Advertisement

ಬಾತ್‌ಟಬ್‌ಗೆ ಬಿದ್ದು ನಟಿ ಶ್ರೀದೇವಿ ಸಾವು

08:55 AM Feb 27, 2018 | Harsha Rao |

ಹೊಸದಿಲ್ಲಿ: ಶನಿವಾರ ದುಬಾೖಯಲ್ಲಿ ನಿಧನ ಹೊಂದಿದ ನಟಿ ಶ್ರೀದೇವಿ ಅವರ ಸಾವಿನ ಪ್ರಕರಣ ಸೋಮವಾರ ಕುತೂಹಲಕಾರಿ ತಿರುವು ಪಡೆದಿದೆ. ಅವರ ಮರಣೋತ್ತರ ಪರೀಕ್ಷೆ ನಡೆಸಿದ ದುಬಾೖ ವಿಧಿವಿಜ್ಞಾನ ಪ್ರಯೋಗಾಲಯವು, ಸಾವು ಹೃದಯ ಸ್ತಂಭನದಿಂದಲ್ಲ; ಬದಲಾಗಿ ಹೊಟೇಲ್‌ ರೂಮಿನ ಬಚ್ಚಲು ಮನೆಯ ಬಾತ್‌ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿದ್ದರಿಂದ ಆಗಿದೆ ಎಂದು ಹೇಳಿದೆ.

Advertisement

ಇಡೀ ಪ್ರಕರಣವನ್ನು ದುಬಾೖ ಪೊಲೀಸ್‌ ಇಲಾಖೆಯು, ಇಂಥ ಪ್ರಕರಣಗಳ ವಿಚಾರಣೆ ನಡೆಸುವಂಥ ದುಬಾೖ ಪಬ್ಲಿಕ್‌ ಪ್ರಾಸಿಕ್ಯೂಶನ್‌ಗೆ ಒಪ್ಪಿಸಿದೆ. ಹಾಗಾಗಿ ಸರಕಾರಿ ವಕೀಲರಿಂದ ವಿವಿಧ ರೀತಿಯ ಅನುಮತಿಗಳನ್ನು ಪಡೆಯುವಲ್ಲೇ ಬೋನಿ ಕಪೂರ್‌, ಅವರ ಸಂಬಂಧಿಕರು ದಿನವಿಡೀ ನಿರತರಾಗಬೇಕಾಯಿತು.

ಮರಣೋತ್ತರ ಪರೀûಾ ವರದಿ: ಸೋಮವಾರ ಸಂಜೆ ವೇಳೆಗೆ ಶ್ರೀದೇವಿ ಅವರ ಮರಣೋತ್ತರ ಪರೀûಾ ವರದಿಯನ್ನು ದುಬಾೖಯ ವಿಧಿವಿಜ್ಞಾನ ಪ್ರಯೋ ಗಾಲಯ ಬಿಡುಗಡೆ ಮಾಡಿತು. ನೀರಿನಲ್ಲಿ ಮುಳುಗಿದ್ದರಿಂದ ಶ್ರೀದೇವಿ ಬೋನಿ ಕಪೂರ್‌ ಅಯ್ಯಪ್ಪನ್‌ ಅವರ ಸಾವು ಸಂಭವಿಸಿದೆ ಎಂದು ತಿಳಿಸಿದೆ. ಅಲ್ಲದೆ ಸಾವಿನ ಹಿಂದೆ ಯಾವುದೇ ಕ್ರಿಮಿನಲ್‌ ಉದ್ದೇಶವಿಲ್ಲ ಎಂದು ಉಲ್ಲೇಖೀಸಲಾಗಿತ್ತು.

ಅಷ್ಟೇ ಅಲ್ಲದೆ, ಶ್ರೀದೇವಿಯವರ ರಕ್ತದಲ್ಲಿ ಆಲ್ಕೋಹಾಲ್‌ನ ಅಂಶ ಇತ್ತೆಂದೂ ತಿಳಿಸಲಾಗಿದೆ. ಇತ್ತ, ಭಾರತದಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಬೋನಿ ಕಪೂರ್‌ ಆಪ್ತ ಹಾಗೂ ರಾಜಕಾರಣಿ ಅಮರ್‌ ಸಿಂಗ್‌, “ಶ್ರೀದೇವಿ ಆಲ್ಕೋಹಾಲ್‌ ಸೇವಿಸುತ್ತಿರಲಿಲ್ಲ’ ಎಂದಿದ್ದು, ಶೀಘ್ರವೇ ಅವರ ಪಾರ್ಥಿವ ಶರೀರ ಭಾರತ ತಲುಪುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಬೋನಿ ಕಪೂರ್‌ ಹೇಳಿಕೆ
ಪೊಲೀಸರಿಗೆ ಬೋನಿ ಕಪೂರ್‌ ನೀಡಿರುವ ಹೇಳಿಕೆ ಪ್ರಕಾರ, ದುಬಾೖಯಲ್ಲಿ ತಮ್ಮ ಸಂಬಂಧಿ ಮದುವೆಯ ಅನಂತರ ಬೋನಿ ಕಪೂರ್‌ ಹಾಗೂ ಶ್ರೀದೇವಿಯವರ ಕಿರಿಯ ಮಗಳು ಖುಷಿ ಶನಿವಾರ ಭಾರತಕ್ಕೆ ವಾಪಸಾಗಿದ್ದರು. ಆದರೆ ಶ್ರೀದೇವಿ ತಮ್ಮ ಕುಟುಂಬ ಉಳಿದಿದ್ದ ಜುಮೈರಾ ಎಮಿರೇಟ್ಸ್‌ ಟವರ್ಸ್‌ ಹೊಟೇಲ್‌ನಲ್ಲೇ ಉಳಿದಿದ್ದರು. ಆದರೆ ಶನಿವಾರ ಸಂಜೆ 5.30ರ ಸುಮಾರಿಗೆ ಮತ್ತೆ ದುಬೈಗೆ ಹಿಂದಿರುಗಿದ ಬೋನಿ, ಶ್ರೀದೇವಿ ಅವರಿಗೆ ಅಚ್ಚರಿಯ ದರುಶನ ನೀಡಿದ್ದರು.

Advertisement

ಸುಮಾರು 15 ನಿಮಿಷ ಮಾತುಕತೆ ಅನಂತರ, ಶ್ರೀದೇವಿ ಅವರನ್ನು ರಾತ್ರಿ ಭೋಜನಕ್ಕೆ  ಆಹ್ವಾನಿಸಿದರು. ಹಾಗಾಗಿ ಸಿದ್ಧಗೊಳ್ಳಲು ಬಾತ್‌ರೂಮಿಗೆ ಹೋದ ಶ್ರೀದೇವಿ ಎಷ್ಟು ಹೊತ್ತಾದರೂ ಹೊರಬರಲಿಲ್ಲ. ಬಾಗಿಲು ಬಡಿದರೂ ಸ್ಪಂದಿಸಿಲ್ಲ. ಆಗ ಬಾಗಿಲು ಒಡೆದು ಒಳ ಹೋದ ಬೋನಿ ಅವರಿಗೆ ಬಾತ್‌ಟಬ್‌ನ ನೀರಿನಲ್ಲಿ ಮುಳುಗಿದ್ದ ಶ್ರೀದೇವಿ ಅವರ ನಿಶ್ಚಲ ದೇಹ ಕಂಡಿತು. ತತ್‌ಕ್ಷಣವೇ ದುಬಾೖಯಲ್ಲಿದ್ದ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ಅವರನ್ನು ಹೊಟೇಲಿಗೆ ಕರೆಯಿಸಿಕೊಂಡ ಬೋನಿ, ಅನಂತರ ಶ್ರೀದೇವಿಯವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಾಗಿತ್ತು.

ಪೊಲೀಸರ 3 ಪ್ರಶ್ನೆಗಳು
ಬೋನಿ ಕಪೂರ್‌ ನೀಡಿರುವ ಹೇಳಿಕೆ  ಪೊಲೀಸರಲ್ಲಿ 3 ಪ್ರಶ್ನೆಗಳನ್ನು ಹುಟ್ಟು ಹಾಕಿದವು.

– ಶ್ರೀದೇವಿ ಸಾವನ್ನು ಶನಿವಾರ ಸಂಜೆ 6.30ರ ಸುಮಾರಿಗೆ (ದುಬಾೖ ಕಾಲಮಾನ) ನೋಡಿರುವ ಬೋನಿ, ಪೊಲೀಸರಿಗೆ ರಾತ್ರಿ 9.30ರ ವರೆಗೆ ತಿಳಿಸದೇ ಇದ್ದಿದ್ದು ಏಕೆ?

– ಶ್ರೀದೇವಿ ಸ್ಥಿತಿ ಕಂಡ ಕೂಡಲೇ ಮೊದಲು ಹೊಟೇಲ್‌ ಸಿಬಂದಿಗೆ ತಿಳಿಸಿ ಅವರ ಸಹಾಯದಿಂದ ಶ್ರೀದೇವಿ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿಸಲಿಲ್ಲ  ಏಕೆ?

– ತಮ್ಮ ಸ್ನೇಹಿತ ಹೊಟೇಲ್‌ಗೆ ಬರುವವರೆಗೂ ಕಾದಿದ್ದು, ಆತನ ಬಳಿ ಮಾತುಕತೆ ನಡೆಸಿದ ಬಳಿಕವೇ ಪೊಲೀಸರಿಗೆ ತಿಳಿಸಿದ್ದು ಯಾಕೆ?

ಈ ಪ್ರಶ್ನೆಗಳು ಹುಟ್ಟಿಕೊಂಡ ಕಾರಣದಿಂದಾಗಿ ಪೊಲೀಸರು ಬೋನಿ ಕಪೂರ್‌ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಶ್ರೀದೇವಿ ಮೃತರಾಗುವುದಕ್ಕಿಂತ ಮುಂಚಿನ 42 ಗಂಟೆಗಳಲ್ಲಿ ಅವರಿಗೆ ಬಂದಿರುವ ಮೊಬೈಲ್‌ ಕರೆಗಳ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next