ಬೆಂಗಳೂರು: ತ್ರಿಪುರದ ಅರ್ಗತಲಾದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳ ಬಲೆಗೆ ಬಿದ್ದಿರುವ ಜೆಎಂಬಿ ಉಗ್ರ ನಾಜೀರ್ ಶೇಖ್ ಬೆಂಗಳೂರಿನ ಕೆಲವೆಡೆಗಳಲ್ಲಿ ತನ್ನ 4ಕ್ಕೂ ಹೆಚ್ಚು ಸಹಚರ ಜತೆ ವಾಸವಾಗಿದ್ದು, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ವಿಚಾರ ಬಯಲಾಗಿದೆ.
ಜೈಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಅಲಿಯಾಸ್ ಅಯ್ಜುಲ್ ಮೊಂಡಲ್, ನಜರುಲ್ ಇಸ್ಲಾಂ ಅಲಿಯಾಸ್ ಮೊಟಾ ಅನಾಸ್, ಆಸೀಫ್ ಇಕ್ಬಾಲ್, ಆರೀಫ್ ಅಲಿಯಾಸ್ ರಫಿಕುಲ್ ಹಾಗೂ ಇತರರ ಜತೆ ಚಿಕ್ಕಬಾಣಾವಾರ ಹಾಗೂ ಬೆಂಗಳೂರಿನ ಕೆಲವಡೆ ವಾಸವಾಗಿದ್ದ. ಈ ಮೂಲಕ ತನ್ನದೆ ತಂಡವನ್ನು ಕಟ್ಟಿಕೊಂಡು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಾಣಾವಾರ ಕಡೆಗಳಲ್ಲಿ ದರೋಡೆ ಕೃತ್ಯವನ್ನು ಎಸಗುತ್ತಿದ್ದ. ಈ ಮೂಲಕ ತನ್ನ ಸಂಘಟನೆಗೆ ಹಣ ಸರಬರಾಜು ಮಾಡುತ್ತಿದ್ದ ಎಂದು ಎನ್‌ಐಎ ತಿಳಿಸಿದೆ.
ಐಇಡಿ ತಯಾರಿಸುವಲ್ಲಿ ನಿಪುಣ: ಇತ್ತೀಚೆಗಷ್ಟೇ ಚಿಕ್ಕಬಾಣವಾರದಲ್ಲಿ ಬಂಧನಕ್ಕೊಳಗಾದ ಹಬೀಬುರ್ ರೆಹಮಾನ್ ವಿಚಾರಣೆ ಸಂದರ್ಭದಲ್ಲಿ ನಾಜೀರ್ ಶೇಕ್ ಬಗ್ಗೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಎನ್‌ಐಎ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ ನಾಜೀರ್‌ಶೇಕ್, ಸುಧಾರಿತ ಸ್ಫೋಟಕ ಸಾಧನ(ಐಇಡಿ) ತಯಾರಿಸುವಲ್ಲಿ ನಿಪುಣನಾಗಿದ್ದ. ಇದಕ್ಕಾಗಿ ಬೆಂಗಳೂರನ್ನೇ ತನ್ನ ಅಡಗುತಾಣವನ್ನಾಗಿ ಮಾಡಿಕೊಂಡಿದ್ದ. ಬಳಿಕ ಐಇಡಿ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಬೇರೆಡೆ ತಂದು ನಗರದಲ್ಲಿಯೇ ತನ್ನ ಸಹಚರರ ಜತೆ ಸೇರಿ ಸ್ಫೋಟಕವನ್ನು ತಯಾರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಮನೆಯೇ ಬಾಂಬ್ ಕಾರ್ಖಾನೆ: ಕೆಲ ವರ್ಷಗಳ ಹಿಂದೆ ಚಿಕ್ಕಬಾಣವಾರಕ್ಕೆ ಬಂದಿದ್ದ ನಾಜೀರ್ ಶೇಕ್, ಹಬೀಬುರ್ ಹಾಗೂ ಇತರೆ ಶಂಕಿತ ಉಗ್ರರು, ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿಯೇ ಸ್ಫೋಟಕ ವಸ್ತುಗಳನ್ನು ತಂದು ಬಾಂಬ್‌ಗಳನ್ನು ತಯಾರು ಮಾಡಿದ್ದರು. ಈ ಮಧ್ಯೆ ನಾಲ್ಕು ತಿಂಗಳ ಹಿಂದಷ್ಟೇ ಮೂವರು ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದರು. ಈ ಪೈಕಿ ಹಬೀಬುರ್ ಪರಿಚಯಸ್ಥರೊಬ್ಬರ ಸಹಾಯದ ಮೇರೆಗೆ ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದ. ಐವರ ಪೈಕಿ ಇತರರನ್ನು ಕೌಸರ್ ಮತ್ತು ಅಸಾದುಲ್ಲಾ ಎಂದು ಹೇಳಲಾಗಿದೆ. ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದಾಳಿ ಸಂದರ್ಭದಲ್ಲಿ ಮನೆಯಲ್ಲೇ ಬಾಂಬ್‌ಗಳನ್ನು ತಯಾರು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ, ಹೊರರಾಜ್ಯದಲ್ಲಿ ಸ್ಫೋಟಿಸಲು ಸಂಚು: ಶಂಕಿತ ಉಗ್ರರು ನಗರದಲ್ಲಿಯೇ ಬಾಂಬ್‌ಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆದರೆ, ನಿರ್ದಿಷ್ಟ ಸ್ಥಳಗಳು ಯಾವುದು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮನೆಯಲ್ಲಿ ಸಿಕ್ಕಿರುವ ಜೀವಂತ ಬಾಂಬ್‌ಗಳು ಹಾಗೂ ಸ್ಫೋಟಕ ಸಾಮಾಗ್ರಿಗಳು ಭಾರೀ ಪ್ರಮಾಣದಲ್ಲಿರುವುದಿಂದ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ನಡೆದ ಬುದ್ವಾನ್ ಸ್ಫೋಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಮಾರು 20ಕ್ಕೂ ಹೆಚ್ಚು ಜೆಎಂಬಿ ಉಗ್ರಗಾಮಿಗಳು ಪಶ್ಚಿಮ ಬಂಗಾಳದಿಂದ ತಲೆಮರೆಸಿಕೊಂಡಿದ್ದರು. ಎನ್‌ಐಎ ಮೂಲಗಳ ಪ್ರಕಾರ, ಈ ಪೈಕಿ ಏಳಕ್ಕೂ ಹೆಚ್ಚು ಮಂದಿ ಶಂಕಿತ ಉಗ್ರಗಾಮಿಗಳು ರಾಜ್ಯ ಪ್ರವೇಶಿಸಿದ್ದರು. ಬೆಂಗಳೂರು ನಗರ, ಹೊರವಲಯದ ಚಿಕ್ಕಬಾಣಾವರ, ರಾಮನಗರ ಹಾಗೂ ಇತರೆಡೆ ತಲೆಮರೆಸಿಕೊಂಡಿದ್ದ ಶಂಕಿತರು, ತಳ್ಳುಗಾಡಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಈ ಮಧ್ಯೆ ಆರ್ಥಿಕ ಸಂಕಷ್ಟದಲ್ಲಿದ್ದ ಜೆಎಂಬಿ ಸಂಘಟನೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿನ ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ವ್ಯಾಪಾರಿಗಳ ಸೋಗಿನಲ್ಲಿ ಹೋಗಿ ದರೋಡೆ ಮಾಡುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ದಳದ ಮೂಲಗಳು ತಿಳಿಸಿವೆ.
ಮಹಜರ್‌ಗಾಗಿ ಕರೆ ತಂದ ಎನ್‌ಐಎ: ಆರೋಪಿ ನಾಜೀರ್ ಶೇಕ್‌ನನ್ನು ಬೆಂಗಳೂರಿಗೆ ಕರೆ ತಂದಿರುವ ಎನ್‌ಐಎ ಅಧಿಕಾರಿಗಳು ಈ ಹಿಂದೆ ವಾಸವಾಗಿದ್ದ ಚಿಕ್ಕಬಾಣಾವಾರದ ನಿವಾಸಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಲಿದ್ದಾರೆ. ಜುಲೈ 7ರಂದು ಹಬೀಬುರ್ ವಾಸವಾಗಿದ್ದ ಚಿಕ್ಕಬಾಣಾವಾರದ ಮನೆಯಲ್ಲಿ ಐದು ಗ್ರೆನೆಡ್, ಮೂರೂ ಫ್ಯಾಬ್ರಿಕೇಟೆಡ್ ಗ್ರೆನೆಡ್ ಕ್ಯಾಪ್, ಸರ್ಕಿಟ್ ಐಇಡಿ, ಒಂದು ಟೈಮರ್, ಎರಡು ರಾಕೆಟ್‌ಗಳು, ಒಂದು ಬಾಡಿ ಜಾಕೆಟ್, 9 ಎಂಎಂ ಪಿಸ್ತೂಲ್, ಒಂದು ಜೀವಂತ ಗುಂಡುಗಳು, ಏರ್‌ಗನ್, ಸ್ಫೋಟಕ ಪೌಡರ್ ಹಾಗೂ ಸ್ಫೋಟಕ ವಸ್ತುಗಳನ್ನು ತಯಾರು ಮಾಡಲು ತಂದಿದ್ದ ಕಚ್ಚಾ ವಸ್ತುಗಳು ಪತ್ತೆಯಾಗಿದ್ದವು.