Advertisement

ಮರಳಿ ಮಣ್ಣಿಗೆ, ಮರಳಿ ಹಳ್ಳಿಗೆ: ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯ

11:30 PM Jan 17, 2022 | Team Udayavani |

ಕೊರೊನಾ ಸಾಂಕ್ರಾಮಿಕ ತಂದೊ ಡ್ಡಿದ ಸಂಕಷ್ಟದ ಪರಿಸ್ಥಿತಿಯನ್ನು ಸಕಾರಾತ್ಮಕ ವಾಗಿಯೇ ಸ್ವೀಕರಿಸಿ ಶ್ರೀಕೃಷ್ಣ ಮಠದ ಸಂಪ್ರದಾಯಕ್ಕೆ ಒಂದಿಷ್ಟು ಚ್ಯುತಿ ಬರದಂತೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಿದ್ದೇವೆ. ಅಲ್ಲದೆ 2 ವರ್ಷಗಳ ಅವಧಿ ಯಲ್ಲಿ ಸಂದರ್ಭಾನುಸಾರ ಹಲವು ಕೆಲಸಕಾರ್ಯಗಳನ್ನು ಪೂರ್ಣಗೊಳಿ ಸಿದ್ದೇವೆ ಎಂದಿದ್ದಾರೆ ಉಡುಪಿ ಶ್ರೀಕೃಷ್ಣಮಠದ ನಿರ್ಗಮನ ಪರ್ಯಾಯ ಸ್ವಾಮೀಜಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು.”ಉದಯವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗವಿಲ್ಲಿದೆ.

Advertisement

ಕೊರೊನಾ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ?
ಪರ್ಯಾಯ ಪೀಠ ಅಲಂಕರಿಸಿದ ಎರಡು ತಿಂಗಳಲ್ಲಿ ಕೊರೊನಾ ದೇಶಾದ್ಯಂತ ವ್ಯಾಪಿಸಿತ್ತು. ಕೊರೊನಾದ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಲಸಿಕೆಯೂ ಆಗ ಬಂದಿರಲಿಲ್ಲ. ಲಾಕ್‌ಡೌನ್‌ ಇತ್ಯಾದಿ ಘೋಷಣೆಯಾಗಿದ್ದರಿಂದ ಶ್ರೀಕೃಷ್ಣ ಮಠದಲ್ಲಿ ನಡೆಯಬೇಕಾದ ನಿತ್ಯದ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಅದಮಾರು ಮಠದ ಪ್ರತ್ಯೇಕ ನಿಧಿ ತೆಗೆದಿಡಲು ತೀರ್ಮಾನಿಸಿದೆವು. ಕೊರೊನಾ ಅವಧಿಯಲ್ಲಿ ಇಲ್ಲಿನ ಸಿಬಂದಿಯ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಅತ್ಯಗತ್ಯವಾಗಿದ್ದರಿಂದ ಇದಕ್ಕಾಗಿ ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದೆವು. ಕೊರೊನಾ ತಂದೊಡಿದ್ದ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಪರ್ಯಾಯದ ಅವಧಿಯಲ್ಲಿ ಹಲವು ಕಾರ್ಯಗಳನ್ನು ಮಾಡಿದ್ದೇವೆ.

ನಿಮ್ಮ ಸಂಕಲ್ಪಗಳಿಗೆ ಕೊರೊನಾ ಅಡ್ಡಿಯಾಯಿತೇ?
ಪರ್ಯಾಯ ಪೂಜೆ ಆರಂಭಿಸುವ ಮೊದಲು ಯಾವುದೇ ಸಂಕಲ್ಪ ಮಾಡಿರಲಿಲ್ಲ ಹಾಗೂ ಯೋಜನೆಯನ್ನು ಹಾಕಿಕೊಂಡಿರಲಿಲ್ಲ. ದೇವರು ಆ ಸಂದರ್ಭಕ್ಕೆ ಏನು ಮಾಡಬೇಕು ಎಂಬ ಸೂಚನೆ ನೀಡಿದ್ದಾರೋ ಅದನ್ನು ಮಾಡುವ ಪ್ರಯತ್ನ ನಡೆಸಿದ್ದೇವೆ. ದೇವರ ಪೂಜೆ ಚೆನ್ನಾಗಿ ಆಗಿದೆ. ಆಯಾ ಸಂದರ್ಭಕ್ಕೆ ಆಗಬೇಕಾದ ಕೆಲಸ ಕಾರ್ಯಗಳು ಕೂಡ ಆಗಿವೆ.

ಆರ್ಥಿಕ ಸಮಸ್ಯೆ ಎದುರಾಗಿಲ್ಲವೇ?
ಕೊರೊನಾದಿಂದ ಆರ್ಥಿಕ ಸಮಸ್ಯೆ ಎದುರಾಗಿದ್ದು ಸಹಜ. ರಾಜಾಂಗಣ, ಚಂದ್ರಶಾಲೆ, ಕೆರೆಕಟ್ಟೆ, ಸರ್ವಜ್ಞ ಪೀಠ ಹೀಗೆ ಐದಾರು ಕಡೆ ನಿತ್ಯವೂ ಪ್ರವಚನ ಇರುತ್ತದೆ. ಎಲ್ಲದಕ್ಕೂ ಖರ್ಚು ಇರುತ್ತದೆ. ಭಕ್ತರು ಬಂದಾಗ ಹುಂಡಿಗೆ ಕಾಣಿಕೆ ಹಾಕುವುದು, ಸೇವಾ ರಶೀದಿ ಮಾಡಿಸುವುದು ಇತ್ಯಾದಿ ಇರುತ್ತವೆ. ಲಾಕ್‌ಡೌನ್‌ ಅವಧಿಯಲ್ಲಿ ಭಕ್ತರೇ ಬರುವಂತಿರಲಿಲ್ಲ. ಮಠದಿಂದ ನಿಧಿ ಹಾಕಿದ್ದೇವೆ. ನಿರಂತರವಾಗಿ ನಡೆಯಬೇಕಾದ ಕೆಲಸಕ್ಕೆ ಎಲ್ಲಿಂದಾದರೂ ನಿಧಿ ನೀಡಬೇಕಾಗುತ್ತದೆ. ಶ್ರೀಕೃಷ್ಣ ಮಠದ ದೈನಂದಿನ ನಿರ್ವಹಣೆಗೆ ಒಂದು ಲಕ್ಷ ರೂ. ಬೇಕಾಗುತ್ತದೆ. ಶುದ್ಧ ಎಳ್ಳೆಣ್ಣೆ ಉಪಯೋಗ ಮಾಡಿದ್ದರಿಂದ ವೆಚ್ಚ ಇನ್ನಷ್ಟು ಹೆಚ್ಚಾಯಿತು.

ಕೊರೊನಾ ಕಲಿಸಿದ ಪಾಠವೇನು?
ಕೊರೊನಾ ಯಾರಿಗೆ ಹೇಗೆ, ಏನು ಪಾಠ ಕಲಿಸಿದೆಯೋ ತಿಳಿದಿಲ್ಲ. ನೂರಾರು ವರ್ಷಗಳ ಹಿಂದೆ ಯತಿಗಳು ಯಾವ ರೀತಿಯಲ್ಲಿ ಪೂಜಾಕಾರ್ಯ ನೆರವೇರಿಸುತ್ತಿದ್ದರೋ ಆ ಕಾಲವನ್ನು ಅನುಭವಿಸಲು ಸಾಧ್ಯವಾಯಿತು. ಕೊರೊನಾ ಪರಿಸ್ಥಿತಿಯನ್ನು ರಚನಾತ್ಮಕ ಹಾಗೂ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇವೆ.

Advertisement

ಅದಮಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನ ನಿಮಗೆ ಸಿಗುವ ಸಾಧ್ಯತೆ ಇದೆಯೇ?
ನಮ್ಮ ಗುರುಗಳು ಈಗಾಗಲೇ ಭಾರೀ ತ್ಯಾಗ ಮಾಡಿದ್ದಾರೆ. ಒಮ್ಮೆ ಕರೆದು, ದೇವರ ಪೆಟ್ಟಿಗೆ ಹಿಡಿದು ಸಂಚಾರ ಮಾಡಬೇಕು. ಪರ್ಯಾಯ ಪೂಜೆ ನಡೆಸಬೇಕು ಎಂದು ದೇವರನ್ನು ಕೊಟ್ಟು, ಪರ್ಯಾಯ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಿದರು. ಅವರು ಒಮ್ಮೆ ಹೇಳಿದರೆ ಅದೇ ಅಂತಿಮ. ಮಾಡಬೇಕು ಎಂದರೆ ಮಾಡಲೇ ಬೇಕು. ಅವರು ಹೇಳಿದ ಕೆಲಸಗಳನ್ನು ಕರ್ತವ್ಯವೆಂದು ಭಾವಿಸಿ ಮಾಡುತ್ತೇವೆ.

ತಾಂತ್ರಿಕವಾಗಿ ಹೇಗೆ ಮಠದಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆ?
ಇಚ್ಛಾಶಕ್ತಿ ಹಾಗೂ ಕಾರ್ಯಬದ್ಧತೆಯಿಂದ ಅನೇಕ ಕೆಲಸಗಳು ಈಡೇರುತ್ತವೆ. ವಿಶೇಷವಾಗಿ ಕೊರೊನಾ ಅವಧಿಯನ್ನು ಬಳಸಿಕೊಂಡು ಅನೇಕ ಕಡೆಗಳಲ್ಲಿ ಕೇಬಲ್‌ಗ‌ಳನ್ನು ಬದಲಿಸಿದ್ದೇವೆ. ತಾಂತ್ರಿಕ ವಿಭಾಗದ ತಜ್ಞರನ್ನು ಕರೆಸಿ, ಅವರಿಂದ ಸಲಹೆ ಪಡೆದು ಕೇಬಲ್‌ ವೈರ್‌ಗಳನ್ನು ಸರಿ ಮಾಡಿಸಿದ್ದೇವೆ. ಕೊರೊನಾದಿಂದ ಭಕ್ತರ ಸಂಖ್ಯೆ ಕಡಿಮೆ ಇದ್ದುದರಿಂದ ಇದು ಸಾಧ್ಯವಾಯಿತು.

ಉಡುಪಿ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವಾಗಿ ಇನ್ನಷ್ಟು ಬೆಳೆಯಬೇಕಲ್ಲವೇ?
ಸನಾತನ ಧರ್ಮ ಪ್ರಕೃತಿಗೆ ತೀರ ಸಮೀಪವಿರಲು ಬಯಸುತ್ತದೆ. ಇಂದು ನಾವು ಅಭಿವೃದ್ಧಿ ಹೆಸರಿನಲ್ಲಿ ಮಾಡಿರುವ ಕಾರ್ಯಗಳು 40 ವರ್ಷ ಹಿಂದೆ ಹೋದರೆ ಚೆನ್ನಾಗಿರುತ್ತದೆ. ಮೂಲಸೌಕರ್ಯಗಳ ಪೂರೈಕೆ ಅಂದರೆ ಮೊಣಕೈಗೆ ಬೆಲ್ಲ ಸವರಿದಂತೆ. ನಗರಗಳ ಬಹುಮಹಡಿ ಕಟ್ಟಡದಂತೆ ಆಧುನಿಕತೆಗಳು ಯಾವಾಗಲೂ ಖುಷಿ ನೀಡಲು ಸಾಧ್ಯವಿಲ್ಲ. ನೀರು, ವಿದ್ಯುತ್‌ ಇತ್ಯಾದಿಗಳಿಗೆ ಬೇರೆಯವರ ಮೇಲೆ ಅವಲಂಬನೆ ಹೆಚ್ಚಾಗುತ್ತದೆ. ಜನರು ಸ್ವಾವಲಂಬಿಗಳಾಗಬೇಕು. ಹಳ್ಳಿಗಳಲ್ಲಿ ಬದುಕಿದೆ. ಅಲ್ಪತೃಪ್ತರಾಗಬೇಕು. ಸುಖ ಹೊರಗಡೆ ಸಿಗುವುದಿಲ್ಲ. ನಮ್ಮೊಳಗೆ ಇದೆ. ಕೃಷಿಗೆ ಜನ ಮರಳಬೇಕು. ಮರಳಿ ಮಣ್ಣಿಗೆ ಹೋಗಬೇಕು ಹಾಗೂ ನಮ್ಮ ಸಂಪತ್ತಿನ ಸದುಪಯೋಗ ಆಗಬೇಕು. ಜನಸಂಖ್ಯೆ ನಿಯಂತ್ರಣವೂ ಸೇರಿ ಎಲ್ಲವೂ ಸರಿಸಮಾನವಾಗಿ ಜಾರಿಯಾಗಬೇಕು.

ಮತಾಂತರ ಕಾಯ್ದೆಯ ಆವಶ್ಯಕತೆ ಇದೆಯೇ?
ಕಾನೂನು ಎಂಬುದು ಇದ್ದರೆ ಪ್ರಯೋಜನವಿಲ್ಲ. ಅನುಷ್ಠಾನ ಮುಖ್ಯ. ಕಾನೂನು ಇಲ್ಲದೆ ಅನೇಕ ಅಂಶಗಳನ್ನು ಅರಿವು ಮೂಡಿಸುವ ಮೂಲಕ ಸಾಕಾರ ಮಾಡಬಹುದು. ಭಾರತೀಯ ಧರ್ಮ ಎಷ್ಟು ಎತ್ತರದ್ದು ಎಂಬುದನ್ನು ಜನರಿಗೆ ತಿಳಿಸಬೇಕು. ಮತಾಂತರ ಮಾಡುವುದೇ ಕೆಲವರ ಗುರಿಯಾಗಿದೆ. ಯಾವುದೋ ಮತಕ್ಕೆ ಹೋದ ಕೂಡಲೇ ಸ್ವರ್ಗ ಸಿಗುವುದಿಲ್ಲ. ಭಗವಂತನ ಅರಿವು ಬಂದಾಗ ಸ್ವರ್ಗ ಸಿಗುತ್ತದೆ. ಕಥೆ ಕೇಳುವುದರಿಂದ ಮೋಕ್ಷ ಆಗುವುದಿಲ್ಲ. ನಮ್ಮ ಧರ್ಮದಲ್ಲಿ ಆರಾಧನೆಗೆ ಅನೇಕ ಅವಕಾಶಗಳು ಇವೆ. ಸನಾತನ ಧರ್ಮದಲ್ಲಿ ಎಲ್ಲವೂ ಇದೆ. ಇದನ್ನು ಅರ್ಥಮಾಡಿಕೊಂಡಾಗ ಮತಾಂತರ ಆಗುವುದಿಲ್ಲ ಮತ್ತು ಮತಾಂತರ ಮಾಡಲು ಯಾರೂ ಬರುವುದಿಲ್ಲ. ಪಾಶ್ಚಾತ್ಯೀಕರಣದಿಂದ ನಾವು ಹೊರ ಬರಬೇಕಿದೆ. ಹಿಂದೂ ಧರ್ಮದ ಹಿರಿಮೆಯ ಬಗ್ಗೆ ಸೂಕ್ತ ಅರಿವು ಮೂಡಿಸಿದರೆ ಯಾವ ಕಾನೂನೂ ಅಗತ್ಯವಿಲ್ಲ.

– ರಾಜು ಖಾರ್ವಿ ಕೊಡೇರಿ

 

Advertisement

Udayavani is now on Telegram. Click here to join our channel and stay updated with the latest news.

Next