂದು ಕುಂಜಾರು ದೇವಸ್ಥಾನದಲ್ಲಿ ಶ್ರೀವಿಶ್ವಪ್ರಿಯ ತೀರ್ಥರು 33ನೆಯ ಯತಿ ಶ್ರೀಈಶಪ್ರಿಯತೀರ್ಥರನ್ನು ಉತ್ತರಾಧಿಕಾರಿ ಯಾಗಿ ನಿಯೋಜಿಸಿದರು. 
* ಶ್ರೀವಿಶ್ವಪ್ರಿಯತೀರ್ಥರಿಗೆ ಈಗ 60 ವರ್ಷ, ಶ್ರೀಈಶಪ್ರಿಯತೀರ್ಥರಿಗೆ 33 ವರ್ಷ. ಶ್ರೀವಿಶ್ವಪ್ರಿಯತೀರ್ಥರು ಶ್ರೀಕೃಷ್ಣಮಠದಲ್ಲಿ ಪ್ರಥಮ ಪರ್ಯಾಯ ನಿರ್ವಹಿಸಿದಾಗ ಅವರಿಗೆ 33 ವರ್ಷ ವಯಸ್ಸಾಗಿತ್ತು. 
* ಎಂಜಿನಿಯರಿಂಗ್‌ ಮಾಡಿರುವ ಉಡುಪಿ ಅಷ್ಟಮಠಗಳ ಪ್ರಥಮ ಯತಿ ಶ್ರೀಈಶಪ್ರಿಯತೀರ್ಥರು. 

ಅಧಿಕಾರದ ಜವಾಬ್ದಾರಿಯನ್ನು ನಿರ್ವಹಿಸಲು ನೀನೊಬ್ಬ ಇದ್ದೀಯಲ್ಲ’ ಎಂದು ಧರ್ಮರಾಜನಿಗೆ ಭೀಮ ಹೇಳಿರುವುದು ಮಹಾಭಾರತದಲ್ಲಿದೆ, “ಅಧಿಕಾರವನ್ನು ನೀನೇ ನಡೆಸು’ ಎಂದು ರಾಮ ಮತ್ತು ಭರತ ಹೇಳಿರುವುದು ರಾಮಾಯಣದಲ್ಲಿದೆ. 
ಅದಮಾರು ಮಠದ ಉಭಯ ಶ್ರೀಗಳು

Advertisement

Udayavani is now on Telegram. Click here to join our channel and stay updated with the latest news.

Next